
ಮಾಗಡಿ: ಪಕ್ಷಕ್ಕಾಗಿ ಜೈಲಿಗೆ ಹೋದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಶಾಸಕ ಬಾಲಕೃಷ್ಣ ಒತ್ತಾಯಿಸಿದರು.
ತಾಲ್ಲೂಕಿನ ಚಕ್ರಬಾವಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ವಿಚಾರವಾಗಿ ನಾವು ಹೈಕಮಾಂಡ್ ಬಳಿ ಕೇಳಿ ಸಾಕಾಗಿದೆ. ನಮ್ಮ ಜಿಲ್ಲೆಯ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ. ಡಿ.ಕೆ. ಶಿವಕುಮಾರ್ ಹುಟ್ಟು ಕಾಂಗ್ರೆಸ್ಸಿಗರಾಗಿದ್ದು, ಪಕ್ಷಕ್ಕಾಗಿ ಹಲವು ತ್ಯಾಗ ಮಾಡಿದ್ದಾರೆ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾದ ಬಗ್ಗೆ ನನಗೆ ಮಾಹಿತಿ ಇಲ್ಲ. ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
ಮಾರ್ಚ್ 4ರಂದು ಚಕ್ರಬಾವಿ ಗ್ರಾಮದಲ್ಲಿ ವೈಜಿ ಗುಡ್ಡ ಜಲಾಶಯದಿಂದ ಕೆರೆಗಳನ್ನು ತುಂಬಿಸುವ ಯೋಜನೆಗೆ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಚಕ್ರಬಾವಿ, ಅಗಲಕೋಟೆ, ಮತ್ತಿಕೆರೆ ನನ್ನ ತವರು ಗ್ರಾಮಗಳಾಗಿದ್ದು ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದರು.
ಜನರ ತೀರ್ಪು ಸ್ವಾಗತಿಸುವೆ: 30 ವರ್ಷಗಳ ನಂತರ ಚಕ್ರಬಾವಿ ವಿಎಸ್ಎಸ್ಎನ್ ಚುನಾವಣೆ ನಡೆಯುತ್ತಿದೆ. ಸಹೋದರರ ರೀತಿ ಸೊಸೈಟಿ ನಡೆಸಿಕೊಂಡು ಬರಲಾಗಿತ್ತು. ಮಾಜಿ ಶಾಸಕರು ಈ ಬಾರಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆಗೆ ಮುಂದಾಗಿದ್ದಾರೆ. ಜನರ ತೀರ್ಪಿಗೆ ತಲೆ ಬಾಗುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.