ನಿಖಿಲ್ ಕುಮಾರಸ್ವಾಮಿ
ರಾಮನಗರ: ‘ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ. ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ. ನಾನು ಪಲಾಯನವಾದಿ ರಾಜಕಾರಣ ಮಾಡಲ್ಲ. ನಮ್ಮ ಕಾರ್ಯಕರ್ತರ ಆದೇಶವೇ ಅಂತಿಮ’ ಎನ್ನುವ ಮೂಲಕ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದರು.
ತಾಲ್ಲೂಕಿನ ತೆಂಗಿನಕಲ್ಲು ಮತ್ತು ಕಡ್ಲೆಸುಬ್ಬಯ್ಯನದೊಡ್ಡಿ ಗ್ರಾಮದ ಕೋಟೆಮಾರಮ್ಮ ದೇವಿಯ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕುಂಭಾಭಿಷೇಕ ಮಹೋತ್ಸವದಲ್ಲಿ ಮಂಗಳವಾರ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಮುಂದಿನ ಚುನಾವಣೆಯಲ್ಲಿ ನಾನು ಎಲ್ಲಿಂದ ಸ್ಪರ್ಧಿಸುತ್ತೇನೆ ಎಂಬುದರ ಬಗ್ಗೆ ಪದೇ ಪದೇ ಪ್ರಶ್ನೆ ಕೇಳಬೇಡಿ. ರಾಮನಗರದಲ್ಲಿ ಸ್ಪರ್ಧಿಸುವ ವಿಷಯದಲ್ಲಿ ಅಷ್ಟೊಂದು ಅನುಮಾನ ಬೇಡ. ವಿರೋಧಿಗಳು ಎಲ್ಲಾ ಕಡೆಯಿಂದ ನನಗೆ ರೌಂಡಪ್ ಆಗಿದ್ದಾರೆ. ಮುಂದೆಯೂ ಆಗುತ್ತಾರೆ. ಆದರೆ, ಜನ ನನ್ನನ್ನು ಕಾಪಾಡುವ ವಿಶ್ವಾಸವಿದೆ’ ಎಂದು ಹೇಳಿದರು.
ಸಿ.ಎಂ ಬೆಳವಣಿಗೆಗೆ ಎಚ್‌ಡಿಡಿ ಕಾರಣ: ‘ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ 18ನೇ ಬಜೆಟ್ ಮಂಡನೆ ಮಾಡಲು ಸಿದ್ದವಾಗುತ್ತಿರುವುದಕ್ಕೆ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಹಾಗೂ ಜನತಾದಳ ಪಕ್ಷವೇ ಕಾರಣ’ ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ಗೆ ನಿಖಿಲ್ ಪ್ರತಿಕ್ರಿಯಿಸಿದರು.
‘ಅಂದು ಪಕ್ಷದಲ್ಲಿ ಅಗ್ರಗಣ್ಯ ನಾಯಕರಿದ್ದರೂ ಸಿದ್ದರಾಮಯ್ಯ ಅವರ ಕೈಯಲ್ಲಿ ಸಾಮಾಜಿಕ ನ್ಯಾಯದ ಬದ್ಧತೆಯ ಬಜೆಟ್ ಮಂಡನೆ ಮಾಡಿಸಿದ್ದು ದೇವೇಗೌಡರು. ಅಂದು ಹಾಗೆ ಮಾಡಿಲ್ಲದಿದ್ದರೆ, ಇಂದು ಸಿದ್ದರಾಮಯ್ಯ ಅವರು 18ನೇ ಬಜೆಟ್ ಮಂಡಿಸುತ್ತಿದ್ರಾ? ಇತಿಹಾಸ ತಿಳಿದುಕೊಂಡು ಮಾತನಾಡಬೇಕು’ ಎಂದು ತಿರುಗೇಟು ನೀಡಿದರು.
‘ಎಂಟು ವರ್ಷ ಮುಖ್ಯಮಂತ್ರಿಯಾಗಿ 35 ವರ್ಷ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯ ಅವರು, ದೇವರಾಜು ಅರಸು ದಾಖಲೆ ಬ್ರೇಕ್ ಮಾಡಿದ್ದಾರೆ. ಇಷ್ಟೆಲ್ಲಾ ಯೋಗ ಮಾಡಿರುವಂತಹ ಮುಖ್ಯಮಂತ್ರಿ ಬಾಯಲ್ಲಿ ಇಂತಹ ಮಾತು ನಿರೀಕ್ಷಿಸಿರಲಿಲ್ಲ. ಸಮಾಜ ಮತ್ತು ಸಮುದಾಯ ಮುಂದಿಟ್ಟುಕೊಂಡು ರಕ್ಷಣೆ ಪಡೆಯುವ ಕೆಲಸ ಮಾಡಬಾರದು’ ಎಂದು ಕಿಡಿಕಾರಿದರು.
