ADVERTISEMENT

ಎಲೆಕ್ಟ್ರಿಕ್‌ ಉತ್ಪನ್ನಗಳ ಉತ್ಪಾದನೆ ಸ್ಥಗಿತಗೊಳಿಸಿದ ಮಿಟ್ಸುಬಿಷಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 8:37 IST
Last Updated 8 ನವೆಂಬರ್ 2022, 8:37 IST
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಬೀಗ ಜಡಿಯಲಾಗಿದೆ
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಬೀಗ ಜಡಿಯಲಾಗಿದೆ   

ರಾಮನಗರ: ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬಿಡದಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಟ್ರಾಕ್ಷನ್ ಮೋಟಾರ್ ಮತ್ತು ವಿವಿವಿಎಫ್ ಇನ್ವರ್ಟರ್‌ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಈ ಉತ್ಪನ್ನಗಳಿಗೆ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಕಂಪನಿಯು ಈ ಕ್ರಮ ಕೈಗೊಂಡಿದ್ದು, ಕಾರ್ಖಾನೆಯಲ್ಲಿನ ತನ್ನ 56 ಕಾರ್ಮಿಕರನ್ನು ನವೆಂಬರ್5ರಿಂದಲೇ ಅನ್ವಯ ಆಗುವಂತೆ ಸೇವೆಯಿಂದ ಬಿಡುಗಡೆ ಮಾಡಿದೆ. ಈ ಉದ್ಯೋಗಿಗಳಿಗೆ ಕಾನೂನುಬದ್ಧವಾಗಿ ಪರಿಹಾರ ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆಯು ತಿಳಿಸಿದೆ.

ಉತ್ಪಾದನಾ ಘಟಕವನ್ನು ಸಂಪೂರ್ಣವಾಗಿ ಮುಚ್ಚುವ ಯೋಜನೆ ತಕ್ಷಣಕ್ಕೆ ಇಲ್ಲ. ಕಂಪನಿಯ ಕಾರ್ಯ ನಿರ್ವಹಣೆಯ ಅಗತ್ಯಗಳಿಗೆ ಕೆಲ ಸಿಬ್ಬಂದಿಯನ್ನು ಉಳಿಸಿಕೊಳ್ಳಲಾಗಿದೆ. ಟ್ರಾನ್ಸ್ ಪೋರ್ಟ್ ಸಿಸ್ಟಂ ವಿಭಾಗದ ಯೋಜನಾ ಕಚೇರಿಯು ತನ್ನ ಕಾರ್ಯ ನಿರ್ವಹಣೆಯನ್ನು ಮುಂದುವರಿಸಲಿದೆ.

ADVERTISEMENT

‘ಈ ನಿರ್ಧಾರದಿಂದ ವಿವಿವಿಎಫ್ ಇನ್ವರ್ಟರ್ ಮತ್ತು ಟ್ರಾಕ್ಷನ್ ಮೋಟಾರ್‌ಗಳಿಗೆ ಸಂಬಂಧಿಸಿದ ಉದ್ಯಮ ವಿಭಾಗಕ್ಕೆ ಮಾತ್ರ ಪರಿಣಾಮ ಉಂಟಾಗಿದೆ. ಕಂಪನಿ ಹಾಗೂ ಸಮೂಹವು ಭಾರತದಲ್ಲಿ ಹೂಡಿಕೆ ಹಾಗೂ ತನ್ನ ಪ್ರಗತಿಯನ್ನು ಮುಂದುವರಿಸಲಿದೆ. ತನ್ನ ಇತರೆ ಉದ್ಯಮಗಳಾದ ಫ್ಯಾಕ್ಟರಿ ಆಟೊಮೇಷನ್, ಏರ್ ಕಂಡೀಷನಿಂಗ್/ ಚಿಲ್ಲರ್ ಸೆಮಿಕಂಡಕ್ಟರ್, ಎಲಿವೇಟರ್ ಮತ್ತಿತರೆ ಉದ್ಯಮಗಳು ಎಂದಿನಂತೆ ಮುಂದುವರಿಯಲಿವೆ’ ಎಂದು ಮಿಟ್ಸುಬಿಷಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಕಝಹಿಕೊ ತಮುರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಕಂಪನಿಯು 2010ರಲ್ಲಿ ಪ್ರಾರಂಭವಾಗಿದ್ದು, ಏರ್ ಕಂಡೀಷನಿಂಗ್ ಮತ್ತು ಫ್ಯಾಕ್ಟರಿ ಆಟೊಮೇಷನ್ ಉತ್ಪನ್ನಗಳಂತಹ ವಿದ್ಯುತ್ ಉಪಕರಣಗಳ ಸಗಟು ವಿತರಣೆ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.