ADVERTISEMENT

ಬೆಂಗಳೂರು–ಮಾಗಡಿ | ಹೊಸ ಸೇತುವೆ ಸಾರ್ವಜನಿಕರ ಸೇವೆಗೆ ಲಭ್ಯ

ತಿಪ್ಪಗೊಂಡನಹಳ್ಳಿ: ನಾಲ್ಕು ಪಥದ ಸೇತುವೆ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:23 IST
Last Updated 13 ಫೆಬ್ರುವರಿ 2026, 6:23 IST
ಮಾಗಡಿ–ಬೆಂಗಳೂರು ಮುಖ್ಯ ರಸ್ತೆಯ ತಿಪ್ಪಗೊಂಡನಹಳ್ಳಿ ಬಳಿ ಹೊಸ ಸೇತುವೆ ಸಾರ್ವಜನಿಕರ ಸೇವೆಗೆ ಮುಕ್ತವಾಗಿರುವುದು 
ಮಾಗಡಿ–ಬೆಂಗಳೂರು ಮುಖ್ಯ ರಸ್ತೆಯ ತಿಪ್ಪಗೊಂಡನಹಳ್ಳಿ ಬಳಿ ಹೊಸ ಸೇತುವೆ ಸಾರ್ವಜನಿಕರ ಸೇವೆಗೆ ಮುಕ್ತವಾಗಿರುವುದು    

ಮಾಗಡಿ: ಬೆಂಗಳೂರು–ಮಾಗಡಿ ಮುಖ್ಯ ರಸ್ತೆಯಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೂರನೇ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಕಾವೇರಿ ನೀರು ಬೆಂಗಳೂರಿಗೆ ಬರುವ ಮೊದಲು ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಈ ಜಲಾಶಯದ ಮುಖ್ಯ ರಸ್ತೆಯಲ್ಲಿ ಕಾಲಕ್ರಮೇಣ ಸೇತುವೆಗಳು ಬದಲಾಗಿವೆ. ಈಗ ನಾಲ್ಕು ಪಥದ ಹೊಸ ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಲಭ್ಯವಾಗಿದೆ.

1933ರಲ್ಲಿ ಕಮಾನು ಸೇತುವೆ ನಿರ್ಮಾಣ: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ 1933ರಲ್ಲಿ ಅಂದಿನ ಎಕ್ಸಿಕ್ಯೂಟಿವ್ ಎಂಜಿನಿಯರ್ ಎನ್.ಲಕ್ಷ್ಮೀನಾರಾಯಣ ಅವರು ತಿಪ್ಪಗೊಂಡನಹಳ್ಳಿ ಬಳಿ ಜಲಾಶಯ ನಿರ್ಮಿಸಿದ್ದರು. ಆಗ ಮಾಗಡಿ–ಬೆಂಗಳೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ಕಲ್ಲಿನಿಂದ ನಿರ್ಮಿಸಿದ ಏಕಮುಖ ಕಮಾನು ಸೇತುವೆ ನಿರ್ಮಿಸಲಾಗಿತ್ತು. ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಈ ಸೇತುವೆ ನಂತರ ವಾಹನಗಳ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ 2006–07ರಲ್ಲಿ ಎರಡು ಪಥದ ಹೊಸ ಸೇತುವೆ ನಿರ್ಮಾಣ ಮಾಡಲಾಯಿತು.

ನಾಲ್ಕು ಪಥದ ಸೇತುವೆ ಲೋಕಾರ್ಪಣೆ: ಈಗ ಮತ್ತೆ ಮಾಗಡಿ–ಬೆಂಗಳೂರು ಮುಖ್ಯ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ ತಿಪ್ಪಗೊಂಡನಹಳ್ಳಿ ಬಳಿ ನಾಲ್ಕು ಪಥದ ಹೊಸ ಸೇತುವೆ ನಿರ್ಮಿಸಲಾಗಿದೆ. ಒಂದು ಬದಿ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶೀಘ್ರದಲ್ಲೇ ಎರಡೂ ಬದಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಈಗ ಹಳೆ ಎರಡು ಸೇತುವೆಗಳು ತಮ್ಮ ಸೇವೆ ನಿಲ್ಲಿಸುವ ಹಂತ ತಲುಪಿವೆ. ಸ್ಥಳೀಯರು ಆ ಸೇತುವೆಗಳನ್ನು ಗ್ರಾಮಗಳ ಸಂಪರ್ಕಕ್ಕೆ ಬಳಸಬಹುದಾಗಿದೆ.

