ಮಾಗಡಿ: ಕೋವಿಡ್ ಸಂದರ್ಭದಲ್ಲಿ ಖಾಸಗಿ ಕೆಲಸ ತೊರೆದು ಹಳ್ಳಿಗೆ ಬಂದ ಪದವೀಧರ ಯುವಕನೊಬ್ಬ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ಸಮಗ್ರ ಕೃಷಿ ಅನುಸರಿಸುವ ಮೂಲಕ ವಾರ್ಷಿಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಈ ಮೂಲಕ ಈ ಯುವ ರೈತ ಹಲವು ರೈತರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ಮಾಗಡಿ ತಾಲ್ಲೂಕಿನ ಮರೀಕುಪ್ಪೆ ಗ್ರಾಮದ ಗಂಗಪ್ಪ ಅವರ ಮಗನಾದ ಯುವ ಉತ್ಸಾಹಿ ರೈತ ಎಂ.ಜಿ. ಚಂದ್ರಶೇಖರ್ ಡಿಪ್ಲೊಮಾವರೆಗೆ ಓದಿದ್ದಾರೆ. ಆ ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಉತ್ತಮ ವೇತನವಿರುವ ಹೊರತಾಗಿಯೂ, 2020ರಲ್ಲಿ ಕೋವಿಡ್ ಸಮಯದಲ್ಲಿ ಕೆಲಸ ತೊರೆದು, ತಂದೆಯೊಡನೆ ಕೃಷಿಯಲ್ಲಿ ತೊಡಗಿಸಿಕೊಂಡರು.
ತಮ್ಮ ತಂದೆ ಅನುಸರಿಸುತ್ತಿರುವ ಸಾಂಪ್ರದಾಯಿಕ ಕೃಷಿಯಲ್ಲಿ ಹೆಚ್ಚಿನ ಲಾಭ ಇಲ್ಲ ಎಂಬುದನ್ನು ಮನಗಂಡ ಚಂದ್ರಶೇಖರ್, ಕೃಷಿಯಲ್ಲಿ ಹೊಸ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಮಾಡಿದಲ್ಲಿ, ಖರ್ಚು ಕಡಿಮೆ ಮಾಡಿ, ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ಅರಿತರು.
ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಕೆ, ಪ್ಲಾಸ್ಟಿಕ್ ಹೊದಿಕೆಯ ಬಳಕೆ, ನೇರ ಮಾರುಕಟ್ಟೆ, ಜೈವಿಕ ಗೊಬ್ಬರಗಳು ಮತ್ತು ಸಸ್ಯ ಪೋಷಕಗಳ ಬಳಕೆ, ವಿದೇಶಿ ತರಕಾರಿಗಳನ್ನು ಬೆಳೆಯುವುದು, ಕಸಿ ಮಾಡಿದ ತರಕಾರಿಗಳನ್ನು ಬೆಳೆಯುವುದು, ಸಾಮಾಜಿಕ ಜಾಲತಾಣಗಳ ಮೂಲಕ ಮಾರುಕಟ್ಟೆ ಹಾಗೂ ಇತರೆ ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಇದೀಗ ಹೆಚ್ಚಿನ ಆದಾಯ ಗಳಿಸುತ್ತಿದ್ದಾನೆ.
ತಮಗಿರುವ 3.25 ಎಕರೆ ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಿ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಚಂದ್ರಶೇಖರ್ ಪ್ರಗತಿಪರ ಉತ್ಸಾಹಿ ಯುವ ರೈತರಾಗಿ ಹೊರಹೊಮ್ಮಿದ್ದಾರೆ.
