
ರಾಮನಗರ: ‘ಸರ್ಕಾರದ ಬಿದಾಯಿ (ಶಾದಿ ಭಾಗ್ಯ) ಯೋಜನೆಯಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಶುಕ್ರವಾರ (ಫೆ. 13) ಸಂಜೆ 5 ಗಂಟೆಗೆ ರಾಮನಗರದ ಹುಣಸನಹಳ್ಳಿ ರಸ್ತೆಯಲ್ಲಿರುವ ಯಾರಬ್ ನಗರದ ಸುಲ್ತಾನ್ ಪ್ಯಾಲೇಸ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ 140 ಜೋಡಿಗೆ ಸರಳ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
‘ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮ್ಮದ್ ಖಾನ್, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಎನ್.ಎ. ಹ್ಯಾರಿಸ್, ರಿಜ್ವಾನ್ ಅರ್ಷದ್, ತನ್ವೀರ್ ಸೇಠ್, ಎಚ್.ಸಿ. ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಪುಟ್ಟಣ್ಣ, ಎಸ್. ರವಿ, ರಾಮೋಜಿ ಗೌಡ, ಸುಧಾಮ್ ದಾಸ್, ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದು ಯಾರಬ್‌ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಾಮೂಹಿಕ ವಿವಾಹದಲ್ಲಿ ಹೊಸ ಬದುಕಿಗೆ ಕಾಲಿಡುವ ಪ್ರತಿ ಜೋಡಿಗೆ ಸರ್ಕಾರದ ವತಿಯಿಂದ ₹50 ಸಾವಿರವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲಾಗುವುದು. ಮದುಗೆ ಅಗತ್ಯವಿರುವ ಬಟ್ಟೆ, ತಾಳಿ ಸೇರಿದಂತೆ ಬದುಕಿಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುವುದು. ಬಡವರು ಸರಳವಾಗಿ ಮದುವೆಯಾಗುವ ಮೂಲಕ ದುಂದುವೆಚ್ಚ ತಗ್ಗಿಸಿಕೊಳ್ಳಬೇಕು’ ಎಂದು ಹೇಳಿದರು.
‘ಆರಂಭದಲ್ಲಿ ಜಿಲ್ಲೆಯಾದ್ಯಂತ 130 ಜೋಡಿಗಳು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದವರು. ವಿವಾಹ ಕಾರ್ಯಕ್ರಮವು ಹೆಚ್ಚಿನ ಪ್ರಚಾರವಾಗುತ್ತಿದ್ದಂತೆ ಜೋಡಿಗಳ ಸಂಖ್ಯೆ 140ಕ್ಕೆ ಏರಿಕೆಯಾಗಿದೆ. ವಧು–ವರರ ವಯಸ್ಸಿನ ಕುರಿತು ಸೂಕ್ತ ದಾಖಲೆ ಸಂಗ್ರಹದಿಂದಿಡಿದು ಎಲ್ಲಾ ಪ್ರಕ್ರಿಯೆಯಗಳನ್ನು ಕಾನೂನುಬದ್ಧವಾಗಿಯೇ ಮುಗಿಸಿ ವಿವಾಹ ನೆರವೇರಿಸಲಾಗುತ್ತಿದೆ’ ಎಂದರು.
‘ರಾಮನಗರದಲ್ಲಿ ಇತ್ತೀಚೆಗೆ ನಡೆದ ರಾಮೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದಕ್ಕೂ ಮುಂಚೆ ಅಂಬೇಡ್ಕರ್ ಜಯಂತಿ ಮತ್ತು ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಮುಂದೆಯೂ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಆಲೋಚನೆ ಇದೆ’ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯರು ಇದ್ದರು.
Quote - ಸಮುದಾಯವು ನನ್ನೊಂದಿಗೆ ಕೈ ಜೋಡಿಸಿದರೆ ಬಡವರಿಗೆ ಅನುಕೂಲವಾಗುವ ಸರಳ ಸಾಮೂಹಿಕ ವಿವಾಹದಂತಹ ಪುಣ್ಯದ ಕಾರ್ಯವನ್ನು ಪ್ರತಿ ವರ್ಷ ನಾನು ಮಾಡಲು ಸಿದ್ದನಿದ್ದೇನೆ – ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.