ADVERTISEMENT

ಮುಂದಿನ 20 ವರ್ಷಗಳ ಅಗತ್ಯ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ಈ ನಾಲ್ಕು ಪಥದ ಆಧುನಿಕ ಸೇತುವೆಯೊಂದಿಗೆ ಈಗ ಒಂದೇ ಬದಿಯಲ್ಲಿ ಮೂರು ಸೇತುವೆ ಕಾಣಬಹುದಾಗಿದೆ. ಏಕಮುಖ ಸೇತುವೆ, ಎರಡು ಪಥದ ಸೇತುವೆ ಮತ್ತು ಈಗ ನಾಲ್ಕು ಪಥದ ಸೇತುವೆ–ಕಾಲಕಾಲಕ್ಕೆ ಬದಲಾದ ಈ ಸೇತುವೆಗಳಲ್ಲಿ ಸಂಚರಿಸಿದ ಅನುಭವ ಹೊಂದಿರುವ ವಾಹನ ಸವಾರರು ಮತ್ತು ಬಸ್ ಪ್ರಯಾಣಿಕರು ಇಂದಿಗೂ ಇಲ್ಲಿಗೆ ಭೇಟಿ ನೀಡುವಾಗ ಆ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಅಪಘಾತಗಳ ಇತಿಹಾಸ: ಮಾಗಡಿ–ಬೆಂಗಳೂರು ಮುಖ್ಯ ರಸ್ತೆ ವಿಸ್ತರಣೆ ಮೊದಲು ತಿಪ್ಪಗೊಂಡನಹಳ್ಳಿ ಜಲಾಶಯದ ಸಮೀಪ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದವು. ಹೆಚ್ಚಿನ ತಿರುವುಗಳು, ರಸ್ತೆ ಪಕ್ಕದಲ್ಲಿದ್ದ ದೊಡ್ಡ ಬಂಡೆಗಳು, ಹಳ್ಳ ಮತ್ತು ಕಿರಿದಾದ ರಸ್ತೆಯಿಂದಾಗಿ ಸಾಕಷ್ಟು ಅಪಘಾತಗಳು ದಾಖಲಾಗಿದ್ದವು. 2006ರಲ್ಲಿ ರಸ್ತೆ ವಿಸ್ತರಣೆ ಮಾಡಿದರೂ ತಿರುವುಗಳನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗಿರಲಿಲ್ಲ. ನೇರ ರಸ್ತೆ ಇಲ್ಲದ ಕಾರಣ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಸರ್ಕಾರಿ ಮತ್ತು ಖಾಸಗಿ ಬಸ್‌, ಕಾರುಗಳು ರಾತ್ರಿ ವೇಳೆ ಪಲ್ಟಿಯಾಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಕಳೆದ ಏಳು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಕೆ-ಶಿಪ್ ಯೋಜನೆಯಡಿ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗ ಆ ಕಾಮಗಾರಿ ಅಂತಿಮ ಹಂತ ತಲುಪಿದೆ. ಹೊಸ ಸೇತುವೆ ಆರಂಭವಾಗಿರುವುದರಿಂದ ಮಾಗಡಿ–ಬೆಂಗಳೂರು ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಗುಣಮಟ್ಟಕ್ಕೆ ಒತ್ತು: ತಿಪ್ಪಗೊಂಡನಹಳ್ಳಿ ಜಲಾಶಯ ನಿರ್ಮಾಣವಾದ ವೇಳೆ ಸಿಮೆಂಟ್ ಮತ್ತು ಕಬ್ಬಿಣದ ಬಳಕೆ ಇರಲಿಲ್ಲ. ಕಲ್ಲಿನಲ್ಲೇ ಭದ್ರವಾದ ಕಮಾನು ಸೇತುವೆ ನಿರ್ಮಿಸಲಾಗಿತ್ತು. ಆಗ ವಾಹನಗಳ ಸಂಖ್ಯೆ ಕಡಿಮೆ ಇದ್ದುದರಿಂದ ಏಕಮುಖ ಸೇತುವೆಯೇ ಸಾಕಾಗಿತ್ತು. ತಂತ್ರಜ್ಞಾನ ಬೆಳೆದಂತೆ ಸಿಮೆಂಟ್ ಮತ್ತು ಕಬ್ಬಿಣ ಬಳಸಿ ದ್ವಿಮುಖ ಸೇತುವೆ ನಿರ್ಮಾಣವಾಯಿತು. ಈಗ ಭಾರೀ ವಾಹನಗಳ ದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಿಸಲು ನಾಲ್ಕು ಪಥದ ಸುಸಜ್ಜಿತ ದೊಡ್ಡ ಸೇತುವೆ ನಿರ್ಮಾಣವಾಗಿದೆ.

