ADVERTISEMENT

ಹಾರೋಹಳ್ಳಿ: ಪವಾಡ ರಹಸ್ಯ ಬಯಲು ಕಾರ್ಯಕ್ರಮ

ಹಾರೋಹಳ್ಳಿ: ಪವಾಡ ರಹಸ್ಯ ಬಯಲು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:00 IST
Last Updated 8 ಫೆಬ್ರುವರಿ 2021, 3:00 IST
ಹಾರೋಹಳ್ಳಿಯಲ್ಲಿ ತೇಜಸ್ವಿ ನಟರಾಜ್‌ ನೀರು ತುಂಬಿದ ಚೆಂಬಿನಲ್ಲಿ ಬತ್ತಿಯನ್ನು ಅಂಟಿಸಿ ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು
ಹಾರೋಹಳ್ಳಿಯಲ್ಲಿ ತೇಜಸ್ವಿ ನಟರಾಜ್‌ ನೀರು ತುಂಬಿದ ಚೆಂಬಿನಲ್ಲಿ ಬತ್ತಿಯನ್ನು ಅಂಟಿಸಿ ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು   

ಕನಕಪುರ: ವೈಜ್ಞಾನಿಕವಾಗಿ ನಾವು ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಮೂಢನಂಬಿಕೆಗಳು ವಿರಾಜಮಾನವಾಗಿ ರಾರಾಜಿಸುತ್ತಿವೆ. ಅಮಾಯಕ ಜನರು ಇನ್ನೂ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹಾರೋಹಳ್ಳಿ ಸಬ್‌ ಇನ್‌ಸ್ಪೆಕ್ಟರ್‌ ಟಿ. ಮುರಳಿ ವಿಷಾದಿಸಿದರು.

ತಾಲ್ಲೂಕಿನ ಹಾರೋಹಳ್ಳಿಯಲ್ಲಿ ದಲಿತ ಸೇನೆಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಮೌಢ್ಯ ನಿವಾರಣೆಗಾಗಿ ಪವಾಡ ರಹಸ್ಯ ಬಯಲು, ಪ್ರತಿಭಾ ಪುರಸ್ಕಾರ ಮತ್ತು ಕಂಬಳಿ ವಿತರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರು ವಿದ್ಯಾವಂತರಾಗುತ್ತಿರುವುದು ಸಂತೋಷದ ಸಂಗತಿ. ಅಕ್ಷರಸ್ಥರಾಗುತ್ತಿದ್ದಂತೆ ಮೌಢ್ಯವೂ ಹೆಚ್ಚಾಗುತ್ತಿರುವುದು ದುರಂತ. ದೇವರ ಹೆಸರಿನಲ್ಲಿ ಮೋಸ ಮಾಡುವವರು, ಶಾಸ್ತ್ರ, ಭವಿಷ್ಯ ಹೇಳುವಂತಹ ಆಚರಣೆಗಳು ಸಮಾಜದಲ್ಲಿ ಕಾಣಿಸುತ್ತಿವೆ ಎಂದರು.

ADVERTISEMENT

ಎಲ್ಲಿಯ ತನಕ ಮೋಸ ಹೋಗುವವರು, ಇಂತಹ ಆಚರಣೆಯನ್ನು ನಂಬುವವರು ಇರುತ್ತಾರೋ ಅಲ್ಲಿಯವರೆಗೂ ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವವರೂ ಇರುತ್ತಾರೆ ಎಂದು ಎಚ್ಚರಿಸಿದರು.

ಮಾಧ್ಯಮಗಳು ಕೂಡ ಮೂಢನಂಬಿಕೆಗಳನ್ನು ವಿಜೃಂಭಣೆಯಿಂದ ತೋರಿಸುತ್ತಿವೆ. ಮೂಢನಂಬಿಕೆಗಳಿಂದ ಸಾಕಷ್ಟು ಮೋಸ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ನಾವು ಮೌಢ್ಯದಿಂದ ಆಚೆ ಬರಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಮಲ್ಲಪ್ಪ ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳು ಇಂದಿಗೂ ಆಚರಣೆಯಲ್ಲಿವೆ. ಜನರೂ ನಂಬುತ್ತಿದ್ದಾರೆ. ಗ್ರಾಮೀಣ ಭಾಗದ ಅನಕ್ಷರಸ್ಥ ಜನರು ಇವೆಲ್ಲವನ್ನು ನಂಬಿ ಮೋಸ ಹೋಗುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಇಂದು ನಡೆಯುತ್ತಿರುವ ಕಾರ್ಯಕ್ರಮ ಅರ್ಥಗರ್ಭಿತವಾಗಿದೆ ಎಂದು
ಹೇಳಿದರು.

ಪವಾಡ ರಹಸ್ಯ ಬಯಲು ಮಾಡುವ ಹುಲಿಕಲ್‌ ನಟರಾಜ್‌ ಅವರ ಪುತ್ರಿ ತೇಜಶ್ವಿ ನಟರಾಜ್,‌ ಮೂಢನಂಬಿಕೆಗಳು ಯಾವ ರೀತಿ ಆಚರಣೆ ಆಗುತ್ತಿವೆ ಮತ್ತು ಅಮಾಯಕರನ್ನು ಯಾವ ರೀತಿ ನಂಬಿಸಿ ವಂಚನೆ ಮಾಡುತ್ತಾರೆ ಎಂಬ ಬಗ್ಗೆ ಜಾಗೃತಿ ಮೂಡಿಸಿದರು.

ದಲಿತ ಸೇನೆಯ ಅಶೋಕ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೃದ್ಧರಿಗೆ ಕಂಬಳಿ ವಿತರಿಸಲಾಯಿತು.

ಬೆಸ್ಕಾಂ ವಿಜಿಲೆನ್ಸ್‌ನ ಸಬ್‌ ಇನ್‌ಸ್ಪೆಕ್ಟರ್‌ ಭಾಸ್ಕರ್‌, ನಿವೃತ್ತ ಪೊಲೀಸ್‌ ಅಧಿಕಾರಿ ನಾಗೇಂದ್ರ, ರೋಟರಿ ಮಾಜಿ ಅಧ್ಯಕ್ಷ ಮಹಮ್ಮದ್‌ ಏಜಾಸ್‌, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮಸಾಗರ ಕೃಷ್ಣ, ಮುಖಂಡರಾದ ಆಂಜನಪ್ಪ, ಜಿ.ವಿ. ರವಿ, ಶಂಕರ್‌ ಬೆಟ್ಟಳ್ಳಿ, ಕಿರಣ್‌ಕುಮಾರ್‌, ವೈರಮುಡಿ, ಕೋಟೆ ಕಿರಣ್‌, ಆನಂದ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.