ADVERTISEMENT

ದಾಳಿಂಬೆ ರೈತರಿಗೆ ಚಿನ್ನದ ಬೆಳೆ: ಅಬ್ರಹಾಂ ವರ್ಗೀಸ್

ಬೆಳೆಗಳ ಫಸಲಿನ ಇಳುವರಿ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 12:40 IST
Last Updated 20 ಏಪ್ರಿಲ್ 2024, 12:40 IST
ವಿಜಯಪುರ ಹೋಬಳಿ ಬೀಡಿಗಾನಹಳ್ಳಿ ರೈತರ ತೋಟಗಳಲ್ಲಿ ದಾಳಿಂಬೆ ಬೆಳೆಯನ್ನು ವೀಕ್ಷಣೆ ಮಾಡಿದ ವಿಜ್ಞಾನಿಗಳು
ವಿಜಯಪುರ ಹೋಬಳಿ ಬೀಡಿಗಾನಹಳ್ಳಿ ರೈತರ ತೋಟಗಳಲ್ಲಿ ದಾಳಿಂಬೆ ಬೆಳೆಯನ್ನು ವೀಕ್ಷಣೆ ಮಾಡಿದ ವಿಜ್ಞಾನಿಗಳು    

ವಿಜಯಪುರ (ದೇವನಹಳ್ಳಿ): ಬರಗಾಲದಲ್ಲಿಯೂ ಉತ್ತಮ ಇಳುವರಿಯ ದಾಳಿಂಬೆ ಬೆಳೆ ಬೆಳೆಯಬೇಕಾದರೆ ನೀರಿನ ನಿರ್ವಹಣೆ ಹಾಗೂ ಕೀಟಗಳಿಂದ ಸೂಕ್ತವಾದ ರಕ್ಷಣೆ ಮಾಡುವುದು ಮುಖ್ಯ ಎಂದು ವಿಜ್ಞಾನಿ ಡಾ.ಅಬ್ರಹಾಂ ವರ್ಗೀಸ್ ಹೇಳಿದರು.

ಬೀಡಿಗಾನಹಳ್ಳಿಯಲ್ಲಿ ಶನಿವಾರ ರೈತರಿಗಾಗಿ ಆಯೋಜಿಸಿದ್ದ ಒಂದು ದಿನದ ಮಾವು, ದ್ರಾಕ್ಷಿ, ದಾಳಿಂಬೆ ಬೆಳೆಗಳ ಫಸಲಿನ ಇಳುವರಿ ಕುರಿತ ತರಬೇತಿ ಕಾರ್ಯಾಗಾರ ಅಂಗವಾಗಿ ದಾಳಿಂಬೆ ತೋಟಗಳಿಗೆ ಭೇಟಿ ನೀಡಿದ ಅವರು, ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಮಾವು, ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳಲ್ಲಿ ಇಳುವರಿ ಕಡಿಮೆಯಾಗುತ್ತಿರುವುದರ ಕುರಿತು ಸಮಾಲೋಚನೆ ನಡೆಸಿದ ಅವರು, ಹಣ್ಣಿನ ಬೆಳೆಗಳ ನಿರ್ವಹಣೆ ಕುರಿತು ರೈತರು, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಅಗತ್ಯವಾದ ಮಾಹಿತಿ ಪಡೆದರು.

ADVERTISEMENT

ವಿಜ್ಞಾನಿ ಡಾ.ರಶ್ಮಿ ಮಾತನಾಡಿ, ರೈತರು ಬೆಳೆಗಳನ್ನು ಮಕ್ಕಳಂತೆ ಪೋಷಿಸಬೇಕು. ಮಣ್ಣಿನ ಫಲವತ್ತತೆ ಕಾಪಾಡಬೇಕು. ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಮಣ್ಣಿಗೆ ಅಗತ್ಯ ಪೋಷಕಾಂಶ  ಒದಗಿಸುವಂತಹ ಕಾರ್ಯ ಮಾಡಬೇಕು. ಇದರಿಂದ ಉತ್ತಮ ಫಸಲು ಪಡೆಯಲು ಸಾಧ್ಯವಾಗಲಿದೆ ಎಂದರು.

ರಾಷ್ಟ್ರೀಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಮಂಜುನಾಥ್ ಮಾತನಾಡಿ, ದಾಳಿಂಬೆ ಬೆಳೆ ರೈತರಿಗೆ ಚಿನ್ನದ ಬೆಳೆ ಇದ್ದ ಹಾಗೆ. ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ಪೋಷಿಸುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಇಳುವರಿ ಪಡೆಯುವ ಕಡೆಗೆ ರೈತರು ಗಮನಹರಿಸಬೇಕು ಎಂದರು.

ಸೀನಿಯರ್ ಚೇಂಬರ್ ಅಧ್ಯಕ್ಷ ಕೆ.ವೆಂಕಟೇಶ್, ನಿವೃತ್ತ ಸಹಾಯಕ ತೋಟಗಾರಿಕೆ ಅಧಿಕಾರಿ ನಾರಾಯಣಸ್ವಾಮಿ, ಬೆಂಗಳೂರಿನ ಜಿ.ಕೆ.ವಿ.ಕೆ ನಿವೃತ್ತ ಡೀನ್ ವೆಂಕಟೇಶಯ್ಯ, ಬೀಡಿಗಾನಹಳ್ಳಿ ಕೃಷ್ಣಪ್ಪ, ಸೀನಿಯರ್ ಚೇಂಬರ್ ಗೌರವ ಕಾರ್ಯದರ್ಶಿ ಬಿ.ಚಿದಾನಂದಮೂರ್ತಿ, ಜೇಸಿಐ ಅಧ್ಯಕ್ಷ ಎಂ.ಭೈರೇಗೌಡ, ಡಿ.ಕೆ.ನಾಗರಾಜ್, ಜೇಸಿಐ ಅಲ್ಯೂಮಿನಿ ಕ್ಲಬ್ ಸಂಯೋಜಕ ಎಂ.ಮುನಿಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.