ತಿಪ್ಪಗೊಂಡನಹಳ್ಳಿ ಬಳಿ ಹಲವು ವರ್ಷಗಳ ಕಾಲ ಸೇವೆ ನೀಡಿದ ಎರಡು ಸೇತುವೆಗಳು ಸಂಚಾರದಿಂದ ಮುಕ್ತವಾಗಿರುವುದು
ಎಚ್.ಸಿ.ಬಾಲಕೃಷ್ಣ
ವೆಂಕಟೇಶ್

ಹೆಚ್ಚಿನ ತಿರುವು ಬರದಂತೆ ರಸ್ತೆ ವಿಸ್ತರಣೆ

ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಗಡಿ–ಬೆಂಗಳೂರು ಮುಖ್ಯ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಪರಿವರ್ತಿಸಲು ಮಾಗಡಿಯಲ್ಲಿ ಚಾಲನೆ ನೀಡಿದ್ದರು. ನಂತರದ ಸರ್ಕಾರಗಳು ಕೆ-ಶಿಫ್‌ ಯೋಜನೆಯಡಿ ಕಾಮಗಾರಿಗೆ ವೇಗ ನೀಡಲು ವಿಫಲವಾದವು. ರಸ್ತೆಗೆ ಭೂಸ್ವಾಧೀನ ಮಾಡಿಕೊಳ್ಳುವಲ್ಲಿ ಹಿಂದಿನ ಶಾಸಕರ ವಿಳಂಬ ಧೋರಣೆಯೇ ಕಾಮಗಾರಿ ವಿಳಂಬಕ್ಕೆ ಕಾರಣವಾಯಿತು. ನಾನು ಶಾಸಕನಾದ ನಂತರ ಕಾಮಗಾರಿಗೆ ವೇಗ ನೀಡಿದೆ. ಇನ್ನು ಕೆಲವೇ ತಿಂಗಳಲ್ಲಿ ಮಾಗಡಿ–ಬೆಂಗಳೂರು ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ತಿಪ್ಪಗೊಂಡನಹಳ್ಳಿ ಬಳಿ ಹೆಚ್ಚಿನ ತಿರುವುಗಳು ಬರದಂತೆ ರಸ್ತೆ ವಿಸ್ತರಣೆ ಮಾಡಲಾಗಿದೆ. ಹೊಸ ಸೇತುವೆ ಈಗ ಸಂಚಾರಕ್ಕೆ ಮುಕ್ತವಾಗಿದೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.

ಪ್ರವಾಸಿಗರಿಗೆ ಸಾಕಷ್ಟು ಅನುಕೂಲಕರ

ಕಾಲಕ್ಕೆ ತಕ್ಕಂತೆ ಸೇತುವೆಗಳು ಬದಲಾಗಿವೆ. ಸಾಮರ್ಥ್ಯ ಕಡಿಮೆ ಎಂಬ ಕಾರಣಕ್ಕೆ ಹಳೆ ಸೇತುವೆಗಳ ಮೇಲಿನ ಸಂಚಾರವನ್ನು ಸಂಪೂರ್ಣ ನಿಲ್ಲಿಸಿಲ್ಲ. ಸಂಚಾರ ದಟ್ಟಣೆ ಮತ್ತು ರಸ್ತೆ ನೇರಗೊಳಿಸುವ ದೃಷ್ಟಿಯಿಂದ ಹೊಸ ಸೇತುವೆ ನಿರ್ಮಾಣವಾಗಿದೆ. ಹೊಸ ಸೇತುವೆ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಮತ್ತು ಉಳಿದ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಸೋಮವಾರಪೇಟೆಗೆ ಸಂಚರಿಸುವ ಪ್ರವಾಸಿಗರಿಗೆ ಈ ರಸ್ತೆ ಸಾಕಷ್ಟು ಅನುಕೂಲಕರವಾಗಲಿದೆ ಎಂದು ತಾ.ಪಂ. ಮಾಜಿ ಸದಸ್ಯ ವೆಂಕಟೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.