ADVERTISEMENT

ರಾಮನಗರ | ವಾಹನ ನಿಲುಗಡೆ ಶುಲ್ಕ ಇಳಿಕೆ

‘ಪ್ರಜಾವಾಣಿ’ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 7:43 IST
Last Updated 9 ಜನವರಿ 2024, 7:43 IST
ರಾಮನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಳವಡಿಸಿರುವ ವಿವಿಧ ವಾಹನಗಳ ನಿಲುಗಡೆಗೆ ನಿಗದಿಪಡಿಸಿರುವ ಶುಲ್ಕದ ಬೋರ್ಡ್
ರಾಮನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಳವಡಿಸಿರುವ ವಿವಿಧ ವಾಹನಗಳ ನಿಲುಗಡೆಗೆ ನಿಗದಿಪಡಿಸಿರುವ ಶುಲ್ಕದ ಬೋರ್ಡ್   

ರಾಮನಗರ: ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮನಸ್ಸಿಗೆ ಬಂದಂತೆ ವಾಹನಗಳ ನಿಲುಗಡೆ ಶುಲ್ಕ ಸಂಗ್ರಹಿಸುತ್ತಾ ಜನರನ್ನು ಸುಲಿಗೆ  ಮಾಡುವುದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಕಡಿವಾಣ ಹಾಕಿದೆ. ಜೊತೆಗೆ, ಪಾರ್ಕಿಂಗ್ ಟೆಂಡರ್‌ ಪಡೆದಿರುವ ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಟೆಂಡರ್ ಷರತ್ತು ಉಲ್ಲಂಘಿಸಿ ಆಸ್ಪತ್ರೆ ಆವರಣದಲ್ಲಿ ದ್ವಿಚಕ್ರ ವಾಹನಗಳಿಂದ ₹10 ಮತ್ತು ಕಾರುಗಳಿಗೆ ₹20 ನಿಲುಗಡೆ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಜ. 5ರಂದು ‘ಚಿಕಿತ್ಸೆಗಿಂತ ಪಾರ್ಕಿಂಗ್ ಶುಲ್ಕವೇ ದುಬಾರಿ!’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಆಸ್ಪತ್ರೆಯವರು ಹೆಚ್ಚುವರಿ ಶುಲ್ಕ ವಸೂಲಿಗೆ ಬ್ರೇಕ್ ಹಾಕಿದ್ದಾರೆ. ಜೊತೆಗೆ, ಪಾರ್ಕಿಂಗ್ ಆವರಣದಲ್ಲಿ ಯಾವ ಬಗೆಯ ವಾಹನಗಳಿಗೆ ಎಷ್ಟು ನಿಲುಗಡೆ ಶುಲ್ಕ ನಿಗದಿಪಡಿಸಲಾಗಿದೆ ಎಂಬುದರ ಮಾಹಿತಿಯ ಬೋರ್ಡ್ ಸಹ ಹಾಕಲಾಗಿದೆ.

‘ಬಹುತೇಕ ಬಡ ರೋಗಿಗಳು ಹಾಗೂ ಅವರ ಕಡೆಯವರು ಬರುವ ಆಸ್ಪತ್ರೆ ಆವರಣದಲ್ಲಿ ವಾಹನಗಳ ನಿಲುಗಡೆ ಶುಲ್ಕವನ್ನು ಎಲ್ಲರ ಕೈಗೆಟುಕುವಂತೆ ನಿಗದಿಪಡಿಸಲಾಗಿತ್ತು. ಆದರೆ, ಗುತ್ತಿಗೆದಾರ ನಮ್ಮ ಗಮನಕ್ಕೆ ತರದೆ ಏಕಾಏಕಿ ಶುಲ್ಕ ಹೆಚ್ಚಳ ಮಾಡಿದ್ದರು. ವರದಿ ಗಮನಿಸಿದ ಬಳಿಕ, ಟೆಂಡರ್ ಷರತ್ತು ಉಲ್ಲಂಘನೆ ಮಾಡಿರುವ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದು, ಇದೀಗ ನಿಗದಿತ ಶುಲ್ಕ ವಸೂಲಿ ಮಾಡುತ್ತಿದ್ದಾರೆ’ ಎಂದು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಪದ್ಮಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆಸ್ಪತ್ರೆಗೆ ಬರುವ ಸಾರ್ವಜನಿಕರಲ್ಲಿ ಕೆಲವರು ನಿಲುಗಡೆ ಶುಲ್ಕದ ಕಾರಣದಿಂದಾಗಿಯೇ, ಆಸ್ಪತ್ರೆಯ ಕಾಂಪೌಂಡ್‌ ಒಳಕ್ಕೆ ಹೋಗದೆ ಪ್ರವೇಶದ್ವಾರದ ಹೊರಗಡೆಯೇ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದರು. ಶುಲ್ಕ ಹೆಚ್ಚಳದ ಕಾರಣಕ್ಕಾಗಿ ವಾಹನಗಳ ಸವಾರರು ಆಸ್ಪತ್ರೆ ಆವರಣದಲ್ಲಿ ಶುಲ್ಕ ಸಂಗ್ರಹಿಸುವವರ ಜೊತೆ ವಾಗ್ವಾದ ನಡೆಸುವುದು ಸಾಮಾನ್ಯವಾಗಿತ್ತು.

‘ಪ್ರಜಾವಾಣಿ’ಯಲ್ಲಿ ಜ. 5ರಂದು ಪ್ರಕಟವಾಗಿದ್ದ ವಿಶೇಷ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.