
ಪ್ರಜಾವಾಣಿ ವಾರ್ತೆ
ಕನಕಪುರ: ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ನರೇಗಾ ಯೋಜನೆಯಲ್ಲಿ ಸಾವಿರಾರು ಕೋಟಿ ಕೋಟಿ ಖರ್ಚು ಮಾಡಿ ಕಾಮಗಾರಿ ಮಾಡಲಾಗಿದೆ. ಆದರೆ ಗುಣಮಟ್ಟದ ಕಾಮಗಾರಿ ಮಾಡಿ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ ಎಂದು ಸಾಮಾಜಿಕ ಪರಿಶೋಧನೆಯ ತಾಲ್ಲೂಕು ಸಂಯೋಜಕ ಕಮಲಮ್ಮ ಹೇಳಿದರು.
ಕಸಬಾ ಹೋಬಳಿ ಚಾಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ 2024– 25ನೇ ಸಾಲಿನ ವರದಿ ಮಂಡಿಸಿ ಮಾತನಾಡಿದರು.
ನರೇಗಾ ಯೋಜನೆ ಪ್ರಾರಂಭವಾಗಿ 16 ವರ್ಷ ಕಳೆದಿದೆ. ರಾಷ್ಟ್ರದಲ್ಲೆ ಕನಕಪುರ ನರೇಗಾ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ಈಗ ನರೇಗಾ ನಿಯಮಗಳನ್ನು ಬಿಗಿಗೊಳಿಸಿರುವುದು ಯೋಜನೆ ಅನುಷ್ಠಾನ ಮಾಡುವುದು ಕಷ್ಟವಾಗಿದೆ ಎಂದರು.
ತಾಲ್ಲೂಕಿನಲ್ಲಿ ಲಕ್ಷಾಂತರ ಕೃಷಿ ಹೊಂಡ, ಜಮೀನಿನಲ್ಲಿ ಬದು ಮಾಡಿಕೊಂಡಿದ್ದಾರೆ. ಹಣ ಬಿಡುಗಡೆಯಾದ ನಂತರ ಮುಚ್ಚಿ ಹಾಕಿದ್ದಾರೆ. ಈ ಹಿಂದೆ ಸಾಕಷ್ಟು ಲೋಪ ಆಗಿವೆ. ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯಲ್ಲಿ 858 ಕಾಮಗಾರಿ ಅನುಷ್ಠಾನ ಮಾಡಿ ₹4.27 ಕೋಟಿ ಖರ್ಚು ಮಾಡಲಾಗಿದೆ. ಕಾಮಗಾರಿಗಳ ಕಡತಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಆದರೆ 61 ಕಾಮಗಾರಿಗೆ 1, 2 ಮತ್ತು 3ನೇ ಹಂತದ ಭಾವಚಿತ್ರ ಹಾಕಿಲ್ಲ ಎಂದು ತಿಳಿಸಿದರು.
ನರೇಗಾದಲ್ಲಿ ಕೈಗೊಂಡಿದ್ದ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ₹7.90 ಲಕ್ಷ ರಾಜಧನ ಪಾವತಿ ಮಾಡಿಲ್ಲ. ಪ್ರತಿ ನಾಮಫಲಕಕ್ಕೆ ₹3000 ಬಿಡುಗಡೆಯಾಗುತ್ತದೆ. ಆದರೆ 179 ಕಾಮಗಾರಿಗಳ ಸ್ಥಳದಲ್ಲಿ ನಾಮಫಲಕ ಹಾಕಿಲ್ಲ. ನಿರ್ಮಾಣವಾದ ನಂತರ 7 ದನದ ಕೊಟ್ಟಿಗೆ ಕಾಮಗಾರಿ ಒಡೆದು ಹಾಕಿದ್ದಾರೆ. ಮರು ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಬಿಡುಗಡೆಯಾಗಿರುವ ₹2.1 ಲಕ್ಷ ಮರುಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು.
21 ಅಪೂರ್ಣ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗಿದೆ. ಆಶ್ರಯ ಮನೆ, ಕೋಳಿ ಶೆಡ್ಡುಗಳು ಸೇರಿದಂತೆ 75 ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಂಡ ಉದ್ದೇಶಕ್ಕೆ ಬಳಸುತ್ತಿಲ್ಲ. ಬೇರೆ ಕಡೆ ವಾಸ ಮತ್ತು ಕೆಲಸ ಮಾಡುತ್ತಿರುವ 59 ಜನರ ಹೆಸರಿಗೆ ಕೂಲಿ ಹಣ ಪಾವತಿಯಾಗಿದೆ ಅದನ್ನು ವಾಪಸ್ ಕಟ್ಟಿಸುವಂತೆ ತಿಳಿಸಿದರು.
