ADVERTISEMENT

ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ: ಶಾಸಕ ಎಚ್‌.ಸಿ. ಬಾಲಕೃಷ್ಣ

ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್‌ಗೆ ಶಾಸಕ ಎಚ್‌.ಸಿ. ಬಾಲಕೃಷ್ಣ ತರಾಟೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 23:30 IST
Last Updated 25 ಡಿಸೆಂಬರ್ 2025, 23:30 IST
ಮಾಗಡಿ ತಾಲ್ಲೂಕು ಕಚೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಹಶೀಲ್ದಾರ್ ಡಿ.ಪಿ. ಶರತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಕ್ಷಣ...
ಮಾಗಡಿ ತಾಲ್ಲೂಕು ಕಚೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಹಶೀಲ್ದಾರ್ ಡಿ.ಪಿ. ಶರತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಕ್ಷಣ...   

ರಾಮನಗರ (ಮಾಗಡಿ): ‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವಾ ನಿಮಗೆ. ಜನರನ್ನ ಯಾಕೆ ಹೀಗೆ ಸಾಯಿಸುತ್ತೀರಿ. ಕಿರಿಯ ವಯಸ್ಸಿನ ಯುವ ಅಧಿಕಾರಿಗಳಾದ ನೀವು ಹೇಗಿರಬೇಕೆಂದು ಗೊತ್ತಿಲ್ಲವೆ...’

– ಮಾಗಡಿ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ಸಂಜೆ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಹಶೀಲ್ದಾರ್ ಡಿ.ಪಿ. ಶರತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.

‘ಶಾಸಕನಾಗಿರುವ ನಿನ್ನ ಕೈಯಲ್ಲಿ ಕೆಲಸ ಮಾಡಿಸಲು ಆಗುತ್ತಿಲ್ಲ ಎಂದು ಜನ ನನಗೂ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಆಮೇಲೆ ನಿನಗೂ ಹೊಡೆಯುತ್ತಾರೆ’ ಎಂದು ಪಕ್ಕದಲ್ಲಿದ್ದ ತಹಶೀಲ್ದಾರ್ ವಿರುದ್ಧ ಕಿಡಿಕಾರಿದರು. 

ADVERTISEMENT

ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಸಾರ್ವಜನಿಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಎದುರೇ ತಹಶೀಲ್ದಾರ್‌ರನ್ನು ಶಾಸಕ ನಿಂದಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಭೆಯಲ್ಲಿ ಭಾಗವಹಿಸಿದ್ದ ದೂರುದಾರರೊಬ್ಬರು ತಮ್ಮ ಕೆಲಸದ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕುರಿತು ಶಾಸಕರ ಗಮನಕ್ಕೆ ತಂದರು. ಅದಕ್ಕೆ ಆಕ್ರೋಶಗೊಂಡ ಬಾಲಕೃಷ್ಣ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 

‘ಕಚೇರಿಯಲ್ಲಿ ದೂರು ಸ್ವೀಕರಿಸುವ ಬಾಕ್ಸ್ ಇಡೋಣ. ತಿಂಗಳಿಗೊಮ್ಮೆ ಅದನ್ನು ತೆರೆಯೋಣ. ಆಗ ಉಪ ವಿಭಾಗಾಧಿಕಾರಿಯನ್ನು ಕರೆಸುತ್ತೇನೆ. ಜನರ ದೂರುಗಳೇನು, ಯಾವ ಅಧಿಕಾರಿ ಕೆಲಸ ಮಾಡಿಲ್ಲ ಎಂದು ಅವನ ಹೆಸರು ಬರೆದು ಹಾಕಿ. ಕೆಲಸ ಮಾಡದಿರುವ ಬಗ್ಗೆ ಸಭೆಯಲ್ಲಿ ಜನರಿಗೆ ನೀವು ಉತ್ತರ ಹೇಳಿ. ಇಲ್ಲವಾದರೆ ಜನ ನಿನಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಇಲ್ಲವಾದರೆ, ನನಗೆ ಹೊಡೆಯುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆಲಸ ಮಾಡದ ನಿನಗೆ ಹೊಡೆಯದೆ ಮುತ್ತಿಕ್ಕುತ್ತಾರಾ? ನಾಚಿಗೆ ಆಗಲ್ವಾ ನಿನಗೆ. ನಿಮ್ಮ ಮನೆ ಸಮಸ್ಯೆಯಾಗಿದ್ದರೆ ಸುಮ್ಮನಿರುತ್ತಿದ್ರಾ? ತಹಶೀಲ್ದಾರ್ ಆದವರು ಒಳ್ಳೆಯ ಕೆಲಸ ಮಾಡಿ ಶಾಸಕರೂ ಆಗಿದ್ದಾರೆ. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಮೃತಪಟ್ಟಾಗ ಜನ ಅತ್ತರು. ನೀವು ಸತ್ತಾಗ ಜನ ಅಳುತ್ತಾರಾ? ತೊಲಗಿದ ಬಿಡಿ ಎನ್ನುತ್ತಾರೆ’ ಎಂದು ತರಾಟೆಗೆ ತೆಗೆದುಕೊಂಡರು. ಬಾಲಕೃಷ್ಣ ಮಾತಿಗೆ ತಹಶೀಲ್ದಾರ್ ಮರು ಮಾತನಾಡದೆ ತಲೆಯಾಡಿಸಿ ಸುಮ್ಮನಾದರು.

ಇದೇ ಮೊದಲಲ್ಲ ಸಭೆಯಲ್ಲಿ ತಹಶೀಲ್ದಾರ್‌ ಅವರನ್ನು ಶಾಸಕರು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದು ಇದೇ ಮೊದಲೇನಲ್ಲ. ಎರಡು ತಿಂಗಳ ಹಿಂದೆ ತಾಲ್ಲೂಕು ಕಚೇರಿಯಲ್ಲಿ ನಡೆದಿದ್ದ ಜನ ಸಂಪರ್ಕ ಸಭೆಯಲ್ಲಿ ತಹಶೀಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೂ ಇದೇ ರೀತಿ ಬಿಸಿ ಮುಟ್ಟಿಸಿದ್ದರು. ‘ನಿಮ್ಮ ಯೋಗ್ಯತೆಗೆ ರೈತರ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಆಗುವುದಿಲ್ಲವೆ? ಹೀಗೆ ಮಾಡಿದರೆ ನಿಮ್ಮ ಮುಖಕ್ಕೆ ಹೊಡಿತಿನಿ. ನಿಮ್ಮಿಂದಾಗಿ ಜನ ನನಗೆ ಉಗಿಯುತ್ತಿದ್ದಾರೆ. ನಿಮ್ಮ ಘನ ಕಾರ್ಯಕ್ಕೆ ಇಬ್ಬರನ್ನೂ ರಸ್ತೆಯಲ್ಲಿ ನಿಲ್ಲಿಸಿ ಹಾರ ಹಾಕಿ ಸನ್ಮಾನ ಮಾಡ್ತಿನಿ‌. ರೈತರ ವಿಷಯದಲ್ಲಿ ತಮಾಷೆ ಮಾಡುತ್ತೀರಾ?’ ಎಂದು ಎಚ್ಚರಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.