ADVERTISEMENT

ಚನ್ನಪಟ್ಟಣ | ಕಡೆಗೂ ಮಕ್ನಾ ಕಾಡಾನೆ ಸೆರೆ: ನಿಟ್ಟುಸಿರು ಬಿಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:36 IST
Last Updated 2 ಮಾರ್ಚ್ 2026, 4:36 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ ಅರಣ್ಯ ಪ್ರದೇಶದ ಕೆಂಪಿಕಟ್ಟೆ ಕೆರೆ ಬಳಿ ಸೆರೆ ಹಿಡಿದ ಮಕ್ನಾ ಆನೆ</p></div>

ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ ಅರಣ್ಯ ಪ್ರದೇಶದ ಕೆಂಪಿಕಟ್ಟೆ ಕೆರೆ ಬಳಿ ಸೆರೆ ಹಿಡಿದ ಮಕ್ನಾ ಆನೆ

   

ಚನ್ನಪಟ್ಟಣ: ತಾಲ್ಲೂಕಿನ ಬಿ.ವಿ. ಹಳ್ಳಿ ಹಾಗೂ ಅಪಕ್ಕಪದ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಮಕ್ನಾ (ದಂತವಿಲ್ಲದ ಗಂಡಾನೆ) ಕಾಡಾನೆಯನ್ನು ಅರಣ್ಯ ಇಲಾಖೆ  ಸಿಬ್ಬಂದಿ ಭಾನುವಾರ ಸೆರೆ ಹಿಡಿದಿದ್ದಾರೆ. ಬಿ.ವಿ. ಹಳ್ಳಿಯ ಅರಣ್ಯ ಪ್ರದೇಶದ ಕೆಂಪಿಕಟ್ಟೆ ಕೆರೆ ಬಳಿ ಇದ್ದ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯಲಾಯಿತು.

ಬಿ.ವಿ. ಹಳ್ಳಿ ಭಾಗದಲ್ಲಿ ಬೀಡುಬಿಟ್ಟಿದ್ದ  ಮಕ್ನಾ, ರೈತರ ತೋಟಗಳಿಗೆ ಬಂದು ಮೇಯ್ದು ದಾಂದಲೆ ಮಾಡುತ್ತಿತ್ತು. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿತ್ತು. ದಿನದಿಂದ ದಿನಕ್ಕೆ ಹೆಚ್ಚಾಗಿದ್ದ ಕಾಡಾನೆ ಸೆರೆ ಹಿಡಿಯಬೇಕು ಎಂದು ರೈತರು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಲೇ ಬಂದಿದ್ದರು.

ADVERTISEMENT

ಕಡೆಗೆ ಅಧಿಕಾರಿಗಳು ಮಕ್ನಾ ಸೆರೆ ಕಾರ್ಯಾಚರಣೆಗೆ ಸರ್ಕಾರದಿಂದ ಅನುಮತಿ ಪಡೆದಿದ್ದರು. ಶನಿವಾರ ಬೆಳಿಗ್ಗೆ ದುಬಾರೆ ಆನೆ ಶಿಬಿರದಿಂದ   ಆರು ಸಾಕಾನೆಗಳ ತಂಡದೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಚನ್ನಪಟ್ಟಣಕ್ಕೆ ಬಂದು ಮಕ್ನಾ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದರು.

ಭಾನುವಾರ ಬೆಳಿಗ್ಗೆ ಮಕ್ನಾ ಆನೆ ಇದ್ದ ಜಾಗವನ್ನು ಗುರುತಿಸಿದ ಅಧಿಕಾರಿಗಳು, ಅಲ್ಲಿಗೆ ಸಾಕಾನೆ ತಂಡದೊಂದಿಗೆ ಬಂದರು. ಬಂದೂಕಿನ ಮೂಲಕ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ಕೆಲ ಹೊತ್ತಿನಲ್ಲೇ ಆನೆ ಪ್ರಜ್ಞೆ ತಪ್ಪಿತು. ನಂತರ ಹಗ್ಗದಿಂದ ಕಟ್ಟಿ ಸೆರೆ ಹಿಡಿದು, ಪ್ರಜ್ಞೆ ಬಂದ ನಂತರ ಸಾಕಾನೆಗಳ ಮೂಲಕ ಲಾರಿಗಳಿದ್ದ ಜಾಗಕ್ಕೆ ಕರೆತಂದರು. ಆನಂತರ ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ದುಬಾರೆ ಆನೆ ಶಿಬಿರಕ್ಕೆ ಸಾಗಿಸಲಾಯಿತು.

ಕಾರ್ಯಾಚರಣೆ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ, ‘ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದೆ. ಅದರಲ್ಲೂ ಮಕ್ನಾ ಹಾಗೂ ಟಸ್ಕರ್ ಆನೆಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದವು. ಇವುಗಳ ಸೆರೆಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಈಗ ಮಕ್ನಾ ಆನೆ ಸೆರೆ ಹಿಡಿದು ದುಬಾರಿಗೆ ಕಳಿಸಲಾಗಿದೆ’ ಎಂದರು.

‘ಮುಂದೆ ಟಸ್ಕರ್ ಆನೆ ಸೆರೆಗೆ ಶೀಘ್ರ ಕಾರ್ಯಾಚರಣೆ ನಡೆಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿ ಒಂದೆರಡು ದಿನಗಳ ನಂತರ ಟಸ್ಕರ್ ಆನೆ ಸೆರೆಗು ಕಾರ್ಯಾಚರಣೆ ನಡೆಸಲಾಗುವುದು’ ಎಂದು ತಿಳಿಸಿದರು.

ಎಸಿಎಫ್ ಪುಟ್ಟಮ್ಮ, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೇಶ್, ಆನೆ ಕಾರ್ಯಪಡೆ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

ಹೊಸದೊಡ್ಡಿ ಗ್ರಾಮಸ್ಥರ ಪ್ರತಿಭಟನೆ

ಚನ್ನಪಟ್ಟಣ: ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ಸೆರೆಯಾದ ಮಕ್ನಾ ಕಾಡಾನೆ ಸಾಗಿಸುತ್ತಿದ್ದ ಲಾರಿಯನ್ನು ರಾಮನಗರ ತಾಲ್ಲೂಕಿನ ಹೊಸದೊಡ್ಡಿ ಗ್ರಾಮಸ್ಥರು ಸಂಜೆ ತಡೆದು ಪ್ರತಿಭಟನೆ ನಡೆಸಿದರು. 

ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿವೆ. ಈ ಭಾಗದ ಗ್ರಾಮಗಳ ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿರುವ ಎಲ್ಲಾ ಕಾಡಾನೆಗಳನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದರು.

ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ 2 ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಅನುಮತಿ ಪಡೆದಿದೆ. ಎರಡರಿಂದ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾಗಿ ಎಲ್ಲಾ ಕಾಡಾನೆಗಳು ಸೆರೆ ಹಿಡಿಯುವ ಮೂಲಕ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಹಿರಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಇತರೆ ಕಾಡಾನೆಗಳ ಸೆರೆಗೆ ಸರ್ಕಾರದ ಅನುಮತಿ ಪಡೆದು ಸೆರೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟರು.

ಕೆಂಪಿಕಟ್ಟೆ ಕೆರೆ ಬಳಿ ಮಕ್ನಾ ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆ ತಂಡ
ರಾಮನಗರ ತಾಲ್ಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಕಾಡಾನೆ ಸಾಗಿಸುತ್ತಿದ್ದ ಲಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.