ADVERTISEMENT

ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣ; ಆರೋಪಿ ರಾಕೇಶ್ ಮಲ್ಲಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 9:14 IST
Last Updated 22 ಏಪ್ರಿಲ್ 2025, 9:14 IST
   

ರಾಮನಗರ: ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ತಾಲ್ಲೂಕಿನ ಬಿಡದಿ ಬಳಿ ಏ. 18ರಂದು ರಾತ್ರಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಪ್ರಕರಣದ ಮೊದಲ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ ಅವರನ್ನು ಮಂಗಳವಾರ ಬಿಡದಿ ಠಾಣೆಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು.

ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ರಾಕೇಶ್ ಅವರು, ತಮ್ಮ ವಕೀಲರೊಂದಿಗೆ ಮಧ್ಯಾಹ್ನ ವಿಚಾರಣೆಗೆ ಹಾಜರಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ನೇತೃತ್ವದಲ್ಲಿ ಡಿವೈಎಸ್ಪಿಗಳು ಮತ್ತು ಇನ್ಸ್‌ಪೆಕ್ಟರ್ ಗಳನ್ನು ಒಳಗೊಂಡ ತಂಡ ರಾಕೇಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರಾಕೇಶ್ ಮಲ್ಲಿ ಒಂದು ಕಾಲದಲ್ಲಿ ಮುತ್ತಪ್ಪ ರೈ ಅವರ ಬಲಗೈ ಬಂಟನಂತಿದ್ದರು. ನಂತರ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರೈ‌ ಅವರು ನನಗೆ ವಂಚನೆ ಮಾಡಿ, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಕೇಶ್ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದರು. ಆ ಮೇರೆಗೆ ರೈ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು.

ADVERTISEMENT

ರೈ ನಿಧನದ ಬಳಿಕ ಬಂಟ್ವಾಳದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ರಾಕೇಶ್, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು.

ಒಬ್ಬನ ಮೇಲೆ ಹೆಚ್ಚಿದ ಸಂಶಯ: ತೀವ್ರ ವಿಚಾರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರು ದಿನಗಳಿಂದ ಹಲವರನ್ನು ವಿಚಾರಣೆ ಮಾಡಲಾಗುತ್ತಿದೆ. ಇದರಲ್ಲಿ ಒಬ್ಬನ ಮೇಲೆ ಸಂಶಯ ಬಂದಿದೆ. ಆತನ ಪಾತ್ರದ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ. ದೂರಿನಲ್ಲಿ ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಅದರಲ್ಲಿ ಮೂವರ ಜೊತೆ ಮಾತನಾಡಿದ್ದು, ವಿಚಾರಣೆಗೆ ಬರುವುದಾಗಿ ಹೇಳಿದ್ದಾರೆ. ಎರಡನೇ ಆರೋಪಿ ಅನುರಾಧ ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯಕ್ಕೆ ಅನುಮಾನ ಇದ್ದವರನ್ನು ವಿಚಾರಣೆ ಮಾಡುತ್ತಿದ್ದೇವೆ. ಯಾವ ಕಾರಣಕ್ಕೆ ಗುಂಡಿನ‌ ದಾಳಿ ಮಾಡಿದ್ದಾರೆ ಎಂಬುದು ಇದುವರೆಗೆ ತಿಳಿದಿಲ್ಲ. ಆದರೆ, ರಿಕ್ಕಿ ರೈ ಕಡೆಯವರು ಕೂಡ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಹಾಗಾಗಿ, ಅವರ ಅಂಗರಕ್ಷಕರ ಬಂದೂಕುಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಈ ಪೈಕಿ ವಿಠ್ಠಲ್ ಎಂಬಾತನಿಗೆ ಅನಾರೋಗ್ಯವಾಗಿದ್ದು ಆಸ್ಪತ್ರೆಯಲ್ಲಿದ್ದಾರೆ. ಅವರನ್ನು ಸಹ ವಿಚಾರಣೆ ಮಾಡಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.