
ವಂಚನೆ
ರಾಮನಗರ: ‘ಲೈಫ್ ಸರ್ಟಿಫಿಕೇಟ್’ ಅಪ್ಡೇಟ್ ಮಾಡಬೇಕಿದೆ ಎಂದು ನಿವೃತ್ತ ನೌಕರರೊಬ್ಬರಿಗೆ ವಾಟ್ಸ್ ಆ್ಯಪ್‌ನಲ್ಲಿ ಕರೆ ಮಾಡಿದ ವಂಚಕನೊಬ್ಬ, ನೌಕರನ ಎಟಿಎಂ ಕಾರ್ಡ್ ಸೇರಿದಂತೆ ವಿವಿಧ ಮಾಹಿತಿ ಪಡೆದು ಅವರ ಬ್ಯಾಂಕ್ ಖಾತೆಯಿಂದ ₹8 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಪುಟ್ಟಸ್ವಾಮಿ ಆನ್‌ಲೈನ್ ವಂಚನೆಯ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡವರು. ಹೊಂಗನೂರಿನಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಪುಟ್ಟಸ್ವಾಮಿ ಅವರಿಗೆ ಡಿ.25ರಂದು ಸಂಜೆ 4ರ ಸುಮಾರಿಗೆ ಅಪರಿಚಿತನೊಬ್ಬ ವಾಟ್ಸ್‌ಆ್ಯಪ್ ಕರೆ ಮಾಡಿದ್ದ.
‘ನಿಮ್ಮ ಲೈಫ್ ಸರ್ಟಿಫಿಕೇಟ್ ಇನ್ನೂ ಸ್ವೀಕಾರವಾಗಿಲ್ಲ. ಅದನ್ನು ಅಪ್‌ಡೇಟ್ ಮಾಡಬೇಕಿದೆ. ಅದಕ್ಕಾಗಿ ನಿಮ್ಮ ಪಿಂಚಣಿ ಖಾತೆ ಸಂಖ್ಯೆ ಹೇಳಿ’ ಎಂದು ಕೇಳಿದ್ದಾನೆ. ಆತನ ಮಾತನ್ನು ನಿಜವೆಂದು ನಂಬಿದ ಪುಟ್ಟಸ್ವಾಮಿ ಅವರು ಖಾತೆ ನಂಬರ್ ಹಂಚಿಕೊಂಡಿದ್ದಾರೆ.
ಬಳಿಕ ವಂಚಕ, ಎಟಿಎಂ ಕಾರ್ಡಿನ ಸಂಖ್ಯೆ ಹಾಗೂ ಅದರ ಅವಧಿ ಮಾಹಿತಿ ಕೇಳಿದಾಗ ಅದನ್ನೂ ಸಹ ತಿಳಿಸಿದ್ದಾರೆ. ಇದಾದ ಎರಡು ತಾಸಿನ ಬಳಿಕ ಪುಟ್ಟಸ್ವಾಮಿ ಅವರ ಬ್ಯಾಂಕ್ ಖಾತೆಯಿಂದ ಒಮ್ಮೆ ₹4.95 ಲಕ್ಷ ಆರ್‌ಟಿಜಿಎಸ್ ಮೂಲಕ ಹಾಗೂ ₹3.10 ಲಕ್ಷ ಐಎಂಪಿಎಸ್ (ತ್ವರಿತ ನಗದು ಪಾವತಿ ಸೇವೆ) ಮೂಲಕ ಕಡಿತವಾಗಿದೆ.
ಮೊಬೈಲ್‌ಗೆ ಖಾತೆಯಿಂದ ಹಣ ಕಡಿತ ಸಂದೇಶ ಬಂದ ಬಳಿಕ ಪುಟ್ಟಸ್ವಾಮಿ ಅವರಿಗೆ ತಾನು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ಕೂಡಲೇ ಅವರು ಸೈಬರ್ ಸಹಾಯವಾಣಿಗೆ ಕರೆ ಮಾಡಿ, ಉಳಿದ ಮೊತ್ತ ವರ್ಗಾವಣೆಯಾಗದಂತೆ ನೋಡಿಕೊಂಡಿದ್ದಾರೆ. ಬಳಿಕ, ಸಿಇಎನ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ.
‘ಪಿಎಂ ಕಿಸಾನ್’ ಹೆಸರಿನಲ್ಲಿ ತಮ್ಮ ವಾಟ್ಸ್‌ಆ್ಯಪ್‌ಗೆ ಬಂದ ಎಪಿಕೆ ಫೈಲ್ ಕ್ಲಿಕ್ ಮಾಡಿದ ರೈತರೊಬ್ಬರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ವಂಚಕರು ₹62 ಸಾವಿರ ಕಡಿತ ಮಾಡಿಕೊಂಡಿದ್ದಾರೆ. ಹಾರೋಹಳ್ಳಿಯ ಶಂಕರಯ್ಯ ಹಣ ಕಳೆದುಕೊಂಡವರು.
ಹಾರೋಹಳ್ಳಿಯ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಶಂಕರಯ್ಯ ಅವರು, ಕ್ರೆಡಿಟ್ ಕಾರ್ಡ್ ಸಹ ಹೊಂದಿದ್ದಾರೆ. ಜೊತೆಗೆ ಎಸ್‌ಬಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಅ. 14ರಂದು ಅವರ ವಾಟ್ಸ್‌ಆ್ಯಪ್‌ಗೆ ಪಿಎಂ ಕಿಸಾನ್ ಹೆಸರಿನ ಎಪಿಕೆ ಫೈಲ್ ಬಂದಿತ್ತು.
ಕುತೂಹಲಕ್ಕೆ ಶಂಕರಯ್ಯ ಅವರು ಲಿಂಕ್ ಕ್ಲಿಕ್ ಮಾಡಿದ್ದರು. ಅದಾದ ಎರಡು ದಿನಗಳ ಬಳಿಕ ಸಂಜೆ 7ರ ಸುಮಾರು ಅವರ ಮೊಬೈಲ್ ಹ್ಯಾಕ್ ಮಾಡಿರುವ ವಂಚಕರು, ಅವರ ಕ್ರೆಡಿಟ್ ಕಾರ್ಡ್‌ನಿಂದ ಹಂತ ಹಂತವಾಗಿ ₹41,998 ನಗದು ಕಡಿತ ಮಾಡಿಕೊಂಡಿದ್ದಾರೆ.
ಇದಾದ ಎರಡು ತಿಂಗಳ ಬಳಿಕ ಡಿ. 21ರಂದು ಎಸ್‌ಬಿಐ ಯೊನೊ ಆ್ಯಪ್‌ನಿಂದ ಶಂಕರಯ್ಯ ಅವರ ಮೊಬೈಲ್‌ಗೆ ಮೂರು ಸಲ ಒಟಿಪಿ ಜೊತೆಗೆ ವಾಟ್ಸ್‌ಆ್ಯಪ್‌ನಲ್ಲಿ ‘ಎಂ’ ಎಂಬ ಸಂದೇಶ ಬಂದಿದೆ. ಇದಾದ ಕೆಲ ಹೊತ್ತಿನಲ್ಲೇ ಎಸ್‌ಬಿಐ ಖಾತೆಯಿಂದ ₹21 ಸಾವಿರ ಕಡಿತವಾಗಿದೆ.
ವಂಚಕರು ಎರಡು ತಿಂಗಳಲ್ಲಿ ಒಟ್ಟು ₹62,998 ಮೊತ್ತವನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಶಂಕರಯ್ಯ ನೀಡಿದ ದೂರಿನ ಮೇರಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.