ADVERTISEMENT

ಮಾಗಡಿ: ಪುರಸಭೆಗೆ ಬರಬೇಕಿದೆ ₹2.68 ಕೋಟಿ ನೀರಿನ ಬಾಕಿ

ಪುರಸಭೆ ನೀರಿನ ಬಾಕಿ ವಸೂಲಿಗೆ ಅದಾಲತ್ ಆರಂಭ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:52 IST
Last Updated 29 ಜನವರಿ 2026, 5:52 IST
ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಆಗುವ ಮಂಚನಬೆಲೆ ಜಲಾಶಯ
ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಆಗುವ ಮಂಚನಬೆಲೆ ಜಲಾಶಯ   

ಮಾಗಡಿ: ಬೇಸಿಗೆ ಆರಂಭದ ಮುನ್ನವೇ ಮಾಗಡಿ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ನೀರು ಪೂರೈಸುವುದೇ ಪುರಸಭೆಗೆ ಸವಾಲಿನ ವಿಷಯವಾಗಿದೆ. ಪುರಸಭೆ ಈಗ ಮಂಚನಬೆಲೆ ಜಲಾಶಯದ ನೀರನ್ನು ಮಾಗಡಿ ಪಟ್ಟಣಕ್ಕೆ ಪೂರೈಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು ನೀರಿನ ಬಾಕಿ ಕಟ್ಟದಿದ್ದರೆ ನೀರು ಮತ್ತು ಯುಜಿಡಿ ಸಂಪರ್ಕ ಕಡಿತ ಮಾಡುವ ಎಚ್ಚರಿಕೆ ನೀಡಲಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ 6,000ಕ್ಕೂ ಹೆಚ್ಚು ನೀರಿನ ಸಂಪರ್ಕ ತೆಗೆದುಕೊಳ್ಳಲಾಗಿದೆ. ಆದರೆ 6‌ಸಾವಿರ ದಾಟಿ 8 ಸಾವಿರದವರೆಗೂ ನೀರಿನ ಸಂಪರ್ಕ ಅನಧಿಕೃತವಾಗಿ ಬಳಕೆಯಾಗುತ್ತಿದೆ. ನೀರು ಪೂರೈಕೆ ಮಾಡುವುದು ಕಷ್ಟಕರವಾಗಿದ್ದು ಪಟ್ಟಣದಲ್ಲಿ 90 ಬೋರ್‌ವೆಲ್ ಇದ್ದು ಇದರಲ್ಲಿ 16 ಬೋರ್‌ವೆಲ್‌ಗಳಲ್ಲಿ ನೀರೇ ಬರುತ್ತಿಲ್ಲ. ಮಂಚನಬೆಲೆ ಜಲಾಶಯದ ನೀರನ್ನು ಪುರಸಭೆಯ ಶೇಕಡಾ 85ರಷ್ಟು ವಾರ್ಡ್‌ಗಳಿಗೆ ಪೂರೈಕೆ ಮಾಡಬಹುದು. ಮಿತವಾಗಿ ನೀರು ಬಳಕೆ ಮಾಡುವಂತೆ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.

ನೀರಿನ ಹಣ ಬಾಕಿ: 2016ರಿಂದ ಇಲ್ಲಿವರೆಗೂ ಪಟ್ಟಣದಲ್ಲಿ ಕುಡಿಯುವ ನೀರಿನ ಬಾಕಿ ಹಣ ₹2.68 ಕೋಟಿ ಬರಬೇಕಾಗಿದೆ. ನೀರಿನ ಬಿಲ್ ಬಾಕಿ ಅದಾಲತ್ ಮಾಡಿ ಪ್ರತಿಮನೆಗೆ ಮುಖ್ಯ ಅಧಿಕಾರಿಗಳು ಭೇಟಿ ನೀಡಿ ಬಾಕಿ ಇರುವ ಹಣ ಪಡೆಯಬೇಕು. ಹಣ ಕಟ್ಟದಿದ್ದರೆ ತಕ್ಷಣವೇ ನೀರು ಮತ್ತು ಯುಜಿಡಿ ಸಂಪರ್ಕ ಕಡಿತ ಮಾಡಲಾಗುವುದು. ಅನಧಿಕೃತವಾಗಿ ಸಂಪರ್ಕ ಪಡೆದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎರಡರಷ್ಟು ದಂಡ ಕಟ್ಟಿಸಲಾಗುತ್ತದೆ ಎಂದು ಪುರಸಭೆ ತಿಳಿಸಿದೆ.

ADVERTISEMENT

ಮಂಚನಬೆಲೆ ಜಲಾಶಯದ ನೀರನ್ನು ಪರೀಕ್ಷೆ ಮಾಡಿಸಲಾಗಿದೆ. ನೀರು ಕುಡಿಯಲು ಯೋಗ್ಯವಾಗಿದ್ದು ಹಾನಿಕಾರಿಯಾಗುವ ವಸ್ತುಗಳು ಇಲ್ಲ ಎಂದು ಕಂಡುಬಂದಿದೆ. ಈಗಾಗಲೇ ಅಮೃತ್ 2 ಯೋಜನೆ ಅಡಿ ವಾರ್ಡ್‌ಗಳಲ್ಲಿ ಪೈಪ್‌ಲೈನ್ ವ್ಯವಸ್ಥೆ ಹಾಗೂ ಫಿಲ್ಟರ್ ವ್ಯವಸ್ಥೆ ಮಾಡಿದ್ದು ಈಗಾಗಲೇ ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಫಿಲ್ಟರ್ ಅಳವಡಿಸಿ ಶುದ್ಧ ನೀರನ್ನು ವಾರ್ಡ್‌ಗಳಿಗೆ ಬಿಡುವ ಕೆಲಸ ಮಾಡಲಾಗುತ್ತದೆ. ‌

ಮಂಚಬೆಲೆ ಜಲಾಶಯದ ನೀರು ಬರುವಂತೆ ಮಂಚನಬೆಲೆ, ವಿಜಿ ದೊಡ್ಡಿ ಹೊಸಪೇಟೆ ಪಂಪ್‌ಹೌಸ್‌ಗಳಲ್ಲಿ ಮೋಟಾರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಅಧಿಕಾರಿ ಶ್ರೀನಿವಾಸ್ ಹೇಳಿದರು.

ನೀರಿನ ಸಮಸ್ಯೆ ಬರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅನಧಿಕೃತ ನೀರಿನ ಸಂಪರ್ಕ ಪಡೆದಿರುವ ಮನೆ ಮಾಲೀಕರ ವಿರುದ್ಧ ಕ್ರಮಕೈಗೊಂಡು ದಂಡ ಹಾಕಬೇಕು ಎಂದು ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮಂಚನಬೆಲೆ ಜಲಾಶಯದ ನೀರಿನ ಸಂಪರ್ಕ ಪಡೆದು ಸೈಟ್ ಗಳಲ್ಲಿ ಗಿಡ ಬೆಳೆಸಿರುವುದು.

ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ

ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇದ್ದರೆ ಸಹಾಯವಾಣಿ ಟೋಲ್ ಫ್ರೀ ನಂಬರ್‌ 9187476683ಗೆ ಕರೆ ಮಾಡಬಹುದು. ಅಧಿಕಾರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸುತ್ತಾರೆ ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.