ADVERTISEMENT

ಮಕ್ಕಳಿಗೆ ಸಂಸ್ಕಾರ ಕಲಿಸುವುದು ಮುಖ್ಯ ಕರ್ತವ್ಯ

ಪಂಚಮುಖಿ‌ ವ್ಯಕ್ತಿತ್ವ ವಿಕಸನ ಮಕ್ಕಳ ಯೋಗ ಶಿಬಿರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 13:21 IST
Last Updated 12 ಅಕ್ಟೋಬರ್ 2019, 13:21 IST
ಮಾಗಡಿಯಲ್ಲಿ ಶನಿವಾರ ನಡೆದ ಪಂಚಮುಖೀ ವ್ಯಕ್ತಿತ್ವ ವಿಕಾಸನ ಮಕ್ಕಳ ಯೋಗ ಶಿಬಿರವನ್ನು ಮುಖ್ಯಶಿಕ್ಷಕಿ ಗಿರಿಜಮ್ಮ(ಕೆಂಪು ರವಿಕೆ ಧರಿಸಿದವರು) ಉದ್ಘಾಟಿಸಿದರು. ಡಾ. ಶಶಿಕಾಂತ ಜೈನ್‌, ಲೋಕೇಶ್‌ ಇದ್ದರು.
ಮಾಗಡಿಯಲ್ಲಿ ಶನಿವಾರ ನಡೆದ ಪಂಚಮುಖೀ ವ್ಯಕ್ತಿತ್ವ ವಿಕಾಸನ ಮಕ್ಕಳ ಯೋಗ ಶಿಬಿರವನ್ನು ಮುಖ್ಯಶಿಕ್ಷಕಿ ಗಿರಿಜಮ್ಮ(ಕೆಂಪು ರವಿಕೆ ಧರಿಸಿದವರು) ಉದ್ಘಾಟಿಸಿದರು. ಡಾ. ಶಶಿಕಾಂತ ಜೈನ್‌, ಲೋಕೇಶ್‌ ಇದ್ದರು.   

ಮಾಗಡಿ: ಹಾಲಿನಂತೆ ಬಿಳುಪು ಮತ್ತು ಹೊಳಪಿನಿಂದ ಕೂಡಿರುವ ಮಕ್ಕಳ ಮನಸ್ಸಿಗೆ ಸಾಣೆ ಹಿಡಿದು ಸಂಸ್ಕಾರ ಕಲ್ಪಿಸಿಕೊಡುವುದು ಪೋಷಕರ ಮುಖ್ಯ ಕರ್ತವ್ಯವಾಗಿದೆ ಎಂದು ಧರ್ಮಸ್ಥಳದ ಶಾಂತಿವನ ಟ್ರಸ್ಟಿನ 34ನೇ ಯೋಗ ತರಬೇತಿ ಶಿಬಿರದ ಸಂಯೋಜಕ ಶೇಖರ್ ಕಡ್ತಲ ತಿಳಿಸಿದರು.

ತಿರುಮಲೆ ಆರ್ಯ ಈಡಿಗರ ಅರವಟಿಕೆಯಲ್ಲಿ ಶನಿವಾರ ಆರಂಭವಾದ ಪಂಚಮುಖಿ‌‌ ವ್ಯಕ್ತಿತ್ವ ವಿಕಸನ ಮಕ್ಕಳ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.

ಮಕ್ಕಳು ಮನೆಯ ನಂದಾದೀಪವಿದ್ದಂತೆ. ಭವಿಷ್ಯದ ಆಶಾಜ್ಯೋತಿಗಳು.ಅವರ ಬುದ್ಧಿ ಚುರುಕುಗೊಳಿಸಿ ಸದೃಢರನ್ನಾಗಿಸುವ ಗುಣಮಟ್ಟದ ಶಿಕ್ಷಣ ಮತ್ತು ಸಾಂಸ್ಕೃತಿಕ ಚುಟುವಟಿಕೆಗಳನ್ನು ಕಲಿಸಿಕೊಡಬೇಕು. ಮಕ್ಕಳಿಗಾಗಿ ಸಂಪತ್ತು ಸಂಗ್ರಹಿಸುವ ಬದಲು, ಸಂಸ್ಕಾರಭರಿತ ಶಿಕ್ಷಣ ನೀಡಿ ಮಕ್ಕಳನ್ನೇ ರಾಷ್ಟ್ರದ ಅಮೂಲ್ಯ ಆಸ್ತಿಯನ್ನಾಗಿಸಬೇಕು ಎಂದರು.

