ADVERTISEMENT

ಮಾಗಡಿ | ಮಧ್ಯರಾತ್ರಿ ಬಾಲಕಿಯನ್ನು ಅಪಹರಿಸಿ ಅನುಚಿತ ವರ್ತನೆ; ಯೂಟ್ಯೂಬರ್ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 15:34 IST
Last Updated 1 ಜನವರಿ 2026, 15:34 IST
   

ಮಾಗಡಿ: ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ನಸುಕಿನಲ್ಲಿ ಮನೆಗೆ ಹೋಗುತ್ತಿದ್ದ 17 ವರ್ಷದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ, ಮಾಗಡಿ ಠಾಣೆ ಪೊಲೀಸರು ಯುಟ್ಯೂಬ್ ನ್ಯೂಸ್‌ ಚಾನೆಲ್‌ ನಡೆಸುತ್ತಿರುವ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಆರ್‌ಜೆ ಡಿಜಿಟಲ್ ನ್ಯೂಸ್‌ ಯೂಟ್ಯೂಬ್ ಚಾನೆಲ್‌ನ ರವಿ ಜಮುನಾ ಬಂಧಿತ. ಇನ್ನಿಬ್ಬರು ಆರೋಪಿಗಳಾದ ರವಿ ಸ್ನೇಹಿತ ಹಾಗೂ ಮಾಗಡಿಯ ವೆಂಕಟೇಶ್‌ ಕೃತ್ಯದಲ್ಲಿ ವಹಿಸಿರುವ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿ ಚಿಕ್ಕಮ್ಮನ ಮನೆಯಲ್ಲಿ ಅವರ ಕುಟುಂಬ ಹೊಸ ವರ್ಷಾಚರಣೆಗೆ ಸೇರಿತ್ತು. ಅದೇ ಗ್ರಾಮದಲ್ಲಿ ಆರೋಪಿ ವೆಂಕಟೇಶ್‌ಗೆ ಸೇರಿದ್ದ ತೋಟದ ಮನೆಯಲ್ಲಿ ರವಿ ಸೇರಿದಂತೆ ಹಲವು ಸ್ನೇಹಿತರು ಹೊಸ ವರ್ಷದ ಪಾರ್ಟಿಗೆ ಸೇರಿದ್ದರು. ಮನೆಯಲ್ಲಿ ಸಂಭ್ರಮಾಚರಣೆ ಮುಗಿದ ಬಳಿಕ ಬಾಲಕಿ, ರಾತ್ರಿ 2 ಗಂಟೆ ಸುಮಾರಿಗೆ ತನ್ನ ಮನೆಯತ್ತ ಹೋಗುತ್ತಿದ್ದಳು ಎಂದು ಬಾಲಕಿ ತಂದೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ADVERTISEMENT

ಇದೇ ವೇಳೆ ಪಾರ್ಟಿ ಮುಗಿಸಿಕೊಂಡು ರವಿ ಹಾಗೂ ಆತನ ಸ್ನೇಹಿತ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬಂದಿದ್ದಾರೆ. ಆಗ ಎದುರಿಗೆ ಸಿಕ್ಕ ಬಾಲಕಿಯನ್ನು ‘ವೆಂಕಟೇಶ್ ತೋಟಕ್ಕೆ ಹೋಗುವ ದಾರಿ ಯಾವುದು’ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ ಮನೆಯತ್ತ ಹೆಜ್ಜೆ ಹಾಕಿದ ಬಾಲಕಿಯನ್ನು ಆರೋಪಿಗಳು ಹಿಂಬಾಲಿಸಿ, ಏಕಾಏಕಿ ಕಾರಿನೊಳಕ್ಕೆ ಎಳೆದುಕೊಂಡಿದ್ದಾರೆ. ಮಾರ್ಗ ಮಧ್ಯೆ ರವಿ ಸ್ನೇಹಿತ ಇಳಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮೈ ಮುಟ್ಟಿ, ಹಲ್ಲೆ: ಬಾಲಕಿ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿರುವ ರವಿ, ಪ್ರತಿರೋಧ ತೋರಿದ ಬಾಲಕಿ ಮೇಲೆ ಹಲ್ಲೆ ನಡೆಸಿ ತನ್ನೊಂದಿಗೆ ಸಹಕರಿಸುವಂತೆ ಬೆದರಿಸಿದ್ದಾನೆ. ಮಾಗಡಿಗೆ ಕಾರು ಚಲಾಯಿಸಿ ಮಾರ್ಗ ಮಧ್ಯೆ ನಿಲ್ಲಿಸಿ ಕೆಳಕ್ಕಿಳಿದಿದ್ದಾನೆ. ಆಗ ಕಾರಿನಲ್ಲಿದ್ದ ರವಿ ಮೊಬೈಲ್‌ನಿಂದ ಬಾಲಕಿ ತನ್ನ ಅಣ್ಣನಿಗೆ ಕರೆ ಮಾಡಿ ಘಟನೆ ಹಾಗೂ ತಾನಿರುವ ಜಾಗದ ಮಾಹಿತಿ ನೀಡಿದ್ದಾಳೆ.

ಇತ್ತ ಚಿಕ್ಕಮ್ಮನ ಮನೆಯಿಂದ ವಾಪಸ್ ಬಾರದೆ ನಾಪತ್ತೆಯಾಗಿದ್ದ ಬಾಲಕಿಯನ್ನು ಹುಡುಕಾಡಿ ಆತಂಕದಲ್ಲಿದ್ದ ಕುಟುಂಬದವರು, ಕೂಡಲೇ ಬಾಲಕಿ ಹೇಳಿದ ಜಾಗಕ್ಕೆ ಕಾರಿನಲ್ಲಿ ಹೋಗಿ ಬಾಲಕಿಯನ್ನು ರಕ್ಷಿಸಿ ರವಿಯನ್ನು ಹಿಡಿದಿದ್ದಾರೆ. ಅಲ್ಲದೆ, ಕೃತ್ಯಕ್ಕೆ ವೆಂಕಟೇಶ್ ಕುಮ್ಮಕ್ಕು ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ದೂರಿನ ಮೇರೆಗೆ ರವಿ, ಆತನ ಸ್ನೇಹಿತ ಹಾಗೂ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ರವಿಯ‌ನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸದ್ಯ ಯೂಟ್ಯೂಬರ್‌ ಒಬ್ಬನನ್ನು ಬಂಧಿಸಲಾಗಿದೆ. ಎಲ್ಲಾ ಆಯಾಮದಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ
– ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.