ADVERTISEMENT

ಬಿಜೆಪಿ ಸೇರಲು ಯತ್ನಿಸಿದ್ದ ಮಾಗಡಿ ಶಾಸಕ: ಎಚ್‌.ಸಿ. ಬಾಲಕೃಷ್ಣ ಸುಳಿವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:44 IST
Last Updated 9 ಜನವರಿ 2023, 19:44 IST
ಎಚ್‌.ಸಿ. ಬಾಲಕೃಷ್ಣ
ಎಚ್‌.ಸಿ. ಬಾಲಕೃಷ್ಣ   

ಮಾಗಡಿ: ‘ಮಾಗಡಿ ಜೆಡಿಎಸ್‌ ಶಾಸಕ ಎ.ಮಂಜುನಾಥ್‌ ಅವರು ಬಿಜೆಪಿ ಸೇರುವ ಪ್ರಯತ್ನ ನಡೆಸಿದ್ದರು. ಅದಕ್ಕೆ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಮಧ್ಯಸ್ಥಿಕೆ ವಹಿಸಿದ್ದರು’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಬಾಲಕೃಷ್ಣ ಹೇಳಿದ್ದಾರೆ.

ಸಿದ್ದಾರೂಢ ಆಶ್ರಮದಲ್ಲಿ ಸೋಮವಾರ ನಿರ್ವಾಣಿ ಭಗವತಿ ಮತ್ತು ಅಣ್ಣಮ್ಮದೇವಿ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ‘ಯೋಗೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಮಾಗಡಿ ಶಾಸಕರು ವಿಧಾನಸಭೆಯಲ್ಲಿ ಒಂದು ದಿನ ಓಡಾಡಿದ್ದರು. ಎಚ್‌.ಸಿ. ಬಾಲಕೃಷ್ಣ ಅವರನ್ನೂ ಬಿಜೆಪಿಗೆ ಆಹ್ವಾನಿಸಿರಿ. ಅವರ ಜೊತೆಯಲ್ಲಿಯೇ ನಾನೂ ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದರು’ ಎಂದು ಹೇಳಿದರು.

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹೆದರಿಕೊಂಡು ಅವರು ಇನ್ನೂ ಜೆಡಿಎಸ್‌ನಲ್ಲಿ ಇದ್ದಾರೆ. ನನ್ನಷ್ಟು ಅವರಿಗೆ ಧೈರ್ಯ ಇಲ್ಲ. ಆದರೆ, ಸಚಿವ ಅಶ್ವತ್ಥನಾರಾಯಣ ಜೊತೆ ಅವರು ಯಾವಾಗ ಬಿಜೆಪಿಗೆ ಕಾಲು ಕೀಳುತ್ತಾರೋ ಕಾದುನೋಡಿ’ ಎಂದು ಬಾಲಕೃಷ್ಣ ಹೇಳಿದ್ದಾರೆ.

ADVERTISEMENT

ಜೆಡಿಎಸ್‌ ತೊರೆಯಲ್ಲ: ಮಂಜುನಾಥ್‌ ಸ್ಪಷ್ಟನೆ
ಬಾಲಕೃಷ್ಣ ಅವರ ಹೇಳಿಕೆ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ಕರೆದ ಶಾಸಕ ಎ. ಮಂಜುನಾಥ್‌ ಅವರು, ‘ಜೆಡಿಎಸ್‌ ನನಗೆ ಎಲ್ಲವನ್ನೂ ನೀಡಿದೆ. ಹೀಗಿರುವಾಗ ಜೆಡಿಎಸ್‌ ಬಿಟ್ಟು ಬಿಜೆಪಿ ಏಕೆ ಸೇರಲಿ. ನಾನು ದೇವೇಗೌಡರ ಕುಟುಂಬದ ನಿಯತ್ತಿನ ನಾಯಿ’ ಎಂದು ಸಮಜಾಯಿಷಿ ನೀಡಿದರು.

ಸುದ್ದಿಗೋಷ್ಠಿಯುದ್ದಕ್ಕೂ ಎಚ್.ಸಿ. ಬಾಲಕೃಷ್ಣ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಅವರು, ‘ಎಚ್‌.ಸಿ. ಬಾಲಕೃಷ್ಣ ಅವರೇ ಸಿ.ಪಿ. ಯೋಗೇಶ್ವರ್ ಅವರನ್ನು ನನ್ನ ಬಳಿ ಕಳುಹಿಸಿ ಗಾಳ ಹಾಕಿದ್ದರು. ನಾನು ದೇವೇಗೌಡ ಅವರು ಬೆಳೆಸಿದ ತಿಮಿಂಗಿಲ. ಅಷ್ಟು ಸುಲಭವಾಗಿ ಯಾರ ಗಾಳಕ್ಕೂ ಬೀಳುವ ಮೀನು ಅಲ್ಲ’ ಎಂದು ತಿರುಗೇಟು ನೀಡಿದರು.

‘ನನ್ನನ್ನು ಯೋಗೇಶ್ವರ್‌ ವಿಧಾನಸೌಧಕ್ಕೆ ಕರೆಸಿದ್ದು ನಿಜ. ಆದರೆ, ನಾನು ಕೂಡಲೇ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ವಿಷಯ ತಿಳಿಸಿದ್ದೆ. ಸಚಿವ ಡಾ.ಅಶ್ವತ್ಥನಾರಾಯಣ ನನ್ನನ್ನು ಎಂದಿಗೂ ಬಿಜೆಪಿ ಸೇರುವಂತೆ ಕರೆದಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ ಟಿಕೆಟ್‌ ಕೇಳಿದ ಪಕ್ಷೇತರ ಶಾಸಕ ನಾಗೇಶ್‌
ಬೆಂಗಳೂರು:
ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ,ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ನಾಗೇಶ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಭೇಟಿ ಮಾಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ನಾಗೇಶ್‌, ‘‌ಮಂಗಳವಾರ ಬರುವಂತೆ ಶಿವಕುಮಾರ್ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಕಣಕ್ಕಿಳಿಯಬೇಕೆಂದು ನಿರ್ಧರಿಸಲು ಸಮಯವಿದೆ. ಸದ್ಯ ಮುಳಬಾಗಿಲು ಕ್ಷೇತ್ರದಿಂದಲೇ ಕಾಂಗ್ರೆಸ್ ಟಿಕೆಟ್ ಕೇಳಲು ಬಂದಿದ್ದೆ‌’ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ನಮ್ಮ ಪಕ್ಷದಲ್ಲಿ ಇದ್ದವರು. ಅವರ ಜೊತೆ ಮಾತನಾಡಲು ಹಲವು ವಿಚಾರಗಳಿವೆ. ಮುಂದೆ ತಿಳಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.