ADVERTISEMENT

ಬಸ್‌ಗೆ ಅನುಮತಿ: ವ್ಯಾಪಾರಕ್ಕೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 3:31 IST
Last Updated 21 ಜೂನ್ 2021, 3:31 IST

ರಾಮನಗರ: ಜಿಲ್ಲೆಯಾದ್ಯಂತ ಸೋಮವಾರರಿಂದ ಎರಡನೇ ಹಂತದ ಅನ್‌ಲಾಕ್‌ ಪ್ರಕ್ರಿಯೆಗೆ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜನರ ಓಡಾಟ, ವ್ಯಾಪಾರ–ವಹಿವಾಟಿಗೆ ಒಂದಿಷ್ಟು ವಿನಾಯಿತಿ
ಸಿಗಲಿದೆ.

ಜಿಲ್ಲೆಯಲ್ಲಿ ಸದ್ಯ ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ. ಹೀಗಾಗಿ ವ್ಯಾಪಾರಕ್ಕೆ ಇದ್ದ ನಿರ್ಬಂಧಗಳು ತೆರವಾಗಲಿದ್ದು, ಬೆಳಿಗ್ಗೆ 6ರಿಂದ ಸಂಜೆ ಸಂಜೆ 5ರವರೆಗೆ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರಕ್ಕೆ ಅವಕಾಶ ದೊರೆಯಲಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಗ್ರಾಹಕರಿಗೆ ಆಹಾರ ಸೇವನೆಗೆ ಅವಕಾಶ ನೀಡಲಾಗಿದೆ. ಎ.ಸಿ ವ್ಯವಸ್ಥೆ ಇಲ್ಲದ ಜಿಮ್‌ಗಳು ತೆರೆಯಬಹುದಾಗಿದೆ.

ಬಸ್‌ ಸಂಚಾರ: ಬರೋಬ್ಬರಿ ಎರಡು ತಿಂಗಳ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಸರ್ಕಾರ ಹಸಿರು ನಿಶಾನೆ ತೋರಿವೆ. ಹೀಗಾಗಿ ಬೆಳಿಗ್ಗೆ 6ರಿಂದಲೇ ಬಸ್‌ಗಳು ರಸ್ತೆಗೆ ಇಳಿಯಲಿವೆ. ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ಬಸ್ ಸಂಚಾರ ಇರಲಿದೆ. ಜೊತೆಗೆ ಅಂತರ ಜಿಲ್ಲೆಗೂ ಬಸ್‌ಗಳು ಸಂಚರಿಸಲಿವೆ.

ADVERTISEMENT

ಯಾವುದಕ್ಕಿಲ್ಲ ಅನುಮತಿ: ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಜಿಲ್ಲೆಯ ದೇಗುಲಗಳು, ಮಸೀದಿ, ಚರ್ಚ್‌ಗಳ ಬಾಗಿಲು ಮುಚ್ಚಿರಲಿದೆ. ಇದಲ್ಲದೆ ರಾಜಕೀಯ, ಧಾರ್ಮಿಕ ಸಭೆ–ಸಮಾರಂಭ ನಡೆಸಲು ಸಹ ಅನುಮತಿ ಇಲ್ಲ. ಈಜುಕೊಳಗಳು, ವಾಣಿಜ್ಯ ಸಂಕೀರ್ಣಗಳನ್ನು ತೆರೆಯಲು ಸಹ ಅನುಮತಿ ಇಲ್ಲ.

ರಾತ್ರಿ ಕರ್ಫ್ಯೂ: ವಾರದ ದಿನಗಳಲ್ಲಿ ಪ್ರತಿದಿನ ಸಂಜೆ 7ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 5ರವರೆಗೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತು ಖರೀದಿ ಮತ್ತು ವೈದ್ಯಕೀಯ ಮತ್ತು ತುರ್ತು ಸೇವೆಗೆ ಮಾತ್ರ ಅವಕಾಶ
ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.