ADVERTISEMENT

ಮಕ್ಕಳ ಯೋಗಶಿಬಿರದ ಸಂಯೋಜಕ ಲೋಕೇಶ್ ಮಾತನಾಡಿ, ‘ಭಾರತೀಯ ಮಕ್ಕಳು ಬುದ್ಧಿಮತ್ತೆಯಲ್ಲಿ ಹುಟ್ಟಿನಿಂದ ಜಗತ್ತಿನ ಇತರೆ ದೇಶಗಳ ಮಕ್ಕಳಿಗಿಂತ ಮೊದಲ ಸ್ಥಾನದಲ್ಲಿರುತ್ತಾರೆ. ಅವರು ಬೆಳೆದಂತೆಲ್ಲಾ ನಾವೂ ಕೊಡುವ ಗುಣಮಟ್ಟದ ಕೌಶಲಗಳಿಂದ ಬೆಳವಣಿಗೆಯಾಗಲಿದೆ. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು ಎಂಬ ಹಿರಿಯರ ಅನುಭವದ ನುಡಿಯಂತೆ, ತಾಯಂದಿರು ಸದ್ಗುಣ, ಸದಾಚಾರ ಸಂಪನ್ನರಾಗಬೇಕಿದೆ’ ಎಂದರು.

7 ದಿನಗಳ ಕಾಲ ನಡೆಯಲಿರುವ ಮಕ್ಕಳ ಯೋಗಾಸನ ಶಿಬಿರದಲ್ಲಿ ನುರಿತ ಶಿಕ್ಷಣ ತಜ್ಞರು, ಯೋಗ ಗುರುಗಳಿಂದ ಸರಳ ಯೋಗಾಸನ, ನೃತ್ಯ, ಸಂಗೀತ, ಕಥೆ, ರಂಗಕಲೆ, ನಟನೆ, ಕರಕುಶಲ ಕಲೆಗಳ ಜತೆಗೆ ಪರಿಸರ ಪ್ರೇಮ, ಚಿತ್ರಕಲೆ,ಜನಪದ, ಭಾಷಣ ಕಲೆ, ಸಂವಾದ, ಅಭಿನಯ ಕಲಿಸಿಕೊಡಲಾಗುವುದು. ಶಿಬಿರದ ಕೊನೆಯದಿನ ಮಕ್ಕಳಿಗೆ ಬೇಕಾದ ಮೌಲ್ಯಾಧಾರಿತ ಪುಸ್ತಕಗಳನ್ನು ನೀಡಲಾಗುವುದು. ಪಟ್ಟಣದ ಜನತೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಿಬಿರಕ್ಕೆ ಕಳಿಸಬೇಕು ಎಂದರು.

ಧರ್ಮಸ್ಥಳ ಶಾಂತಿವನ ಟ್ರಸ್ಟಿನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ.ಶಶಿಕಾಂತ ಜೈನ್ ಮಾತನಾಡಿ ವಿದ್ಯೆಯ ಜನತೆಗೆ ವಿನಯ ಮುಖ್ಯ. ಮನೆ ಮತ್ತು ಗ್ರಾಮ, ಸಮಾಜದಲ್ಲಿ ಹೊಂದಾಣಿಕೆಯ ಮನೋಭೂಮಿಕೆಯನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸಬೇಕು. ಪಂಚಮುಖಿ ವ್ಯಕ್ತಿತ್ವ ವಿಕಾಸನ ಮಕ್ಕಳ ಯೋಗಶಿಬಿರದಲ್ಲಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಬೌದ್ಧಿಕ, ಮಾನಸಿಕ, ದೈಹಿಕ ಭಾವನಾತ್ಮಕ ಸಂಬಂದ ಬೆಳೆಸಲಾಗುವುದು ಎಂದರು.

ಬಿ.ಆರ್.ಪಿ. ಅಶೋಕ್ ಮಾತನಾಡಿ, ದಸರಾ ರಜೆಯಲ್ಲಿ ಶಿಬಿರ ನಡೆಯುತ್ತಿರುವುದು ಮಕ್ಕಳಿಗೆ ಬಹುಉಪಯುಕ್ತವಾಗಿದೆ ಎಂದರು.

ತಿರುಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಗಿರಿಜಮ್ಮ ಮಾತನಾಡಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಕಲಿಕೆ ಪೂರಕವಾಗಲಿದೆ ಎಂದರು.

ಶಿಬಿರದ ಸಂಪನ್ಮೂಲ ವ್ಯಕ್ತಿ ಕಾಶಿನಾಥ ಹಂದ್ರಾಳ ಮಾತನಾಡಿ ಗುರುದೈವಗಳಲ್ಲಿ ನಿಷ್ಠೆ, ಶ್ರಮಜೀವನದತ್ತ ಕೊಂಡೊಯ್ಯಲಿದೆ. ಮಕ್ಕಳು ಮಾತಿಗಿಂತ ಕೃತಿಗೆ ಹೆಚ್ಚು ಗಮನಹರಿಸುವಂತೆ ಕರೆದೊಯ್ಯಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಚನ್ನಕೇಶವ, ಮಂಜುನಾಥ ದೇವಾಡಿಗ, ಯೋಗಗುರುಗಳಾದ ಶ್ರೀದೇವಿ, ಅಥಣಿಯ ಹೊಳೆಪ್ಪನವರ್, ತಾಲ್ಲೂಕು ಸಂಯೋಜಕಿ ಶಶಿಕಲಾ ಸುವರ್ಣ, ಸಿದ್ದಯ್ಯ ಮಾತನಾಡಿದರು. ಮಕ್ಕಳು ಮತ್ತು ಸೇವಾಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.