ADVERTISEMENT

ಸಾಲ ಕೊಡಿಸಿ, ಡ್ರಾ ಮಾಡಿಕೊಂಡ ಖದೀಮರು! ಆನ್‌ಲೈನ್‌ ಮೂಲಕ ₹7 ಲಕ್ಷ ವಂಚನೆ

ಆನ್‌ಲೈನ್‌ ಮೂಲಕ ₹7 ಲಕ್ಷ ವಂಚನೆ: ಸೈಬರ್ ಠಾಣೆಯಲ್ಲಿ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 20:23 IST
Last Updated 30 ನವೆಂಬರ್ 2022, 20:23 IST
   

ರಾಮನಗರ: ಮೊಬೈಲ್‌ಗೆ ಬಂದ ಲಿಂಕ್‌ ಒತ್ತಿ ವ್ಯಕ್ತಿಯೊಬ್ಬರು ಬರೋಬ್ಬರಿ ₹7 ಲಕ್ಷ ಕಳೆದುಕೊಂಡಿದ್ದು, ಆನ್‌ಲೈನ್‌ ವಂಚಕರ ವಿರುದ್ಧ ಇಲ್ಲಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಡದಿಯ ರಾಘವೇಂದ್ರ ಲೇಔಟ್‌ ನಿವಾಸಿ ಮಂಜುನಾಥ ಹಣ ಕಳೆದು ಕೊಂಡವರು. ವಂಚಕರು ಬ್ಯಾಂಕ್‌ ಖಾತೆ ದುರ್ಬಳಕೆ ಮಾಡಿಕೊಂಡು ಆನ್‌ಲೈನ್‌ ನಲ್ಲೇ ಸಾಲ ಕೊಡಿಸಿ, ತಾವೇ ಅದನ್ನು ಡ್ರಾ ಮಾಡಿಕೊಂಡು ವಂಚಿಸಿದ್ದಾರೆ.

ನಡೆದಿದ್ದೇನು?: ಖಾಸಗಿ ಕಂಪನಿ ಯೊಂದರ ಉದ್ಯೋಗಿ ಮಂಜುನಾಥ್‌ ನ. 27ರಂದು ಬೆಳಿಗ್ಗೆ ಬೆಸ್ಕಾಂ ವಿದ್ಯುತ್‌ ಬಿಲ್‌ ಪಾವತಿ ಮಾಡಿದ್ದರು. ಅದಾದ ಬಳಿಕ ಅವರ ಮೊಬೈಲ್‌ಗೆ ಮತ್ತೊಂದು ಸಂದೇಶ ಬಂದಿದ್ದು, ‘ನಿಮ್ಮ ವಿದ್ಯುತ್‌ ಬಿಲ್‌ ಪಾವತಿ ಪೂರ್ಣಗೊಂಡಿಲ್ಲ. ಇನ್ನೂ ₹15 ಬಾಕಿ ಇದ್ದು, ಅದನ್ನು ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸಲಾ ಗುವುದು’ ಎಂಬ ನಕಲಿ ಸಂದೇಶ ಬಂದಿತ್ತು.

ADVERTISEMENT

ಇದನ್ನೇ ಬೆಸ್ಕಾಂನ ಅಧಿಕೃತ ಸಂದೇಶ ಎಂದು ನಂಬಿದ ಮಂಜುನಾಥ್‌ ತಮ್ಮ ಬ್ಯಾಂಕ್‌ ಖಾತೆ, ಡೆಬಿಟ್ ಕಾರ್ಡ್ ಇತ್ಯಾದಿ ವಿವರಗಳೊಂದಿಗೆ ಹಣ ಪಾವತಿ ಮಾಡಿದ್ದರು. ಬ್ಯಾಂಕ್‌ ಖಾತೆಯಲ್ಲಿ ಇನ್ನೂ ₹200 ಮೊತ್ತವಷ್ಟೇ ಉಳಿದಿತ್ತು. ಅದೇ ದಿನ ರಾತ್ರಿ 8ರ ಸುಮಾರಿಗೆ ಅವರಿಗೆ ಇ–ಮೇಲ್‌ ಬಂದಿದ್ದು, ಅದರಲ್ಲಿ ₹24 ಲಕ್ಷ ಸಾಲದ ಹಣವನ್ನು ಖಾತೆಗೆ ಹಾಕಿರುವುದಾಗಿ ಸಂದೇಶ ಬಂದಿದೆ. ತಾನು ಸಾಲಕ್ಕೆ ಅರ್ಜಿ ಸಲ್ಲಿಸಿಯೇ ಇಲ್ಲ.

