ADVERTISEMENT

ಮರ್ಯಾದೆಗೇಡು ಹತ್ಯೆ ಮಾಡಿದವರನ್ನು ಶೂಟ್ ಮಾಡಿ: ಪ್ರಮೋದ್ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 12:56 IST
Last Updated 28 ಜನವರಿ 2026, 12:56 IST
<div class="paragraphs"><p>ಸುದ್ದಿಗೋಷ್ಠಿಯಲ್ಲಿ ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಪ್ರದರ್ಶಿಸಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್</p></div>

ಸುದ್ದಿಗೋಷ್ಠಿಯಲ್ಲಿ ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಪ್ರದರ್ಶಿಸಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

   

ರಾಮನಗರ: ‘ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ಪರಿಶಿಷ್ಟ ಜಾತಿ ಯುವಕನನ್ನು ಮದುವೆಯಾದ ಕಾರಣಕ್ಕೆ ತನ್ನ ಗರ್ಭಿಣಿ ಮಗಳನ್ನು ಮರ್ಯಾದೆಗೇಡು ಹತ್ಯೆ ಮಾಡಿದ ತಂದೆ ಹಾಗೂ ಇತರರನ್ನು ಸಾರ್ವಜನಿಕವಾಗಿ ಶೂಟ್ ಮಾಡಬೇಕು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಹೆತ್ತ ಮಕ್ಕಳನ್ನೇ ಕೊಲೆ ಮಾಡುವುದು ಅಮಾನವೀಯ. ದಲಿತರಿಗೂ ಪ್ರೀತಿ ಮಾಡುವ ಹಕ್ಕಿದೆ. ಮನುಷ್ಯರಾದ ಅವರಿಗೂ ಭಾವನೆಗಳಿವೆ. ಅದನ್ನು ಗೌರವಿಸಬೇಕು’ ಎಂದರು.

ADVERTISEMENT

‘ಮರ್ಯಾದೆಗೇಡು ಹತ್ಯೆಯಾದ ವಿಷಯ ಗೊತ್ತಾದ ತಕ್ಷಣ ನಾನು, ಸಂತ್ರಸ್ತರನ್ನು ಭೇಟಿ ನೀಡಿ ಸಾಂತ್ವನ ಹೇಳಿ ಬಂದೆ. ಅವರದ್ದು ಬಸವ ದೀಕ್ಷೆ ಸ್ವೀಕರಿಸಿದ್ದ ಕುಟುಂಬ. ಹೀಗಿದ್ದರೂ ಜಾತಿ ಕಾರಣಕ್ಕೆ ನಡೆದ ಘಟನೆ ಖಂಡನೀಯ’ ಎಂದು ಹೇಳಿದರು. 

‘ಹಿಂದೂ ಧರ್ಮದಲ್ಲಿರುವ ರೋಗವಾದ ಅಸ್ಪೃಶ್ಯತೆ ಮತ್ತು ಜಾತೀಯತೆಯನ್ನು ನಾವು ಬಿಟ್ಟು ಒಂದಾಗಬೇಕು. ಆಗ ಬೇರೆಯವರು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪುತ್ತದೆ. ಇದರಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ’ ಎಂದು ತಿಳಿಸಿದರು.

ಪ್ರವೇಶ ನಿರ್ಬಂಧಕ್ಕೆ ಕಿಡಿ: ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರಾಳ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಮುಂದಾಗಿದ್ದ ಪ್ರಮೋದ್ ಮುತಾಲಿಕ್ ಅವರಿಗೆ, ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ.

ಜಿಲ್ಲಾಧಿಕಾರಿ ನಡೆ ಖಂಡಿಸಿರುವ ಮುತಾಲಿಕ್, ‘ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಮಂಡ್ಯಕ್ಕೆ ಹೊರಟಿದ್ದೆ. ಆದರೆ, ಜಿಲ್ಲಾಧಿಕಾರಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಿದ ಬೆಳಿಗ್ಗೆ 6 ಗಂಟೆಗೆ ಆದೇಶ ಕಳಿಸಿದ್ದಾರೆ. ಆ ಮೂಲಕ ಸಂವಿಧಾನವು ಕೊಟ್ಟಿರುವ ನನಗೆ ಕೊಟ್ಟಿರುವ ಹಕ್ಕಿನ ಉಲ್ಲಂಘನೆ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ಕಾರ್ಯಕ್ರಮದಲ್ಲಿ ನಾನೇನಾದರೂ ಕೋಮು ಪ್ರಚೋದನೆ ಅಥವಾ ದ್ವೇಷ ಭಾಷಣ ಮಾಡಿದರೆ ಪ್ರಕರಣ ದಾಖಲಿಸಬೇಕಿತ್ತು. ಅದು ಬಿಟ್ಟು ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವುದು ಸರಿಯಲ್ಲ. ನಿರ್ಬಂಧ ಆದೇಶದಲ್ಲಿ ನನ್ನ ವಿರುದ್ಧ 36 ಪ್ರಕರಣಗಳಿವೆ ಎಂದು ಹೇಳಲಾಗಿದೆ. ಸದ್ಯ ನನ್ನ ವಿರುದ್ದ 2 ಪ್ರಕರಣ ಮಾತ್ರ ಚಾಲ್ತಿಯಲ್ಲಿದ್ದು, ಉಳಿದವುಗಳಲ್ಲಿ ಖುಲಾಸೆಯಾಗಿರುವೆ’ ಎಂದು ಹೇಳಿದರು.

‘ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಿಲ್ಲಾಧಿಕಾರಿ ನಡೆ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಹಿಂದೂ ಧರ್ಮದ ಪರವಾಗಿ ಕೆಲಸ ಮಾಡುವ ನಮ್ಮಂತಹವರಿಗೆ ನಿರ್ಬಂಧ ಹೇರುತ್ತಿರುವ ಸರ್ಕಾರ, ಮುಸ್ಲಿಮರ ಓಲೈಕೆಗಾಗಿ ದ್ವೇಷ ಭಾಷಣ ನಿಯಂತ್ರಣ ಮಸೂದೆ ಜಾರಿಗೆ ತರಲು ಮುಂದಾಗಿದೆ’ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ನಾಗಾರ್ಜುನ ಗೌಡ, ಸುಂದರೇಶ್, ರಾಜೇಶ್ ಡಿ.ಎಂ ಹಾಗೂ ಪರಮೇಶ್ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.