ADVERTISEMENT

ರಾಮನಗರ: ಕಾಡಾನೆ ಸೆರೆ ಕಾರ್ಯಾಚರಣೆ ಎಂಬ ಹರಸಾಹಸ

ಓದೇಶ ಸಕಲೇಶಪುರ
Published 4 ಜನವರಿ 2025, 5:55 IST
Last Updated 4 ಜನವರಿ 2025, 5:55 IST

ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯ ದೃಶ್ಯ (ಸಂಗ್ರಹ ಚಿತ್ರ)

ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯ ದೃಶ್ಯ (ಸಂಗ್ರಹ ಚಿತ್ರ)

ರಾಮನಗರ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕಾಡಂಚಿನಲ್ಲಿ ರೈಲು ಕಂಬಿಗಳ ತಡೆಗೋಡೆ, ಸೌರಶಕ್ತಿ ವಿದ್ಯುತ್ ತಂತಿಬೇಲಿ, ಗುಂಡಿಗಳ ನಿರ್ಮಾಣದ ಪರಿಹಾರೋಪಾಯದೊಂದಿಗೆ, ಆನೆಗಳನ್ನು ಮರಳಿ ಕಾಡಿಗೆ ಓಡಿಸಲು ಆನೆ ಕಾರ್ಯಪಡೆ ರಚಿಸಿದೆ. ಇಲಾಖೆಯ ಕಡೆಯ ಅಸ್ತ್ರ ಆನೆ ಸೆರೆ ಕಾರ್ಯಾಚರಣೆ.

ADVERTISEMENT

ಜೀವಹಾನಿ ಜೊತೆಗೆ ಹೆಚ್ಚಿನ ಬೆಳೆಹಾನಿ ಮಾಡುವ ಪುಂಡಾನೆಗಳನ್ನು ಹಿಡಿದು ಮರಳಿ ಕಾಡಿಗೆ ಬಿಡುವ ಕಾರ್ಯಾಚರಣೆಯು ಇಲಾಖೆ ಪಾಲಿಗೆ ಹರಸಾಹಸ. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಇಲಾಖೆಗೆ, ಕಾರ್ಯಾಚರಣೆಗೆ ಸ್ಥಳೀಯವಾಗಿ ಮೂಲಸೌಕರ್ಯಗಳಿಲ್ಲ. ಯುದ್ಧಕಾಲಕ್ಕೆ ಶಸ್ತ್ರಾಭ್ಯಾಸ ಎಂಬಂತೆ ಎಲ್ಲವನ್ನೂ ಹೊಂದಿಸಿಕೊಂಡು ಕಾರ್ಯಾಚರಣೆಗೆ ಇಳಿಯಬೇಕು.

ಸಿಬ್ಬಂದಿ, ಸೌಕರ್ಯವಿಲ್ಲ: ‘ಕಾರ್ಯಾಚರಣೆಗೆ ಮಾನವ ಸಂಪನ್ಮೂಲದ ಜೊತೆಗೆ ಸೌಲಭ್ಯಗಳ ಕೊರತೆಯನ್ನು ಇಲಾಖೆ ಎದುರಿಸುತ್ತಿದೆ. ಇದು ರಾಮನಗರ ಜಿಲ್ಲೆಯಲ್ಲಷ್ಟೇ ಅಲ್ಲದೆ, ಕಾಡಾನೆ ಹಾವಳಿ ಇರುವ ಇತರ ಜಿಲ್ಲೆಗಳಲ್ಲೂ ಇದೆ. ಡ್ರೋನ್, ಥರ್ಮಲ್ ಡ್ರೋನ್, ಲಾರಿಗಳು, ವಾಹನಗಳು, ಜೆಸಿಬಿ, ಕ್ರೇನ್ ಸೇರಿದಂತೆ ಎಲ್ಲವನ್ನು ಬಾಡಿಗೆಗೆ ತರಿಸಿಕೊಂಡು ಕಾರ್ಯಾಚರಣೆ ಶುರು ಮಾಡಬೇಕು’ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಳಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೊರತೆಯೇ ಇಲಾಖೆಗೆ ದೊಡ್ಡ ಸವಾಲು. ಜಿಲ್ಲೆಗೆ ಮಂಜೂರಾಗಿರುವ 62 ಫಾರೆಸ್ಟ್ ಗಾರ್ಡ್ ಹುದ್ದೆಗಳ ಪೈಕಿ, 28 ಮಾತ್ರ ಭರ್ತಿಯಾಗಿದ್ದು 34 ಖಾಲಿ ಇವೆ. ಇನ್ನು ಕಾಡಾನೆಗಳ ಚಲನವಲನ ಸೇರಿದಂತೆ ಅರಣ್ಯಗಳ ಮೇಲೆ ನಿಗಾ ಇಡುವ 31 ಅರಣ್ಯ ವೀಕ್ಷಕರ ಹುದ್ದೆ ಪೈಕಿ 7 ಮಂದಿಯಷ್ಟೆ ಇದ್ದು 24 ಹುದ್ದೆ ಖಾಲಿ ಇವೆ. ಪರಿಸ್ಥಿತಿ ಹೀಗಿರುವಾಗ ಅಧಿಕಾರಿಗಳು ಹೇಗೆ ನಿಭಾಯಿಸುತ್ತಾರೆ?’ಎಂದು ಪ್ರಶ್ನಿಸಿದರು.

