ADVERTISEMENT

ಕೋಲೂರು ರೈಲ್ವೆ ಅಂಡರ್‌ಪಾಸ್‌ಗೆ ಹೊಸರೂಪ: ಗ್ರಾಮಸ್ಥರ ಮೆಚ್ಚುಗೆ

ಎಚ್.ಎಂ.ರಮೇಶ್
Published 15 ಮೇ 2025, 4:27 IST
Last Updated 15 ಮೇ 2025, 4:27 IST
ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗಾಂಧಿಗ್ರಾಮದಿಂದ ಕೋಲೂರು ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ 2022ರಲ್ಲಿ ಇದ್ದ ರೈಲ್ವೆ ಅಂಡರ್ ಪಾಸ್
ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗಾಂಧಿಗ್ರಾಮದಿಂದ ಕೋಲೂರು ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ 2022ರಲ್ಲಿ ಇದ್ದ ರೈಲ್ವೆ ಅಂಡರ್ ಪಾಸ್   

ಚನ್ನಪಟ್ಟಣ: ತಾಲ್ಲೂಕಿನ ಕೋಲೂರು ಗಾಂಧಿ ಗ್ರಾಮದಿಂದ ಕೋಲೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ರೈಲ್ವೆ ಗೇಟ್ ಅಂಡರ್‌ಪಾಸ್‌ನಲ್ಲಿ ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆಗೆ ಪರಿಹಾರ ಕಲ್ಪಿಸುವಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಪ್ರಮುಖ ಪಾತ್ರ ವಹಿಸಿದ್ದು, ಈ ಭಾಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಎರಡೂ ಗ್ರಾಮಗಳ ಮಧ್ಯೆ ಇರುವ ರೈಲ್ವೆಗೇಟ್‌ನ ಅಂಡರ್ ಪಾಸ್‌ನಲ್ಲಿ ಮಳೆಗಾಲದಲ್ಲಿ ನೀರು ನಿಂತು ಇಲ್ಲಿನ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಬಂದ ಮನವಿ ಮೇರೆಗೆ ಈ ರೈಲ್ವೆ ಗೇಟ್ ಅಂಡರ್ ಪಾಸ್‌ಗೆ ಹೊಸರೂಪ ಕೊಡಿಸುವಲ್ಲಿ ಅವರು ಶ್ರಮಿಸಿದ್ದಾರೆ. ಈಗ ಇಲ್ಲಿನ ಪ್ರಯಾಣಿಕರು, ವಾಹನ ಸವಾರರು ಯಾವುದೇ ತೊಂದರೆ ಇಲ್ಲದೆ ರೈಲ್ವೆ ಗೇಟ್ ಅಂಡರ್‌ಪಾಸ್‌ನಲ್ಲಿ ಪ್ರಯಾಣಿಸುವಂತಾಗಿದೆ.

ಎರಡೂ ಗ್ರಾಮಗಳ ಮಧ್ಯೆ ರೈಲ್ವೆ ಹಳಿ ಹಾದು ಹೋಗುತ್ತದೆ. ಈ ಗ್ರಾಮಗಳ ಮಧ್ಯೆ ಸಂಪರ್ಕ ರಸ್ತೆಗೆ ರೈಲ್ವೆ ಇಲಾಖೆ ಅಂಡರ್ ಪಾಸ್ ನಿರ್ಮಾಣ ಮಾಡಿತ್ತು. ಆದರೆ, ಈ ಅಂಡರ್ ಪಾಸ್‌ನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿತ್ತು. ಈ ಬಗ್ಗೆ ಈ ಭಾಗದ ವಾಹನ ಸವಾರರು, ಗ್ರಾಮಸ್ಥರು ಸಂಸದರಿಗೆ ಮನವಿ ಪತ್ರ ನೀಡಿದ್ದರು. ಇದರ ಬಗ್ಗೆ ಗಮನ ನೀಡಿದ ಮಂಜುನಾಥ್ ಅವರು, ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ 2022ರಲ್ಲಿ ಪತ್ರ ಬರೆದು ಇಲ್ಲಿನ ಜನರಿಗೆ ಆಗುತ್ತಿದ್ದ ಸಮಸ್ಯೆಯನ್ನು ಅವರ ಗಮನಕ್ಕೆ ತಂದು, ಸಮಸ್ಯೆ ಇತ್ಯರ್ಥಕ್ಕೆ ತಾವೇ ಸ್ವತಃ ಮುತುವರ್ಜಿ ವಹಿಸಿದ್ದರು.

