ADVERTISEMENT

ಸಂಘಟಿತ ಯತ್ನವೇ ನರೇಗಾ ಸಾಧನೆಗೆ ಕಾರಣ

ಕನಕಪುರ ತಾಲ್ಲೂಕಿಗೆ ರಾಷ್ಟ್ರ ಪ್ರಶಸ್ತಿ - ಜನಪ್ರತಿನಿಧಿಗಳು, ಅಧಿಕಾರಿಗಳ ವಿಶೇಷ ಸಭೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 14:40 IST
Last Updated 21 ಡಿಸೆಂಬರ್ 2019, 14:40 IST
ನರೇಗಾ ಅನುಷ್ಠಾನದಲ್ಲಿ ರಾಷ್ಟ್ರದಲ್ಲೇ ಪ್ರಥಮ ಸ್ಥಾನ ಪಡೆದ ತಾಲ್ಲೂಕ್‌ ಪುರಸ್ಕಾರವನ್ನು ಶಿವರಾಮ್‌.ಟಿ.ಎಸ್‌ ಮತ್ತು ಭೈರೇಗೌಡ ವೈ.ಡಿ ಸ್ವೀಕರಿಸುತ್ತಿರುವುದು
ನರೇಗಾ ಅನುಷ್ಠಾನದಲ್ಲಿ ರಾಷ್ಟ್ರದಲ್ಲೇ ಪ್ರಥಮ ಸ್ಥಾನ ಪಡೆದ ತಾಲ್ಲೂಕ್‌ ಪುರಸ್ಕಾರವನ್ನು ಶಿವರಾಮ್‌.ಟಿ.ಎಸ್‌ ಮತ್ತು ಭೈರೇಗೌಡ ವೈ.ಡಿ ಸ್ವೀಕರಿಸುತ್ತಿರುವುದು   

ಕನಕಪುರ: ನರೇಗಾ ಯೋಜನೆಯ ಅನುಷ್ಠಾನದಲ್ಲಿ ಇಡೀ ರಾಷ್ಟ್ರದಲ್ಲೇ ಕನಕಪುರ ತಾಲ್ಲೂಕಿಗೆ ಪ್ರಥಮ ಸ್ಥಾನ ಬಂದಿದೆ. ಈ ಒಂದು ಪ್ರಶಸ್ತಿ ಬರಲು ಎಲ್ಲರ ಸಂಘಟಿತ ಸಹಕಾರವೇ ಕಾರಣವಾಗಿದ್ದು, ಈ ಗರಿಮೆ ಗ್ರಾಮ ಪಂಚಾಯಿತಿ ಕಂಪ್ಯೂಟರ್‌ ಆಪರೇಟರ್‌, ಸಿಬ್ಬಂದಿಯಿಂದ ಜಿಲ್ಲಾ ಪಂಚಾಯಿತಿ ಸಿಇಒ ವರೆಗೂ ಸಲ್ಲುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎಸ್‌.ಶಿವರಾಮ್‌ ತಿಳಿಸಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭೈರೇಗೌಡ.ವೈ.ಡಿ ಅವರ ಅಧ್ಯಕ್ಷತೆಯಲ್ಲಿ ಕನಕಪುರ ತಾಲ್ಲೂಕಿಗೆ ನರೇಗಾದಲ್ಲಿ ರಾಷ್ಟ್ರ ಪ್ರಶಸ್ತಿ ಬಂದಿರುವ ಸಂಬಂಧ ಕರೆದಿದ್ದ 43 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.

‘ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಬರಬೇಕೆಂದು ಕೆಲಸ ಮಾಡಿಲ್ಲ. ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ಡಿ.ಕೆ.ಸುರೇಶ್‌ ಅವರು ತಾಲ್ಲೂಕಿನಲ್ಲಿ ನರೇಗಾ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡಿ ಹೆಚ್ಚಿನ ಕಾಮಗಾರಿಗಳು ಆಗಬೇಕೆಂದು ಬಯಸಿದ್ದು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಅಗತ್ಯ ಸಹಕಾರ ನೀಡಿ ಉತ್ತಮ ಪ್ರೋತ್ಸಾಹ ನೀಡಿದ್ದಾರೆ’ ಎಂದರು.

ADVERTISEMENT

ನಮ್ಮ ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿಗಳ ವೀಕ್ಷಣೆಗೆ ಹಲವಾರು ರಾಜ್ಯದಲ್ಲಿ ವೀಕ್ಷಕರ ತಂಡ ಬಂದು ನೋಡಿ ತಮ್ಮ ರಾಜ್ಯಗಳಲ್ಲಿ ಅನುಷ್ಠಾನ ಮಾಡಿವೆ. ಹಲವು ಬಾರಿ ಪರಿಶೀಲನಾ ತಂಡವು ಬಂದು ಪರಿಶೀಲನೆ ಮಾಡಿದೆ. ರಾಷ್ಟ್ರದಲ್ಲೇ ಅತಿಹೆಚ್ಚು ಕಾಮಗಾರಿಗಳು ಹಾಗೂ ಉತ್ತಮ ಕೆಲಸಗಳು ಆಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ನಮ್ಮ ತಾಲ್ಲೂಕು ಆಯ್ಕೆಯಾಗಲು ಸಾಧ್ಯವಾಯಿತು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭೈರೇಗೌಡ.ವೈ.ಡಿ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಈ ಒಂದು ಸಾಧನೆ ಮಾಡಲು ಡಿ.ಕೆ.ಶಿವಕುಮಾರ್‌ ಸಹೋದರರೇ ನೇರ ಕಾರಣ, ಅವರು ಕೊಟ್ಟ ಪ್ರೋತ್ಸಾದಿಂದ ಇಲ್ಲಿ ದೊಡ್ಡಮಟ್ಟದ ಕೆಲಸಗಳಾಗಿವೆ. ಈ ಒಂದು ಪ್ರಶಸ್ತಿಯು ಜವಾಬ್ದಾರಿಯನ್ನು ಹೆಚ್ಚಿಸಿದೆ. ನರೇಗಾ ಯೋಜನೆಯಿಂದ ಎಲ್ಲಾ ಹಳ್ಳಿಗಳು ಅಭಿವೃದ್ಧಿಯಾಗಿವೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ಬಾಬು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.