ಮಾಗಡಿ: ತಾಲ್ಲೂಕಿನಲ್ಲಿರುವ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಸುಮಾರು 26 ಶಾಲಾ ಕಟ್ಟಡಗಳು ದುರಸ್ತಿಗೆ ಕಾದಿವೆ. ಈ ಪೈಕಿ, ಕೆಲ ಕಟ್ಟಡಗಳ ಕೊಠಡಿಗಳು ತರಗತಿ ಸಹ ನಡೆಸಲಾಗದ ಅಧೋಗತಿ ತಲುಪಿದ್ದು, ಹೊಸ ಕೊಠಡಿಗಳ ನಿರೀಕ್ಷೆಯಲ್ಲಿವೆ. ದುರಸ್ತಿಗೂ ನಿಲುಕದ ಕೆಲ ಕಟ್ಟಡಗಳು ಸಹ ಇವೆ.
ಅಂದಹಾಗೆ, ಈ ಕಟ್ಟಡಗಳು ವರ್ಷಗಳಿಂದ ಇದೇ ದುಃಸ್ಥಿತಿಯಲ್ಲಿವೆ. ಪ್ರತಿ ವರ್ಷ ಶಿಕ್ಷಣ ಇಲಾಖೆಯವರು ದುರಸ್ತಿಗೆ ಹಾಗೂ ಹೊಸ ಕೊಠಡಿಗೆ ಕ್ರಿಯಾಯೋಜನೆ ತಯಾರಿಸಿ ಅದರ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸುತ್ತಲೇ ಬಂದಿದ್ದಾರೆ. ವರ್ಷವಾದರೂ ಅನುದಾನ ಬಾರದಿದ್ದಾಗ ವರದಿ ನನೆಗುದಿಗೆ ಬೀಳುತ್ತಲೇ ಬಂದಿದೆ.
₹2.68 ಕೋಟಿ ಮೊತ್ತದ ಕ್ರಿಯಾಯೋಜನೆ:
‘ಮಾಗಡಿ ಬ್ಲಾಕ್ ವ್ಯಾಪ್ತಿಗೆ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು (ಜಿಎಎಚ್‌ಪಿಎಸ್), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು (ಜಿಎಲ್‌ಪಿಎಸ್), ಸರ್ಕಾರಿ ಪ್ರೌಢಶಾಲೆಗಳು (ಜಿಎಚ್ಎಸ್) ಹಾಗೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ (ಜಿಯುಎಚ್‌ಪಿಎಸ್) ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರಿಶೀಲನೆ ನಡೆಸಿರುವ ಶಾಲೆಗಳ ಪೈಕಿ 20 ಶಾಲೆಗಳನ್ನು ವಿವಿಧ ರೀತಿಯ ದುರಸ್ತಿ ಕಾರ್ಯಗಳಿಗೆ ಗುರುತಿಸಲಾಗಿದೆ. ಉಳಿದ 6 ಶಾಲೆಗಳಿಗೆ ಹೊಸ ಕೊಠಡಿ ನಿರ್ಮಿಸಬೇಕಿದೆ. ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ಜಾಗ ಲಭ್ಯತೆ ಹಾಗೂ ಕಾಮಗಾರಿಗೆ ಅಗತ್ಯವಿರುವ ಮೊತ್ತವನ್ನು ಅಂದಾಜಿಸಿ ಪ್ರಸಕ್ತ ಸಾಲಿನಲ್ಲಿ ₹2.68 ಕೋಟಿ ಮೊತ್ತದ ಕ್ರಿಯಾಯೋಜನೆ ತಯಾರಿಸಿ ಇಲಾಖೆಗೆ ಕಳಿಸಿ ಕೊಡಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿ ಶುರುವಾಗಲಿದೆ’ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಹೆಚ್ಚು ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿಗೆ ಮೊದಲ ಆದ್ಯತೆ ನೀಡಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ, ಮಾಗಡಿ
‘ತಾಲ್ಲೂಕಿನ ಬಹುತೇಕ ಶಾಲೆಗಳು ಒಂದಲ್ಲ ಒಂದು ರೀತಿಯ ದುರಸ್ತಿಯಾಗಬೇಕಿದೆ. ಸದ್ಯ ಹಂತ ಹಂತವಾಗಿ ಹೆಚ್ಚು ದುರಸ್ತಿಯ ಅಗತ್ಯವಿರುವ ಕಟ್ಟಡಗಳನ್ನು ಆದ್ಯತೆ ಮೇರೆಗೆ ದುರಸ್ತಿ ಮಾಡಲಾಗುತ್ತಿದೆ. ಇಲಾಖೆ ತಯಾರಿಸಿರುವ ಕ್ರಿಯಾಯೋಜನೆ ವರದಿಯನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಗಮನಕ್ಕೂ ತಂದು, ಅವರಿಂದ ಒಪ್ಪಿಗೆ ಪಡೆದು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ’ ಎಂದರು.