ADVERTISEMENT

ಎರಡೂ ಗ್ರಾಮಗಳ ನಡುವೆ ಈ ಮೊದಲು ರೈಲ್ವೆ ಗೇಟ್ ಅಳವಡಿಸಲಾಗಿತ್ತು. ಬೆಂಗಳೂರು–ಮೈಸೂರು ನಡುವೆ ಪ್ರತಿದಿನ 30ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದ ಕಾರಣ ರೈಲು ಸಂಚರಿಸುವ ವೇಳೆ ರೈಲ್ವೆ ಗೇಟ್ ಮುಚ್ಚಲಾಗುತ್ತಿತ್ತು. ಆಗ ಇಲ್ಲಿನ ವಾಹನ ಸವಾರರು, ಪ್ರಯಾಣಿಕರು ರೈಲು ಗೇಟ್ ತೆಗೆಯುವವರೆಗೂ ಕಾದು ನಿಲ್ಲುವಂತಾಗಿತ್ತು. ಆ ವೇಳೆ ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರ ಗಮನಕ್ಕೆ ಗ್ರಾಮಸ್ಥರು ತಂದಿದ್ದರು. ಡಿ.ಕೆ.ಸುರೇಶ್ ಅವರು ಅಂದು ರೈಲ್ವೆ ಇಲಾಖೆವರಿಗೆ ಮನವಿ ಮಾಡಿ ಇಲ್ಲಿ ಅಂಡರ್‌ ಪಾಸ್ ನಿರ್ಮಾಣ ಮಾಡಿಸಿದ್ದರು.

ಆದರೆ, ಇಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿ ಉದ್ಘಾಟನೆಯಾಗಿ ಸಮಸ್ಯೆ ಪರಿಹಾರವಾಯಿತು ಎಂದುಕೊಳ್ಳುತ್ತಿರುವಾಗಲೇ ಮಳೆಗಾಲ ಆರಂಭವಾಗಿ ಇಡೀ ಅಂಡರ್ ಪಾಸ್ ಕೆರೆಯಂತಾಯಿತು. ವಾಹನ ಸವಾರರು ರೈಲ್ವೆ ಹಳಿ ದಾಟಲು ಮತ್ತೊಂದು ಸಮಸ್ಯೆ ಎದುರಿಸುವಂತಾಯಿತು. 2022ರಲ್ಲಿ ಆಗಿನ ಶಾಸಕ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೊಕ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಮಂದಿ ಪ್ರತ್ಯೇಕವಾಗಿ ಭೇಟಿ ನೀಡಿ ಅಂಡರ್ ಪಾಸ್ ವೀಕ್ಷಣೆ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅದು ಕಾರ್ಯಗತವಾಗಿರಲಿಲ್ಲ.

2025ರಲ್ಲಿ ಹೊಸರೂಪ ನೀಡಿರುವ ರೈಲ್ವೆ ಅಂಡರ್ ಪಾಸ್

ಕೇಂದ್ರ ಸಚಿವ ಸೋಮಣ್ಣಗೆ ಪತ್ರ

ಪ್ರತಿ ಬಾರಿ ಮಳೆ ಬಂದಾಗ ಸಮಸ್ಯೆ ಎದುರಿಸುತ್ತಿದ್ದ ಈ ಭಾಗದ ಪ್ರಯಾಣಿಕರು ವಾಹನ ಸವಾರರು ಈಗಿನ ಸಂಸದ ಡಾ.ಮಂಜುನಾಥ್ ಅವರ ಗಮನ ಸೆಳೆದಾಗ ಅವರು 2024 ಆಗಸ್ಟ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಸಮಸ್ಯೆ ಬಗ್ಗೆ ಪತ್ರ ಬರೆದು ಗಮನ ಸೆಳೆದಿದ್ದರು. ಈ ಬಗ್ಗೆ ಸೋಮಣ್ಣ ಅವರು ನೀಡಿದ ಸೂಚನೆಯಂತೆ ರೈಲ್ವೆ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಎಷ್ಟೇ ಮಳೆ ಬಂದರೂ ನೀರು ಅಂಡರ್ ಪಾಸ್‌ಗೆ ಹೋಗದಂತೆ ಮಾಡಿ ಕೆಳ ಸೇತುವೆಯಲ್ಲಿ ನೀರು ನಿಲ್ಲದಂತೆ ಸರಾಗಿ ಹರಿದು ಹೋಗುವಂತೆ ಚರಂಡಿ ಮಾಡಲಾಗಿದೆ ಅಂಡರ್ ಪಾಸ್‌ಗೆ ಮೇಲ್ಛಾವಣಿ ಮಾಡಿಸಿ ರಸ್ತೆಯಲ್ಲಿ ಹರಿಯುವ ನೀರು ನಿಲ್ಲದಂತೆ ಕಾಮಗಾರಿ ಮಾಡಿಸುವಲ್ಲಿ ಸಂಸದ ಮಂಜುನಾಥ್ ಶ್ರಮಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.