ADVERTISEMENT

ರಾಮನಗರ: ಛಾಯಾಚಿತ್ರ ಸ್ಪರ್ಧೆಗೆ ಉತ್ತಮ ಸ್ಪಂದನೆ

ಈವರೆಗೆ 400ಕ್ಕೂ ಹೆಚ್ಚು ಚಿತ್ರ ಸೇರ್ಪಡೆ: ಇದೇ 7ರವೆರೆಗೆ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 13:27 IST
Last Updated 4 ಆಗಸ್ಟ್ 2020, 13:27 IST
ಸ್ಪರ್ಧೆಗೆ ಬಂದ ಛಾಯಾಚಿತ್ರಗಳ ಗೊಂಚಲು
ಸ್ಪರ್ಧೆಗೆ ಬಂದ ಛಾಯಾಚಿತ್ರಗಳ ಗೊಂಚಲು   

ರಾಮನಗರ: ಜಿಲ್ಲೆಯ ಸುಂದರ ತಾಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವ ಛಾಯಾಚಿತ್ರ ಸ್ಪರ್ಧೆಗೆ ಆಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಬರೋಬ್ಬರಿ 400ಕ್ಕೂ ಹೆಚ್ಚು ಚಿತ್ರಗಳು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಕೈ ಸೇರಿವೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ರಾಮನಗರ ಜಿಲ್ಲಾ ಪಂಚಾಯಿತಿಯು ಈ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಆನ್‌ಲೈನ್‌ ಮೂಲಕ ಆಸಕ್ತರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಕಳೆದೊಂದು ವಾರದಿಂದ ಈ ಸ್ಪರ್ಧೆಗೆ ಆಸಕ್ತರು ಛಾಯಾಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಾ ಬಂದಿದ್ದಾರೆ. ಈ ವರೆಗೆ 81 ಮಂದಿಯಿಂದ 400ಕ್ಕೂ ಹೆಚ್ಚು ಸುಂದರ ಚಿತ್ರಗಳು ಬಂದಿವೆ.

ಏನಿದರ ಉದ್ದೇಶ: ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಇರುವ ರಾಮನಗರ ಜಿಲ್ಲೆಯು ಪ್ರವಾಸಿ ತಾಣಗಳ ಬೀಡು. ಬೃಹತ್ತಾದ ಏಕಶಿಲಾ ಬೆಟ್ಟಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಡುಗಳು, ವಿಶಾಲವಾದ ಕೆರೆ-ಕುಂಟೆಗಳು, ಮಾವು-ರೇಷ್ಮೆ ಸೊಗಡಿನ ಗ್ರಾಮೀಣ ಪರಿಸರ.... ಹೀಗೆ ವೈವಿಧ್ಯಮಯ ತಾಣಗಳು ಇಲ್ಲಿವೆ. ಇದರಲ್ಲಿ ಸಾಕಷ್ಟು ತಾಣಗಳು ಈಗಾಗಲೇ ಪ್ರಸಿದ್ಧಿಯಾಗಿವೆ. ಇವುಗಳನ್ನು ಇನ್ನಷ್ಟು ಪ್ರಚುರಪಡಿಸುವ ಜೊತೆಗೆ ಹೆಚ್ಚು ಬೆಳಕಿಗೆ ಬಾರದ ತಾಣಗಳನ್ನು ಜನರಿಗೆ ಪರಿಚಯಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.

ADVERTISEMENT

ಪಾಲ್ಗೊಳ್ಳುವುದು ಹೇಗೆ?: ಆಸಕ್ತರು ರಾಮನಗರ ಜಿಲ್ಲಾ ಪಂಚಾಯಿತಿಯ ಫೇಸ್‌ಬುಕ್‌ ಇಲ್ಲವೇ ಟ್ವಿಟರ್‌ ಖಾತೆಗೆ ಭೇಟಿ ಕೊಟ್ಟರೆ ಅಲ್ಲಿ ಫೋಟೊ ಅಪ್‌ಲೋಡ್‌ ಮಾಡುವ ಲಿಂಕ್‌ ಸಿಗುತ್ತದೆ. ಒಬ್ಬರು ಎಷ್ಟು ಬೇಕಾದರೂ ಚಿತ್ರಗಳನ್ನು ಕಳುಹಿಸಬಹುದು. ಈ ಚಿತ್ರಗಳು ಈಚೆಗೆ ತೆಗೆದಿದ್ದಾಗಿರಬಹುದು ಅಥವಾ ಹಳೆಯದ್ದೂ ಆಗಿರಬಹುದು. ಆಯ್ದ 10 ಚಿತ್ರಗಳಿಗೆ ಜಿ.ಪಂ. ಕಚೇರಿಯ ಒಳಗೆ ಜಾಗ ಸಿಗಲಿದೆ. ಮೊದಲ ಮೂರು ಸ್ಥಾನ ಪಡೆಯುವ ಚಿತ್ರಗಳಿಗೆ ಜಿ.ಪಂ. ಸಿಇಒ ಇಕ್ರಂ ಅವರ ಕಡೆಯಿಂದ ತಲಾ ₨1 ಸಾವಿರ ನಗದು ಬಹುಮಾನವೂ ಇರಲಿದೆ.

ಕೋವಿಡ್‌ನಿಂದಾಗಿ ಜಿಲ್ಲೆಯ ಪ್ರವಾಸೋದ್ಯಮವು ನೆಲ ಕಚ್ಚಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಈ ಪ್ರಯತ್ನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಸ್ಪರ್ಧೆಗೆ ಕಳುಹಿಸಲು ಇದೇ 7ರವರೆಗೆ ಕಾಲಾವಕಾಶ ಇದೆ.

*
ಬೆಳಕಿಗೆ ಬಾರದ ಪ್ರವಾಸಿ ತಾಣಗಳನ್ನು ಪರಿಚಯಿಸುವುದು ಇದರ ಉದ್ದೇಶ. ಯಾರೂ ಬೇಕಾದರೂ ಪಾಲ್ಗೊಳ್ಳಬಹುದು.
-ಇಕ್ರಂ,ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.