ADVERTISEMENT

ಹೆದ್ದಾರಿ ಚಪ್ಪಲಿ ಇದ್ದ ಹಾಗೇ, ದಿನ ಸವೆಯುತ್ತಲೇ ಇರುತ್ತದೆ:NHAI ಯೋಜನಾ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 5:50 IST
Last Updated 16 ಮಾರ್ಚ್ 2023, 5:50 IST
ಮೈಸೂರು ಬೆಂಗಳೂರು ಹೆದ್ದಾರಿ
ಮೈಸೂರು ಬೆಂಗಳೂರು ಹೆದ್ದಾರಿ   

ರಾಮನಗರ: ಮೈಸೂರು ಬೆಂಗಳೂರು ಹೆದ್ದಾರಿ ರಸ್ತೆ ಹಾಳಾಗಿರುವ ಕುರಿತು ‘ಪ್ರಜಾವಾಣಿ’ ವರದಿಗೆ ಪ್ರತಿಕ್ರಿಯೆ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್, ‘ಅಲ್ಲಿ ಮೆಟಲ್‌ ಜಾಯಿಂಟ್‌ ಬಿಟ್ಟು ಹೋದ ಕಾರಣ ಸಮಸ್ಯೆ ಆಗಿದೆ. ಆ ಸೇತುವೆ ಮೇಲೆ ವಾಹನಗಳ ಓಡಾಟದ ವೇಗಕ್ಕೆ ಮಿತಿ ಇದೆ. ಅದಕ್ಕಿಂತ ಹೆಚ್ಚು ವೇಗದಿಂದ ವಾಹನಗಳು ಸಂಚರಿಸುತ್ತಿರುವ ಕಾರಣ ಸಮಸ್ಯೆ ಆಗಿದೆ. ಹೆದ್ದಾರಿಯು ಚಪ್ಪಲಿ ಇದ್ದ ಹಾಗೇ. ದಿನ ಸವೆಯುತ್ತಲೇ ಇರುತ್ತದೆ. ಹೀಗಾಗಿ ಅದನ್ನು ದುರಸ್ತಿ ಮಾಡಲು ಕಾಮಗಾರಿ ನಡೆದಿದೆ’ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರಿನ ಕಣಮಿಣಕಿ ಟೋಲ್ ಬಳಿ ಬುಧವಾರ ಕನ್ನಡಪರ ಸಂಘ ಟನೆಗಳ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಅವರು ಸರ್ವೀಸ್ ರಸ್ತೆಕಾಮಗಾರಿ ಅಪೂರ್ಣಗೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

ಟೋಲ್ ಕಟ್ಟುವವರು ಯಾರು?

ADVERTISEMENT

‘ಎಲ್ಲರೂ ಸರ್ವೀಸ್ ರಸ್ತೆಯಲ್ಲೇ ಹೋದರೆ ಹೆದ್ದಾರಿಯಲ್ಲಿ ಟೋಲ್ ಕಟ್ಟುವವರು ಯಾರು? ಪ್ರಮುಖ ಸೇತುವೆ, ರೈಲ್ವೆ ಟ್ರ್ಯಾಕ್ ಇರುವ ಕಡೆ ಸರ್ವೀಸ್‌ ರಸ್ತೆ ಮಾಡಬಾರದು ಎಂದು ಕಾನೂನಿನಲ್ಲಿಯೇ ಇದೆ ಗೊತ್ತಾ?’ ಎಂದು ಹೇಳಿದರು.

‘ಇಂಡಿಯನ್ ರೋಡ್ ಕಾಂಗ್ರೆಸ್‌ನ ಷಟ್ಪಥ ಕೈಪಿಡಿ ಪ್ರಕಾರ ಪ್ರಮುಖ ಸೇತುವೆಗಳು ಹಾಗೂ ರೈಲ್ವೆ ಸೇತುವೆಗಳು ಇರುವ ಕಡೆ ಸರ್ವೀಸ್‌ ರಸ್ತೆಗಳ ಸಂಪರ್ಕ ಕೊಡಬಾರದು ಎಂದು ಇದೆ.