ಹೆಚ್ಚಿದ ಕಾರ್ಯೋತ್ತಡ: ‘ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಂದೆಡೆ ಕಾಡಾನೆಗಳ ಹಾವಳಿ ನಿಯಂತ್ರಿಸುವ ಸವಾಲಾದರೆ, ಮತ್ತೊಂದೆಡೆ ಆನೆ ಕಾಟದಿಂದ ಬೇಸತ್ತ ರೈತರ ಆಕ್ರೋಶದ ಬಿಸಿ ಎದುರಿಸಬೇಕು. ಕೊರತೆಗಳ ನಡುವೆಯೇ ಕಾಡಾನೆ ತಡೆಗೆ ಕಾರ್ಯಪ್ರವೃತ್ತರಾಗಬೇಕು’ ಎಂದು ಬೇಸರ ತೋಡಿಕೊಂಡರು.

‘ಕಾಡಾನೆ ಹಾವಳಿ ಶುರುವಾದಾಗಿನಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ದಿನೇ ದಿನೇ ಕಾರ್ಯೋತ್ತಡ ಹೆಚ್ಚಾಗಿದೆ. ರಜೆ ಇಲ್ಲದೆ, ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆನೆಗಳನ್ನು‌ ಹಿಡಿದು ಬಿಟ್ಟರೂ ಮತ್ತೆ ಬಂದು ತಮ್ಮ ವರಸೆ ಮುಂದುವರಿಸುತ್ತವೆ. ಅವು ಬರುವುದು, ತೊಂದರೆ ಮಾಡುವುದು, ಮರಳಿ ಓಡಿಸುವುದು ಅಥವಾ ಹಿಡಿದು ಬೇರೆಡೆಗೆ ಬಿಟ್ಟು ಬರುವುದು ಸಾಮಾನ್ಯವಾಗಿದೆ’ ಎಂದು ಹೇಳಿದರು.

ಆನೆ ಕಾರ್ಯಪಡೆ ರಚನೆ: ಕಳೆದ ಜೂನ್‌ ತಿಂಗಳಲ್ಲಿ ಒಂದೇ ವಾರದ ಅಂತರದಲ್ಲಿ ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಬ್ಬರು ರೈತರು ಕಾಡಾನೆಗೆ ಬಲಿಯಾಗಿದ್ದರು. ಇದರಿಂದ ಕೆರಳಿದ್ದ ರೈತರು ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ ಬೆನ್ನಲ್ಲೇ ಆನೆ ಕಾರ್ಯಪಡೆ ರಚಯಾಗಿತ್ತು.

‘ವಲಯ ಅರಣ್ಯಾಧಿಕಾರಿ, ಇಬ್ಬರು ಉಪ ವಲಯ ಅರಣ್ಯಾಧಿಕಾರಿ, ಐವರು ಅರಣ್ಯ ರಕ್ಷಕರು ಹಾಗೂ 24 ಹೊರಗುತ್ತಿಗೆ ಸಿಬ್ಬಂದಿ ಆನೆ ಕಾರ್ಯಪಡೆಯಲ್ಲಿರುತ್ತಾರೆ. ಸದ್ಯ ಜಿಲ್ಲೆಯಲ್ಲಿ ಪಡೆಯಲ್ಲಿ 85 ಮಂದಿ ಇದ್ದಾರೆ. ಈ ಪೈಕಿ ರಾಮನಗರ, ಚನ್ನಪಟ್ಟಣ, ಸಾತನೂರಿನಲ್ಲಿ ತಲಾ 12 ಮಂದಿಯನ್ನು, ಮಾಗಡಿ ಮತ್ತು ಕನಕಪುರದಲ್ಲಿ 8 ಮಂದಿಯನ್ನು ನಿಯೋಜಿಸಲಾಗಿದೆ. ಉಳಿದ 24 ಮಂದಿಯನ್ನು ಆನೆಗಳು ಕಾಣಿಸಿಕೊಳ್ಳುವ ಕಡೆಗೆ ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತದೆ. ಹೊರಗುತ್ತಿಗೆ ಸಿಬ್ಬಂದಿಗೆ ₹23,390 ಸಂಬಳ ನಿಗದಿಪಡಿಸಲಾಗಿದೆ’ ಎಂದು ರಾಮನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

