ADVERTISEMENT

ಅನಾಥ ಶವ ಸಂಸ್ಕಾರವೇ ಇವರ ಸೇವೆ, ಚನ್ನಪಟ್ಟಣದ ಮಹಿಳೆಯಿಂದ ಜನ ಮೆಚ್ಚುವ ಕಾರ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 20:52 IST
Last Updated 8 ಜುಲೈ 2020, 20:52 IST
ಅನಾಥ ಶವದ ಸಂಸ್ಕಾರದ ಬಳಿಕ ಪೂಜೆ ನೆರವೇರಿಸುತ್ತಿರುವ ಆಶಾ
ಅನಾಥ ಶವದ ಸಂಸ್ಕಾರದ ಬಳಿಕ ಪೂಜೆ ನೆರವೇರಿಸುತ್ತಿರುವ ಆಶಾ   

ರಾಮನಗರ: ಕೊರೊನಾ ಭೀತಿಯ ಈ ದಿನಗಳಲ್ಲಿ ಕುಟುಂಬಸ್ಥರೇ ತಮ್ಮವರ ಶವಸಂಸ್ಕಾರ ಮಾಡಲು ಹಿಂದೆ ಸರಿಯುತ್ತಿದ್ದಾರೆ. ಆದರೆ ಚನ್ನಪಟ್ಟಣದಲ್ಲೊಬ್ಬರು ಮಹಿಳೆ ಅನಾಥ ಶವಗಳಿಗೆ ಸಂಸ್ಕಾರ ಮಾಡುತ್ತ ಇತರರಿಗೆ ಮಾದರಿ ಆಗಿದ್ದಾರೆ.

ಬೀದಿ ಬದಿ ಸಿಕ್ಕ ಅನಾಥ ಶವಗಳು, ರೈಲ್ವೆ ಹಳಿಗಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವವರು, ವಾರಸುದಾರರು ಸಿಗದ ಶವಗಳಿಗೆ ಚನ್ನಪಟ್ಟಣ ಆಶಾ ಮತ್ತವರ ತಂಡವರು ಅಂತಿಮ ವಿಧಿವಿಧಾನಗಳ ಮೂಲಕ ಶವಸಂಸ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೀಗೆ ನೂರಾರು ಶವಗಳಿಗೆ ಸಂಸ್ಕಾರ ನೆರವೇರಿಸಿರುವುದಾಗಿ ಆಶಾ ಹೇಳುತ್ತಾರೆ. ಇವರೊಟ್ಟಿಗೆ ಇತರ ಮೂವರು ಸಮಾನ ಮನಸ್ಕರು ಸಹಕಾರ ನೀಡುತ್ತಿದ್ದಾರೆ.

ರಾಮನಗರದ ಜಯಪುರದವರಾದ ಆಶಾ ಪಿಯುಸಿವರೆಗೆ ಓದಿದ್ದಾರೆ. ಮಂಡ್ಯದಿಂದ ಕೆಂಗೇರಿಯವರೆಗೆ ರೈಲಿಗೆ ಸಿಲುಕಿ ಛಿದ್ರವಾದ ಅದೆಷ್ಟೋ ದೇಹಗಳಿಗೆ ಈಕೆ ಮುಕ್ತಿ ದೊರಕಿಸಿದ್ದಾರೆ. ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರು ಪತ್ತೆಯಾದ ಕೂಡಲೇ ಇವರಿಗೆ ಕರೆ ಬರುತ್ತದೆ. ಕೆಲವೊಮ್ಮೆ ರೈಲ್ವೆ ಪೊಲೀಸರೂ ಕರೆ ಮಾಡಿ ಅನಾಥ ಶವಗಳ ಕುರಿತು ಮಾಹಿತಿ ನೀಡುತ್ತಾರೆ. ಮಾಹಿತಿ ಲಭಿಸುತ್ತಿದ್ದಂತೆ, ಸ್ಥಳಕ್ಕೆ ತೆರಳುವ ಆಶಾ ದೇಹವನ್ನು ಒಟ್ಟುಗೂಡಿಸಿ ಸಂಪ್ರದಾಯದ ಪ್ರಕಾರವೇ ಮಣ್ಣು ಮಾಡುತ್ತಾರೆ. ಇಷ್ಟೆಲ್ಲಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಶಾ ಮಾಡುವುದು ಕೂಲಿ ಕೆಲಸ.

ADVERTISEMENT

ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುವ ಸಲುವಾಗಿಯೇ ಜೀವ ರಕ್ಷಾ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಮಾಡಿರುವ ಇವರು, ಸಮಾನ ಮನಸ್ಕರನ್ನು ಸೇರಿಸಿಕೊಂಡು ತಮ್ಮ ಸೇವೆ ಮುಂದುವರಿಸಿದ್ದಾರೆ. ‘ನಮಗೆ ಅಂಬ್ಯುಲೆನ್ಸ್ ಅವಶ್ಯಕತೆ ಇದೆ. ಅದು ದೊರೆತರೇ ಶವ ಸಂಸ್ಕಾರದ ಕಾಯಕ ವಿಸ್ತರಣೆ ಮಾಡುತ್ತೇವೆ. ದಾನಿಗಳು ಈ ಬಗ್ಗೆ ಆಸಕ್ತಿ ತೋರಿದರೆ ಸಾಕಷ್ಟು ಉಪಯೋಗವಾಗುತ್ತದೆ’ ಎನ್ನುವುದು ಅವರ ಮನವಿ.

ಪ್ರೇರಣೆ ಏನು?

ಆಶಾ ಅವರ ಭಾವ ಪ್ರವೀಣ್‌ ಆಂಬ್ಯುಲೆನ್ಸ್ ಚಾಲಕ. ಮೂರು ವರ್ಷದ ಹಿಂದೆ ಆಶಾ ಅವರು ಇದ್ದಾಗ ಪ್ರದೀಪ್‌ ಅವರಿಗೊಂದು ಕರೆ ಬರುತ್ತದೆ. ಕರೆ ಮಾಡಿದ ರೈಲ್ವೆ ಪೊಲೀಸರು ಹಳಿಯ ಮೇಲಿರುವ ಅನಾಥ ಶವದ ಕುರಿತು ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ಕೋರುತ್ತಾರೆ. ಭಾವನೊಟ್ಟಿಗೆ ಸ್ಥಳಕ್ಕೆ ತೆರಳಿದ ಆಶಾ ಅಲ್ಲಿ ರಕ್ತಸಿಕ್ತ ದೇಹ ಕಾಣುತ್ತಾರೆ. ಅದರ ಸಂಸ್ಕಾರಕ್ಕೂ ಯಾರೊಬ್ಬರು ಮುಂದೆ ಬರದ್ದನ್ನು ಮನಗಾಣುತ್ತಾರೆ. ಅದಿನಿಂದ ಅನಾಥ ಶವಗಳ ಸಂಸ್ಕಾರ ಮಾಡಲು ನಿರ್ಧರಿಸಿದ್ದಾಗಿ ಅವರು ಹೇಳುತ್ತಾರೆ.

***

ಮೂರು ವರ್ಷಗಳಿಂದ ಅನಾಥ ಶವಗಳ ಸಂಸ್ಕಾರ ಮಾಡುತ್ತಿದ್ದೇವೆ. ಈಗ ಮೂವರು ನಮ್ಮ ತಂಡದಲ್ಲಿದ್ದಾರೆ
-ಆಶಾ, ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.