ADVERTISEMENT

ಅಂಗಾಂಗ ದಾನ: ಕುಟುಂಬದವರಿಗೆ ಸನ್ಮಾನ

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 567 ಜನರಿಂದ ಅಂಗಾಂಗ ದಾನಕ್ಕೆ ನೋಂದಣಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 17:47 IST
Last Updated 18 ಆಗಸ್ಟ್ 2025, 17:47 IST
<div class="paragraphs"><p>ರಾಮನಗರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.  ರಾಮಲಿಂಗಾ ರೆಡ್ಡಿ,&nbsp;ಡಾ. ಸಿ.ಎನ್. ಮಂಜುನಾಥ್, ಎಚ್.ಎ. ಇಕ್ಬಾಲ್ ಹುಸೇನ್, ಗಾಣಕಲ್ ನಟರಾಜ್,  ಯಶವಂತ್ ವಿ. ಗುರುಕರ್,  ಅನ್ಮೋಲ್ ಜೈನ್,  ಡಾ. ನಿರಂಜನ್ ಹಾಗೂ ಇತರರು ಇದ್ದಾರೆ</p></div>

ರಾಮನಗರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ರಾಮಲಿಂಗಾ ರೆಡ್ಡಿ, ಡಾ. ಸಿ.ಎನ್. ಮಂಜುನಾಥ್, ಎಚ್.ಎ. ಇಕ್ಬಾಲ್ ಹುಸೇನ್, ಗಾಣಕಲ್ ನಟರಾಜ್, ಯಶವಂತ್ ವಿ. ಗುರುಕರ್, ಅನ್ಮೋಲ್ ಜೈನ್, ಡಾ. ನಿರಂಜನ್ ಹಾಗೂ ಇತರರು ಇದ್ದಾರೆ

   

ರಾಮನಗರ: ಅಂಗಾಂಗ ದಾನವು ಸಾವಿನ ನಂತರವೂ ಇತರರ ಬದುಕಿಗೆ ಕೊಡುಗೆ ನೀಡುವ ಒಂದು ಮಹತ್ವದ ಕಾರ್ಯ. ಅಪಘಾತ ಮತ್ತು ಇತರ ಕಾರಣಗಳಿಂದ ಮೆದುಳು ನಿಷ್ಕ್ರೀಯಗೊಂಡ ನಂತರ ಹಂತ ಹಂತವಾಗಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಜೀವ ಉಳಿಸುವ ಸಲುವಾಗಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ.

ಈ ರೀತಿ ತಮ್ಮ ಪ್ರೀತಿ–ಪಾತ್ರರ ಅಂಗಾಂಗಳನ್ನು ದಾನ ಮಾಡಿದ ಐದು ಕುಟುಂಬದ ಸದಸ್ಯರಿಗೆ ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು, ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶ್ಲಾಘನೆಯ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.

ADVERTISEMENT

ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ರಾಜ್ಯದಲ್ಲಿ ಅಂಗಾಂಗಗಳಿಗೆ ಹೆಚ್ಚು ಬೇಡಿಕೆ ಇದ್ದು, ಅದಕ್ಕಾಗಿ ನೋಂದಣಿ ಮಾಡಿಕೊಂಡು ಕಾಯುತ್ತಿರುವವರ ಸಂಖ್ಯೆ ದೊಡ್ಡದಿದೆ. ಒಟ್ಟು 5,354 ಮಂದಿ ವಿವಿಧ ಅಂಗಾಂಗಳಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಯಕೃತ್ತಿಗಾಗಿ 588 ಮಂದಿ, ಮೂತ್ರಪಿಂಡಕ್ಕಾಗಿ 4601, ಹೃದಯಕ್ಕಾಗಿ 134 ಹಾಗೂ ಶ್ವಾಸಕೋಶಗಳಿಗಾಗಿ 31  ನೋಂದಣಿಯಾಗಿದೆ.

ಪ್ರತಿಜ್ಞೆ: ಅಂಗಾಂಗ ದಾನ ಪ್ರತಿಜ್ಞೆ ಮೂಲಕ ನೋಂದಣಿ ಮಾಡಿಕೊಂಡಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕವು ಮೂರನೇ (45,856 ಜನರು) ಸ್ಥಾನದಲ್ಲಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 567 ಜನರು ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ನೋಂದಣಿ ಮಾಡಿದ್ದಾರೆ. ಅಂಗಾಂಗ ದಾನಿಯು ಹೃದಯ, ಮೂತ್ರಪಿಂಡಗಳು, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶ, ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಗೋಡೆಗಳು ಮತ್ತು ನೇತ್ರ/ಕಾರ್ನಿಯಾ ಅಂಗಾಂಶಗಳನ್ನು ದಾನ ಮಾಡಬಹುದಾಗಿದೆ.

ಆರೋಗ್ಯ ಅಧಿಕಾರಿಗಳ ಪ್ರಕಾರ, ಅಂಗಾಂಗ ದಾನಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ವ್ಯಕ್ತಿಗಳು ಜೀವಂತವಾಗಿರುವಾಗ ಅಂಗಾಂಗ ದಾನಕ್ಕೆ ಜೀವ ಸಾರ್ಥಕತೆ ಎಸ್‌ಒಟಿಟಿಒ ಕ್ಯೂಆರ್ ಕೋಡ್/ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಎನ್‌ಒಟಿಟಿಒ ಕ್ಯೂಆರ್ ಕೋಡ್ ಮೂಲಕ ಆಯಾ ವೆಬ್ ಪೋರ್ಟಲ್‌ಗಳಲ್ಲಿ ಪ್ರತಿಜ್ಞೆ ಮಾಡಬಹುದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.