ADVERTISEMENT

ಗೋವು ಅಕ್ರಮ ಸಾಗಣೆ: ಕ್ರಮಕ್ಕೆ ಸೂಚನೆ

ಸಚಿವ ಪ್ರಭು ಚವಾಣ್‌ರಿಂದ ಪಶು ಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:15 IST
Last Updated 16 ಫೆಬ್ರುವರಿ 2021, 3:15 IST
ಸಭೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಮಾತನಾಡಿದರು
ಸಭೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಮಾತನಾಡಿದರು   

ರಾಮನಗರ: ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಣೆ ಮತ್ತು ವಧೆ ಬಗ್ಗೆ ಪೊಲೀಸ್ ಇಲಾಖೆ ಸಹಾಯದಿಂದ ಎಚ್ಚರವಹಿಸಿ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನೆ ಸಚಿವ ಪ್ರಭು ಚವಾಣ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಾನುವಾರು ಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾದ ನಂತರ ಪಶುಸಂಗೋಪನೆ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಗಂಡು ಕರುಗಳನ್ನು ರೈತರು ಸಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸಮಾಲೋಚನೆ ನಡೆಸಿ ಕನಿಷ್ಠ ಮೂರು ತಿಂಗಳವರೆಗೆ ಗಂಡು ಕರುಗಳನ್ನು ಸಾಕಿ ಗೋಶಾಲೆಗಳಿಗೆ ಬಿಡುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು 1,45,095 ಕುಟುಂಬಗಳು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿವೆ. ಜಿಲ್ಲೆಯಲ್ಲಿ 6,13,337 ಪಶು ಸಂಪತ್ತು ಇರುವುದು ಸಂತಸದ ಸಂಗತಿ. ಕೃತಕ ಗರ್ಭಧಾರಣೆ ಕಾರ್ಯಕ್ರಮ ಶೇ 68ರಷ್ಟು ಪ್ರಗತಿ ಹೊಂದಿರುವುದು ಸಂತಸದ ವಿಚಾರ. ಆದರೆ, ಪಶುಸಂಗೋಪನಾ ಇಲಾಖೆಯ ಎಲ್ಲ ಕಾರ್ಯಕ್ರಮಗಳು ರೈತರಿಗೆ ಮುಟ್ಟಬೇಕು ಮತ್ತು ಶೇ 100ರಷ್ಟು ಪ್ರಗತಿ ಕಾಣಬೇಕು ಎಂದರು.

ಹಕ್ಕಿಜ್ವರದ ಪ್ರಕರಣ, ಕಾಲುಬಾಯಿರೋಗ ನಿಯಂತ್ರಣ, ಕೃತಕ ಗರ್ಭಧಾರಣೆ, ಲಂಪಿಸ್ಕಿನ್, ಮೇವಿನ ಲಭ್ಯತೆ, ಕಿಸಾನ್ ಸಂಪರ್ಕ, ಜಾನುವಾರುಗಳಿಗೆ ಆರೋಗ್ಯ ಶಿಬಿರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಾನುವಾರುಗಳು ಹಾಗೂ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.

ಸರ್ಕಾರದಿಂದ ಜಾನುವಾರುಗಳ ಆರೋಗ್ಯಕ್ಕಾಗಿ ಸಮರ್ಪಕವಾದ ಔಷಧಿಗಳನ್ನು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಗೆ ಔಷಧಿಗಳನ್ನು ಹೊರಗಡೆಯಿಂದ ಖರೀದಿಸುವಂತೆ ತಿಳಿಸಬೇಡಿ. ಹೊರಗಡೆಯಿಂದ ಔಷದಿ ಖರೀದಿಸುವ ಬಗ್ಗೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ: ರಾಜ್ಯದ 15 ಜಿಲ್ಲೆಗಳಿಗೆ ಸುಸಜ್ಜಿತವಾದ ಸಂಚಾರಿ ಆಂಬುಲೆನ್ಸ್ ಪಶು ಸಂಜೀವಿನಿ ವಾಹನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಗೂ ಸಹ ನೀಡಲಾಗುವುದು. ತುರ್ತು ಸಮಯದಲ್ಲಿ ರೈತರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ರಂ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಸಿದ್ದರಾಮಯ್ಯ, ಡಿವೈಎಸ್‌ಪಿ ಮೋಹನ್ ಕುಮಾರ್ ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.