ADVERTISEMENT

ರಾಮನಗರ: ಫಿನಾಯಿಲ್‌ ಕುಡಿದು ಕೊಲೆ ಆರೋಪಿ ಸಾವು

ಕನಕಪುರ ಗ್ರಾಮೀಣ ಠಾಣೆಯ ಮೂವರು ಸಿಬ್ಬಂದಿ ಅಮಾನತು: ಸಿಐಡಿ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 12:09 IST
Last Updated 14 ಮಾರ್ಚ್ 2021, 12:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಮನಗರ: ಕನಕಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಫಿನಾಯಿಲ್‌ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿ ಸೀಗೆಕೋಟೆ ವೀರಭದ್ರಾಚಾರಿ (50) ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಸಾವನ್ನಪ್ಪಿದರು. ಪ್ರಕರಣ ಸಂಬಂಧ ಮೂವರು ಪೊಲೀಸರು ಸೇವೆಯಿಂದ ಅಮಾನತಾಗಿದ್ದಾರೆ.

ಈಚೆಗೆ ಕನಕಪುರ ತಾಲ್ಲೂಕಿನ ಹಳ್ಳಿಮಾರನಹಳ್ಳಿ ಜೆಡಿಎಸ್ ಮುಖಂಡ ನಾಗರಾಜು ಕೊಲೆಯಾಗಿತ್ತು. ಹತ್ಯೆಗೀಡಾದ ವ್ಯಕ್ತಿ ಜೊತೆ ವೀರಭದ್ರಾಚಾರಿ ಹಣಕಾಸು ವ್ಯವಹಾರ ನಡೆಸಿದ್ದು, ವೈಷಮ್ಯದಿಂದ ಹತ್ಯೆ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನದ ಹಿಂದೆ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಗಿತ್ತು. ಆ ಸಂದರ್ಭ ಆರೋಪಿಯು ಠಾಣೆಯಲ್ಲೇ ಫಿನಾಯಿಲ್ ಕುಡಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

‘ವೀರಭದ್ರಾಚಾರಿ ಅವರ ಸಾವಿಗೆ ಪೋಲಿಸರೇ ಕಾರಣ’ ಎಂದು ಅವರ ಸಂಬಂಧಿಕರು ದೂರಿದ್ದಾರೆ.

ADVERTISEMENT

ಸಿಐಡಿ ತನಿಖೆ: ‘ಈ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಕನಕಪುರ ಗ್ರಾಮೀಣ ಠಾಣೆ ಸಬ್‌ ಇನ್‌ಸ್ಪೆಕ್ಟರ್, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಗಂಭೀರ ಸ್ವರೂಪದ ಪ್ರಕರಣ ಆದ್ದರಿಂದ ಸಿಐಡಿ ತನಿಖೆಗೆ ವಹಿಸಲಾಗಿದೆ’ ಎಂದು ರಾಮನಗರ ಎಸ್ಪಿ ಗಿರೀಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.