ಈ ಹೆದ್ದಾರಿಯನ್ನು ನಾವು ಸರ್ಕಾರದಿಂದಲೇ ಕಟ್ಟಿರಬಹುದು. ಆದರೆ ಸರ್ಕಾರಿ–ಖಾಸಗಿ ಸಹಭಾಗಿತ್ವ ದಲ್ಲಿ ಇವು ನಿರ್ಮಾಣವಾಗಿದ್ದು, ಅವು ಆರ್ಥಿಕವಾಗಿಯೂ ಲಾಭದಾ ಯಕವಾಗಬೇಕಾಗುತ್ತದೆ. ಈ ಎಲ್ಲ ಆಯಾಮಗಳಿಂದಲೂ ನಾವು ಆಲೋಚನೆ ಮಾಡಬೇಕಾಗುತ್ತದೆ’ ಎಂದು ವಿವರಿಸಿದರು.

ದಶಪಥವಲ್ಲ, ಆರೇ ಪಥ: ‘ಬೆಂಗಳೂರು–ಮೈಸೂರು ಹೆದ್ದಾರಿಯು ವಾಸ್ತವದಲ್ಲಿ ಕೇವಲ ಆರು ಪಥದ ರಸ್ತೆ. ಅಷ್ಟಕ್ಕೆ ಮಾತ್ರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಾಸ್ತವದಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಈ ಯೋಜನೆಯಲ್ಲಿ ಇಲ್ಲ. ಆದಾಗ್ಯೂ ಜನರ ಹಿತದೃಷ್ಟಿಯಿಂದ ತಲಾ ಎರಡು ಪಥಗಳ ಸರ್ವೀಸ್ ರಸ್ತೆ ನಿರ್ಮಾಣ ಮಾಡಿ ನಿರ್ವಹಣೆಯನ್ನೂ ಮಾಡುತ್ತಿದ್ದೇವೆ’ ಎಂದು ಅವರು ಸಮಜಾಯಿಷಿ ನೀಡಿದರು.

‘ದೇಶದಲ್ಲಿ ಗ್ರೀನ್‌ ಫೀಲ್ಡ್‌ ಮತ್ತು ಬ್ರೌನ್‌ ಫೀಲ್ಡ್‌ ಎಂಬ ಎರಡು ಥರದ ಹೆದ್ದಾರಿಗಳು ಇವೆ. ನೈಸ್‌ ರಸ್ತೆಯು ಗ್ರೀನ್‌ ಫೀಲ್ಡ್ ಮಾದರಿ ಹೆದ್ದಾರಿ ಆಗಿದ್ದು, ಅಲ್ಲಿ ಮಧ್ಯೆ ಯಾವ ಜನವಸತಿಗಳೂ ಬರುವುದಿಲ್ಲ. ಆದರೆ ಬೆಂಗಳೂರು–ಮೈಸೂರು ಹೆದ್ದಾರಿ ಈ ಎರಡರ ಮಿಶ್ರಣವಾಗಿದ್ದು, ಇದರಿಂದ ವೆಚ್ಚ ಹೆಚ್ಚಾಗಿದೆ. ಕೇಂದ್ರದ ಮಾನದಂಡದ ಪ್ರಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಿವಿಲ್‌ ಕಾಮಗಾರಿಗೆಪ್ರತಿ ಕಿ.ಮೀ.ಗೆ ₹16 ಕೋಟಿ ವೆಚ್ಚವಾದರೆ, ಈ ಹೆದ್ದಾರಿಗೆ ಕಿ.ಮೀ.ಗೆ ಸರಾಸರಿ ₹33 ಕೋಟಿ ವೆಚ್ಚವಾಗಿದೆ. ಒಟ್ಟು 89 ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ ಕಟ್ಟಿದ್ದು, ಇದರಿಂದ ವೆಚ್ಚ ಏರಿದೆ’ ಎಂದು ಅವರು ವಿವರಿಸಿದರು.

ಹೆದ್ದಾರಿಯಲ್ಲಿ ಅಪಘಾತಗಳ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಹೆದ್ದಾರಿಯ ಪ್ರತಿ ತಿರುವಿನಲ್ಲೂ ಗರಿಷ್ಠ ವೇಗದ ಮಿತಿ ನಿಗದಿ ಮಾಡಲಾಗಿದೆ. ಪ್ರಯಾಣಿಕರೂ ತಮ್ಮ ಜವಾಬ್ದಾರಿ ಅರಿತು ಪ್ರಯಾಣ ಮಾಡಿದರೆ ಅಪಘಾತ ತಪ್ಪಿಸಬಹುದು’ ಎಂದು
ಹೇಳಿದರು.

ವಕೀಲ ಎ.ಪಿ. ರಂಗನಾಥ್‌, ಸಂಘಟನೆಗಳ ಮುಖಂಡರಾದ ನೀಲೇಶ್‌ ಗೌಡ, ನರಸಿಂಹ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.