15ನೇ ಹಣಕಾಸು ಯೋಜನೆಯಲ್ಲಿ ಮಾನವ ಸಂಪನ್ಮೂಲ ಬಳಸಿ ಚರಂಡಿ ಸ್ವಚ್ಛತೆ ಮಾಡಬೇಕು. ಆದರೆ ನೀವು ಕಾಮಗಾರಿ ರೀತಿ ಮಾಡಿದ್ದೀರಿ. ಇದಕ್ಕೆ ಖರ್ಚು ಮಾಡಿರುವ ₹21 ಲಕ್ಷವನ್ನು ವಾಪಸ್ ಕಟ್ಟಿಸಬೇಕು. ನರೇಗಾದಲ್ಲಿ ಮೂರು ಶೌಚಾಲಯ ಗುಂಡಿಗಳಿಗೆ ಬಚ್ಚಲುಗುಂಡಿ ಎಂದು ಹಣ ಬಿಡುಗಡೆ ಮಾಡಲಾಗಿದೆ ಇದಕ್ಕೆ ಬಿಡುಗಡೆಯಾಗಿರುವ ₹14.4 ಸಾವಿರ ವಾಪಸ್ ಕಟ್ಟಿಸಬೇಕು ಎಂದು ಹೇಳಿದರು.
ದನದ ಕೊಟ್ಟಿಗೆ, ಬದು ಸೇರಿ 4 ವೈಯಕ್ತಿಕ ಕಾಮಗಾರಿಗಳಲ್ಲಿ ಫಲಾನುಭವಿ ಕೆಲಸ ಮಾಡಿಲ್ಲ. ಓವರ್ ಹೆಡ್ ಚಾರ್ಜಸ್, ಬಿಎಫ್‌ಟಿ, ವೇಟ್ ಚಾರ್ಜಸ್ ಎಂದು ಪಾವತಿ ಮಾಡಿರುವ ₹2.48 ಲಕ್ಷ ಈ ಎಲ್ಲಾ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಹಣವನ್ನು ವಾಪಸ್ ಕಟ್ಟಿಸಬೇಕು ಎಂದು ಸೂಚನೆ ನೀಡಿದರು.
ಸುಂಡಘಟ್ಟ ಗ್ರಾಮದ ಗ್ರಾಮಸ್ಥ ಮುನಿರಾಜು ಮಾತನಾಡಿ, ಗ್ರಾಮ ಪಂಚಾಯಿತಿ ಒಬ್ಬ ವ್ಯಕ್ತಿಯ ಅಧೀನದಲ್ಲಿ ನಡೆಯುತ್ತಿದೆ. ಸಾರ್ವಜನಿಕರ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲ. ಗ್ರಾಮದಲ್ಲಿ ದಲಿತರಿಗೆ ಮೀಸಲಾದ ಸ್ಮಶಾನ ಮತ್ತು ಓಣಿ ರಸ್ತೆ ಒತ್ತುವರಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರು ಪ್ರಯೋಜನ ಆಗಿಲ್ಲ. ಸ್ಮಶಾನ ಮತ್ತು ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ನೋಡಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟ ಶಿಕ್ಷಣ ಇಲಾಖೆಯ ಬಿಆರ್‌ಸಿ ರಾಜು ಮಾತನಾಡಿ, ನರೇಗಾ ಯೋಜನೆ ಸೇರಿದಂತೆ ಸರ್ಕಾರದಿಂದ ಜನರಿಗೆ ಸಿಗುವ ಸೌಲತ್ತುಗಳ ಬಗ್ಗೆ ತಿಳಿಸಿಕೊಡಲು ಇಂತಹ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪಿಡಿಒ ಪುಟ್ಟರಾಮು ಮಾತನಾಡಿ, ಕಾಮಗಾರಿಗಳಲ್ಲಿ ಆಗಿರುವ ಲೋಪ ಸರಿಪಡಿಸಲಾಗುವುದು. ಕಾಮಗಾರಿ ನಾಶ ಮಾಡಿದವರಿಂದ ಮತ್ತೆ ಕಾಮಗಾರಿ ಅನುಷ್ಠಾನ ಮಾಡುವುದು ಇಲ್ಲವೇ ಅವರಿಂದ ಹಣವನ್ನು ವಾಪಸ್ ಕಟ್ಟಿಸಲಾಗುವುದು ಎಂದರು.
ರೇಷ್ಮೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಅರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಪಂಚಾಯಿತಿ ಅಧ್ಯಕ್ಷೆ ದುಂಡಮ್ಮ, ಸದಸ್ಯ ವೆಂಕಟೇಗೌಡ, ತಿಮ್ಮೇಗೌಡ, ದೇವ್ ಕುಮಾರ್, ಕೆಂಪರಾಜು ಉಪಸ್ಥಿತರಿದ್ದರು.