ಹೀಗಿರುವಾಗ ಸಾಲ ಕೊಟ್ಟವರು ಯಾರು ಎಂದು ಗೊಂದಲಕ್ಕೆ ಒಳಗಾದ ಮಂಜುನಾಥ್ ತಮ್ಮ ಖಾತೆಯಲ್ಲಿನ ಬ್ಯಾಲೆನ್ಸ್‌ ಪರಿಶೀಲಿಸಿದಾಗ ಹಣ ಇರುವುದು ಖಾತ್ರಿಯಾಗಿದೆ. ನಂತರದಲ್ಲಿ ಕೇವಲ 20 ನಿಮಿಷದ ಅವಧಿಯಲ್ಲಿ ತಲಾ ₹1 ಲಕ್ಷದಂತೆ ಏಳು ಬಾರಿ ಹಣ ಡ್ರಾ ಆಗಿದೆ. ಇದರಿಂದ ಗಾಬರಿಗೊಂಡ ಮಂಜುನಾಥ್‌ ಕೂಡಲೇ ಬ್ಯಾಂಕಿನ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ತಮ್ಮ ಖಾತೆಯಲ್ಲಿನ ಹಣದವ್ಯವಹಾರವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದರಿಂದ ಖಾತೆಯಲ್ಲಿನ ಇನ್ನೂ₹17 ಲಕ್ಷ ಕಳ್ಳರ ಪಾಲಾಗುವುದು ತಪ್ಪಿದೆ.

ಈ ಸಂಬಂಧ ಮಂಜುನಾಥ್ ರಾಮನಗರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ ಅಡಿ ಪ್ರಕರಣ ದಾಖಲಾಗಿದೆ.

‘ನನ್ನ ಅರಿವಿಗೆ ಬಾರದೆಯೇ ಕೇವಲ ಒಟಿಪಿ ಆಧಾರದಲ್ಲಿ ಸಾಲ ನೀಡಿದ್ದು, ಒಂದು ದಿನದೊಳಗೆ ಮಂಜೂರಾಗಿರುವುದು ಆಶ್ಚರ್ಯ ತರಿಸಿದೆ. ಈ ಸಂಬಂಧ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನನ್ನ ಖಾತೆ ಇರುವ ಐಸಿಐಸಿಐ ಬ್ಯಾಂಕ್‌ಗೂ ದೂರು ನೀಡಿದ್ದೇನೆ’ ಎಂದು ಮಂಜುನಾಥ್ ತಿಳಿಸಿದರು.

ಹೆಚ್ಚಾಗುತ್ತಿದೆ ಸೈಬರ್ ವಂಚನೆ

ಸೈಬರ್‌ ಅಪರಾಧ ಪ್ರಕರಣಗಳಲ್ಲಿನ ಜಾಲವನ್ನು ಭೇದಿಸುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಸಮಯವೂ ಬೇಕಾಗುತ್ತದೆ. ವಿದ್ಯಾವಂತ ಸಮುದಾಯವೇ ಸೈಬರ್ ವಂಚನೆಗೆ ಹೆಚ್ಚು ಗುರಿಯಾಗುತ್ತಿದೆ. ಹೀಗಾಗಿ, ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸುವ ಮುನ್ನ ಯೋಚಿಸಬೇಕು. ಆನ್‌ಲೈನ್‌ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡುವುದನ್ನು ಬಿಡಬೇಕು. ತಾವು ವಂಚನೆಗೆ ಒಳಗಾದ ಕೂಡಲೇ ಮಾಹಿತಿ ನೀಡಿದರೆ ವಂಚಕರ ಪತ್ತೆ ಸಾಧ್ಯ ಎನ್ನುತ್ತಾರೆ ಪೊಲೀಸರು.

--

ಸಾಲಕ್ಕೆ ಅರ್ಜಿ ಸಲ್ಲಿಸದಿದ್ದರೂ ನನ್ನ ಖಾತೆಗೆ ಹಣ ಜಮೆ ಆಗಿದ್ದು, ಪರಿಶೀಲಿಸುವ ವೇಳೆಗಾಗಲೇ ಖದೀಮರು ₹7 ಲಕ್ಷ ಡ್ರಾ ಮಾಡಿದ್ದರು. ಖಾತೆ ವ್ಯವಹಾರ ಬ್ಲಾಕ್‌ ಮಾಡಿದ್ದರಿಂದ ₹17 ಲಕ್ಷ ಉಳಿಯಿತು

- ಮಂಜುನಾಥ್‌, ದೂರುದಾರ

---

ಆನ್‌ಲೈನ್‌ ಮೂಲಕ ಹಣ ವಂಚನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆದಿದೆ. ಗ್ರಾಹಕರು ಆನ್‌ಲೈನ್‌ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿದಲ್ಲಿ ಈ ರೀತಿಯ ವಂಚನೆಗಳನ್ನು ತಪ್ಪಿಸಬಹುದು

- ಸಂತೋಷ್‌ ಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.