15 ದಿನದ ಅಂತರದಲ್ಲಿ 2 ಆನೆ ಸೆರೆ
ಇತ್ತೀಚೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಟಸ್ಕರ್ ಹಾಗೂ ಮಖ್ನಾ (ಹೆಣ್ಣೂ ಅಲ್ಲದ, ಗಂಡೂ ಅಲ್ಲದ) ಎಂಬೆರಡು ಕಾಡಾನೆಗಳು ಹಲವು ದಿನಗಳಿಂದ ರೈತರ ಜಮೀನಿಗೆ ನುಗ್ಗಿ ಹೆಚ್ಚಿನ ಬೆಳೆಹಾನಿ ಮಾಡಿದ್ದವು. ಬೇಸತ್ತ ರೈತರು ಡಿಸೆಂಬರ್‌ನಲ್ಲಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದರು. ಕಡೆಗೆ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪುಂಡಾನೆಗಳನ್ನು ಸೆರೆ ಹಿಡಿಯಲು ಸಚಿವರು ಹಾಗೂ ಮೇಲಧಿಕಾರಿಗಳೊಂದಿಗೆ ಮಾತನಾಡಿ ಅನುಮತಿ ಕೊಡಿಸಿದರು. ಅದರ ಪರಿಣಾಮವಾಗಿ ಡಿ. 21ರಂದು ಟಸ್ಕರ್ ಹಾಗೂ 28ರಂದು ಮಖ್ನಾ ಆನೆಗಳನ್ನು ಹಿಡಿದು ಕಾವೇರಿ ವನ್ಯಜೀವಿಧಾಮಕ್ಕೆ ಬಿಡಲಾಗಿತ್ತು.
ಕಾರ್ಯಾಚರಣೆಗೆ ಬೇಕು 150 ಜನ; ಕನಿಷ್ಠ ₹10 ಲಕ್ಷ ವೆಚ್ಚ
‘ಕಾಡಾನೆ ಕಾರ್ಯಾಚರಣೆಗೆ ವಿವಿಧ ಹಂತಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸುಮಾರು 150 ಜನರು ಬೆವರು ಹರಿಸಬೇಕಾಗುತ್ತದೆ. ಆನೆಗಳ ಚಲನವಲನ ಪತ್ತೆಗೆ ಡ್ರೋನ್, ರಾತ್ರಿ ಚಲನವಲನ ಪತ್ತೆಗೆ ಥರ್ಮಲ್ ಡ್ರೋನ್, ಡ್ರೋನ್ ನಿರ್ವಾಹಕರು, ಟ್ರಾಕರ್ಸ್, ಸಾಕಾನೆಗಳ ಮಾವುತರು, ಕಾವಾಡಿಗರು, ವೈದ್ಯರು, ಸಹಾಯಕರು, ಆನೆ ಕಾರ್ಯಪಡೆ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು, ಶಾರ್ಪ್ ಶೂಟರ್ಸ್ ದಿನವಿಡೀ ಶ್ರಮಿಸಬೇಕು. ಸಾಕಾನೆ ಕರೆಯಿಸಿ ಕಳಿಸಲು ಲಾರಿಗಳು, ಸೆರೆ ಹಿಡಿದ ಕಾಡಾನೆ ಸಾಗಿಸಲು ಕೇಜ್‌ ಲಾರಿ, ಜೆಸಿಬಿ, ಕ್ರೇನ್, ಸಿಬ್ಬಂದಿ ಓಡಾಟಕ್ಕೆ ಜೀಪುಗಳು, ಡ್ರೋನ್ ಚಾರ್ಜಿಂಗ್‌ಗೆ ಯುಪಿಎಸ್ ಬ್ಯಾಟರಿಗಳು ಬೇಕು. ಕಾರ್ಯಾಚರಣೆಯಲ್ಲಿ ಭಾಗಿಯಾಗುವವರಿಗೆ ಆಹಾರ, ವಸತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು. ಸದ್ಯ ನಮ್ಮಲ್ಲಿ ಡ್ರೋನ್ ಕ್ಯಾಮೆರಾ ಇಲ್ಲದಿರುವುದರಿಂದ ದಿನಕ್ಕೆ ₹15 ಸಾವಿರದಂತೆ ಬಾಡಿಗೆ ಕೊಟ್ಟು ಕ್ಯಾಮೆರಾ ಜೊತೆಗೆ ಆಪರೇಟರ್‌ಗಳನ್ನು ಕರೆಯಿಸಬೇಕು. ಕನಿಷ್ಠ 2 ದಿನದಿಂದ ಒಂದು ವಾರದವರೆಗೆ ನಡೆಯುವ ಕಾರ್ಯಾಚರಣೆಗೆ ಏನಿಲ್ಲವೆಂದರೂ ₹10 ಲಕ್ಷದಿಂದ ₹15 ಲಕ್ಷದವರೆಗೆ ವೆಚ್ಚವಾಗುತ್ತದೆ’ ಎಂದು ಡಿಸಿಎಫ್ ಎಂ. ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.