ಸಚಿವರ ಬದಲಾವಣೆ ಕುರಿತು 31 ‘ಕೈ’ ಶಾಸಕರ ಪತ್ರದ ಕುರಿತು ಪ್ರತಿಕ್ರಿಯಿಸಿ, ‘ಸಚಿವರ ಬದಲಾವಣೆಯಲ್ಲ, ಕಾಂಗ್ರೆಸ್ ಸರ್ಕಾರವನ್ನೇ ಬದಲಾವಣೆ ಮಾಡುವ ಕೆಲಸವಾಗಬೇಕು. ಈ ಸರ್ಕಾರದಲ್ಲಿ ಯಾರನ್ನೇ ಬದಲಾಯಿಸಿದರೂ ಅಭಿವೃದ್ಧಿಯಾಗದು. ಇನ್ನೆರಡು ವರ್ಷದಲ್ಲಿ ಎಷ್ಟಾಗುತ್ತೊ ಅಷ್ಟು ಲೂಟಿ ಮಾಡಬೇಕೆಂಬ ಮನಸ್ಥಿತಿಯಲ್ಲಿ ಎಲ್ಲರೂ ಇದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಪಕ್ಷ ಸಂಘಟನೆಗಾಗಿ ಇದುವರೆಗೆ ನಾನು ರಾಜ್ಯದಾದ್ಯಂತ 9 ಸಾವಿರ ಕಿ.ಮೀ. ಪ್ರವಾಸ ಮಾಡಿದ್ದೇನೆ. ಹೋದಲೆಲ್ಲಾ ಜನರು ಸರ್ಕಾರದ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಈಗಲೇ ಚುನಾವಣೆ ನಡೆದರೆ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿ ಬೀದಿಗೆ ತಳ್ಳುತ್ತಾರೆ’ ಎಂದು ಕಿಡಿಕಾರಿದರು.
‘ಯುವಜನರ ಕಿಚ್ಚು ರಾಜ್ಯ ವ್ಯಾಪಿಸಲಿದೆ’
‘ಧಾರವಾಡದಲ್ಲಿ ಹೊತ್ತಿಕೊಂಡಿರುವ ನಿರುದ್ಯೋಗಿ ಯುವಜನರ ಕಿಚ್ಚು ಇಡೀ ರಾಜ್ಯಕ್ಕೆ ವ್ಯಾಪಿಸುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದರೂ, ಒಂದೇ ಒಂದು ಹುದ್ದೆ ಭರ್ತಿ ಮಾಡಿಲ್ಲ. ಉದ್ಯೋಗ ಭರ್ತಿ ಮತ್ತು ಸೃಷ್ಟಿಯ ಭರವಸೆ ನೀಡಿದ್ದ ನಾಯಕರು ಕುರ್ಚಿ ಕಾಳಗದಲ್ಲಿ ಮುಳುಗಿದ್ದಾರೆ. ನಿರುದ್ಯೋಗಿಗಳಿಗೆ ಯುವನಿಧಿ ಗ್ಯಾರಂಟಿಯಡಿ ₹3 ಸಾವಿರ ಕೊಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲಘುವಾಗಿ ಮಾತನಾಡಿದ್ದಾರೆ. ಆದರೆ, ಯುವಜನರು ಯುವನಿಧಿ ನಂಬಿಕೊಂಡಿಲ್ಲ. ಅವರಿಗೆ ಬೇಕಿರುವುದು ಸ್ವಾಭಿಮಾನದ ಬದುಕು. ಅದಕ್ಕಾಗಿ ಉದ್ಯೋಗ ಸೃಷ್ಟಿಸಿ ಮಾತು ಉಳಿಸಿಕೊಳ್ಳಬೇಕು’ ಎಂದು ನಿಖಿಲ್ ಆಗ್ರಹಿಸಿದರು.
‘ರಾಜ್ಯದಲ್ಲಿ ಖಾಲಿ ಇರುವ 2.85 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಳೆದ ವರ್ಷವೇ ಸರ್ಕಾರ ಹೇಳಿತ್ತು. ಆದರೆ, ಇದುವರೆಗೆ ಭರ್ತಿ ಮಾಡದಿರುವುದು ಖಂಡನೀಯ. ಇದೇ ಕಾರಣಕ್ಕೆ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರದ ವಿರುದ್ದ ರೊಚ್ಚಿಗೆದಿದ್ದಾರೆ. ಯುವಕರ ಕಿಚ್ಚು ರಾಜ್ಯಕ್ಕೆ ವ್ಯಾಪಿಸುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳುಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.