ಹೊಸ ಕಟ್ಟಡದ ಪ್ರಸ್ತಾಪವಿಲ್ಲ:
ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಾಲ್ಲೂಕು ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಅವರೊಂದಿಗೆ ಪ್ರತಿ ಶಾಲೆಗೆ ಭೇಟಿ ನೀಡಿ, ಶಾಲಾ ಕಟ್ಟಡ ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮೊತ್ತವನ್ನು ಅಂದಾಜಿಸಿ ವರದಿ ಸಿದ್ದಪಡಿಸಿದ್ದಾರೆ. ಆದರೆ, ತಾಲ್ಲೂಕಿನಲ್ಲಿರುವ ಅತ್ಯಂತ ಹಳೆಯದಾಗಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಅಂಶ ಮಾತ್ರ ಈ ವರದಿಯಲ್ಲಿಲ್ಲ.
ಚಾವಣಿ ಕುಸಿತ, ಕಿಟಕಿ ಮತ್ತು ಬಾಗಿಲು ಮುರಿದಿರುವುದು, ಶೀಟು ಒಡೆದಿರುವುದು, ಹೆಂಚು ಬಿದ್ದಿರುವುದು, ಸೀಲಿಂಗ್ ಕಿತ್ತಿರುವುದು, ಎಲೆಕ್ಟ್ರಿಕ್ ದುರಸ್ತಿ, ಗೋಡೆ ಬಿರುಕು, ಪೇಂಟಿಂಗ್, ಗೋಡೆ ಶಿಥಿಲವಾಗಿರುವುದು, ಕಾರಿಡಾರ್ ದುರಸ್ತಿ, ಶೌಚಾಲಯ ದುರಸ್ತಿ ಸೇರಿದಂತೆ ಶಾಲಾ ಕೊಠಡಿಗಳಲ್ಲಿ ಆಗಬೇಕಾದ ವಿವಿಧ ರೀತಿಯ ದುರಸ್ತಿ ಕೆಲಸಗಳನ್ನು ಪಟ್ಟಿ ಮಾಡಿ, ಅದಕ್ಕೆ ತಗುಲುವ ಅಂದಾಜು ವೆಚ್ಚದ ಮಾಹಿತಿಯನ್ನು ವರದಿಯಲ್ಲಿ ತಿಳಿಸಲಾಗಿದೆ.
ಅಂಕಿಅಂಶ...
₹1.15 ಕೋಟಿ 20 ಶಾಲೆಗಳ 32 ಕೊಠಡಿ ದುರಸ್ತಿಗೆ ಅಗತ್ಯವಿರುವ ಮೊತ್ತ
616 ಈ ಶಾಲೆಗಳಲ್ಲಿರುವ ಮಕ್ಕಳು
₹1.53 ಕೋಟಿ 6 ಶಾಲೆಗಳಲ್ಲಿ ಹೊಸ ಕೊಠಡಿ ನಿರ್ಮಾಣಕ್ಕೆ ಬೇಕಾದ ಮೊತ್ತ
476 ಈ ಶಾಲೆಗಳಲ್ಲಿರುವ ಮಕ್ಕಳು
‘ಅನುದಾನ ಬಿಡುಗಡೆಯಾಗುತ್ತಿಲ್ಲ’
‘ಸರ್ಕಾರ ಶಾಲಾ ಕಟ್ಟಡಗಳ ದುರಸ್ತಿಗೆ ಹಣ ಬಿಡುಗಡೆ ಮಾಡದ ಪರಿಣಾಮ ಹಲವು ಶಾಲೆಗಳು ಶಿಥಿಲವಾಗಿ ಹಲವು ಸಮಸ್ಯೆಗಳು ಉದ್ಭವವಾಗಿವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದು ವರದಿ ಸಹ ಕಳಿಸಿ ಕೊಡಲಾಗಿದೆ. ನರೇಗಾ ಯೋಜನೆ ಮೂಲಕ ಕಟ್ಟಡ ದುರಸ್ತಿ ಮಾಡಿಸಿ ಎಂದು ಗ್ರಾಮ ಪಂಚಾಯಿತಿಯವರು ಸಹ ಒತ್ತಾಯಿಸಿದ್ದಾರೆ. ನಮ್ಮ ವ್ಯಾಪ್ತಿಗೆ ನರೇಗಾ ಯೋಜನೆ ಬಾರದ ಕಾರಣ ಸಮಸ್ಯೆಯಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಕಟ್ಟಡಗಳಿಗೆ ದುರಸ್ತಿ ಭಾಗ್ಯ ಸಿಗಲಿದೆ. ಇಲ್ಲದಿದ್ದರೆ ಶಿಕ್ಷಕರು ಮತ್ತು ಮಕ್ಕಳು ಶಿಥಿಲ ಕಟ್ಟಡದಲ್ಲಿ ಆತಂಕದಲ್ಲೇ ಕಳೆಯಬೇಕಾಗುತ್ತದೆ’ ಎಂದು ಮಾಗಡಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.