ಸಮಗ್ರ ಬೆಳೆಗೆ ಒತ್ತು: ಕೃಷಿಯಲ್ಲಿ ಸಮಗ್ರ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿರುವ ರೈತ ಚಂದ್ರಶೇಖರ್, ರಾಗಿ, ತೊಗರಿ, ಅರಣ್ಯ ಕೃಷಿಯಲ್ಲಿ ತೇಗ, ಹೆಬ್ಬೇವು ಮರಗಳನ್ನು ಬೆಳೆದಿದ್ದಾರೆ. ಅಲ್ಲದೆ ವಾಣಿಜ್ಯ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಹಣ್ಣಿನ ಬೆಳೆಗಳಾದ ಮಾವು, ಬಾಳೆ, ತರಕಾರಿ ಬೆಳೆಗಳಾದ ಹಾಗಲಕಾಯಿ, ಸೋರೆಕಾಯಿ, ಎಲೆಕೋಸು, ಹೂಕೋಸು, ಟೊಮೆಟೊ, ಬೂದುಕುಂಬಳ, ಜುಕಿನಿ ಹಾಗೂ ಸೇವಂತಿ ಹೂವನ್ನು ಬೆಳೆದಿದ್ದಾರೆ.
ಪಶು ಸಂಗೋಪನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು, ರಾಸುಗಳಿಗೆ ಮುಸುಕಿನ ಜೋಳ, ಸೀಮೆ ಹುಲ್ಲು, ರಾಗಿ ಹುಲ್ಲನ್ನೂ ಬೆಳೆಯುತ್ತಿದ್ದಾರೆ. ಜೊತೆಗೆ ರೇಷ್ಮೆ ಕೃಷಿಯನ್ನೂ ಅನುಸರಿಸುತ್ತಿದ್ದಾರೆ.
ಮನೆ ಬಳಕೆಗಾಗಿ ನುಗ್ಗೆ, ಕರಿಬೇವು, ನಿಂಬೆ, ಬೆಣ್ಣೆಹಣ್ಣು, ನೋನಿ, ನೇರಳೆ, ಬಿಳಿ ನೇರಳೆ ಕೂಡ ಬೆಳೆದಿದ್ದಾರೆ.
ಸಾವಯವ ದೃಢೀಕರಣ ಪ್ರಮಾಣಪತ್ರ ಪಡೆದು ಸಾವಯವ ಉತ್ಪನ್ನಗಳನ್ನು ಸಹಜ ಸಮೃದ್ಧ, ಶಿವಗಂಗಾ ಮತ್ತು ಸಾವನದುರ್ಗ ರೈತ ಉತ್ಪಾದಕ ಕಂಪನಿಗಳ ಮೂಲಕ ಗ್ರಾಹಕರಿಗೆ ನೇರ ಮಾರುಕಟ್ಟೆ ಮಾಡುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ತಮ್ಮ ತಂದೆ ಕೃಷಿ ಮಾಡುತ್ತಿದ್ದಾಗ ಕೃಷಿಯಿಂದ ವಾರ್ಷಿಕ ₹50–₹60 ಸಾವಿರ ಗಳಿಸುತ್ತಿದ್ದರು. ಸಮಗ್ರ ಮತ್ತು ತಂತ್ರಜ್ಞಾನಗಳ ಅಳವಡಿಕೆಯಿಂದ ವಾರ್ಷಿಕ ₹7–₹8 ಲಕ್ಷ ಗಳಿಸುತ್ತಿರುವುದಾಗಿ ಹೇಳಿದ್ದಾರೆ.
ಆಧುನಿಕ ಬೇಸಾಯದ ಮೂಲಕ ಯುವಕರು ಕೃಷಿಯಲ್ಲೂ ಉತ್ತಮ ಲಾಭ ಗಳಿಸಬಹುದು ಎಂಬುದಕ್ಕೆ ಯುವ ರೈತ ಚಂದ್ರಶೇಖರ್ ಮಾದರಿಯಾಗಿದ್ದಾರೆ. 3.5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆಡಾ. ದೀಪಾ ಪೂಜಾರ ತೋಟಗಾರಿಕೆ ಕೃಷಿ ವಿಜ್ಞಾನ ಕೇಂದ್ರ ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.