ADVERTISEMENT

ಕನಕಪುರ: ಅಕಾಲಿಕ ಮಳೆಗೆ ಕೈಗೆ ಸಿಗದ ಬೆಳೆ; ಕಂಗಾಲಾದ ರೈತ

ಜೋರು ಮಳೆಗೆ ರಾಗಿ ಫಸಲು ನಾಶ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 5:25 IST
Last Updated 20 ನವೆಂಬರ್ 2021, 5:25 IST
ಪಡುವಣಗೆರೆ ಗ್ರಾಮದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ರಾಗಿ ಫಸಲು
ಪಡುವಣಗೆರೆ ಗ್ರಾಮದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ರಾಗಿ ಫಸಲು   

ಕನಕಪುರ: ತಾಲ್ಲೂಕಿನಲ್ಲಿ ಸಮೃದ್ಧವಾಗಿ ಬಂದಿದ್ದ ರಾಗಿ ಬೆಳೆಯು ನಿರಂತರ ಜೋರು ಮಳೆಯಿಂದ, ಕೈಗೆ ಸೇರುವ ಮುನ್ನವೆ ಮಣ್ಣಾಗಿದೆ. ಬೆಳೆದ ಫಸಲು ನಾಶವಾಗಿರುವುದಕ್ಕೆ ರೈತ ಚಿಂತೆಗೀಡಾಗಿದ್ದಾನೆ.

ಈ ವರ್ಷ ಎತ್ತ ನೋಡಿದರೂ ರಾಗಿ ಫಸಲು ಸಮೃದ್ಧವಾಗಿ ಬೆಳೆದು ಕಣ್ಣಿಗೆ ದೃಷ್ಟಿಯಾಗುವಂತೆ ಇತ್ತು. ಆದರೆ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ
ಎಲ್ಲಾ ಹಾಳಾಗಿ ಹೋಗಿದೆ.
ಜಮೀನಿನ ಕಡೆ ಹೋಗಲು ಮನಸ್ಸೇ ಬರುತ್ತಿಲ್ಲ ಎನ್ನುತ್ತಿದ್ದಾರೆ ತಾಲ್ಲೂಕಿನ ರೈತರು.

ಪ್ರಾರಂಭದಿಂದಲೂ ಈ ಬಾರಿ ಉತ್ತಮವಾಗಿ, ಹದವಾಗಿ ಮಳೆ ಆಗಿದ್ದರಿಂದ ರಾಗಿ ಫಸಲು ಉತ್ಕೃಷ್ಟವಾಗಿ ಬೆಳೆದಿತ್ತು. ರಾಗಿ ಹೊಲವನ್ನು ನೋಡಿದರೆ ಒಂದೇ ಸಮನಾಗಿ ಕಾಣುತ್ತಿದ್ದವು. ಮೂರು ವರ್ಷಕ್ಕೆ ಆಗುವಷ್ಟು ರಾಗಿ ಫಸಲು ಬಂದಿದೆ ಎನ್ನುವ ಖುಷಿಯಲ್ಲಿದ್ದರು.

ADVERTISEMENT

ಆದರೆ ನಿರಂತರ ಮಳೆಯಿಂದ ರಾಗಿ ಹೊಲದಲ್ಲಿ ಗದ್ದೆಯ ರೀತಿಯಲ್ಲಿ ನೀರು ನಿಂತಿದೆ. ಕಟಾವು ಮಾಡದೆ ನಿಂತಿದ್ದ ರಾಗಿ ಬೆಳೆಯು ಮಳೆಯಿಂದ ಭೂಮಿಯ ಮೇಲೆ ಮಲಗಿ ಕೊಳೆಯಲಾರಂಭಿಸಿದೆ, ರಾಗಿ ಗಿಡದಲ್ಲೇ ಮೊಳಕೆ ಹೊಡೆಯುತ್ತಿವೆ. ಆ ರಾಗಿಯನ್ನು ಕಟಾವು ಮಾಡಿದರು ಯಾವುದಕ್ಕೂ ಉಪಯೋಗವಿಲ್ಲ, ರಾಗಿ ಹುಲ್ಲನ್ನು ದನಗಳು ತಿನ್ನದ ರೀತಿ ಆಗಿವೆ ಎಂಬುದು ರೈತರ ಅಳಲಾಗಿದೆ.

ತಾಲ್ಲೂಕಿನಲ್ಲಿ 38,050 ಹೆಕ್ಟೇರ್‌ ಭೂಮಿಯಲ್ಲಿ ಕೃಷಿಯ ಗುರಿ ಹೊಂದಲಾಗಿತ್ತು. 35,109 ಎಕ್ಟೇರ್‌ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿತ್ತು. ಅದರಲ್ಲಿ ಅಕಾಲಿಕ ಹಾಗೂ ಅತಿಹೆಚ್ಚು ಮಳೆಯಿಂದ 19,034 ಎಕ್ಟೇರ್‌ ಪ್ರದೇಶದಲ್ಲಿನ ಬೆಳೆಯು ನಾಶವಾಗಿದೆ ಎಂದು ಕೃಷಿ ಮತ್ತು ಕಂದಾಯ ಇಲಾಖೆಯು ಅಂದಾಜಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದೆ.

18,375 ಎಕ್ಟೇರ್‌ ಪ್ರದೇಶದ ರಾಗಿ, 310 ಎಕ್ಟೇರ್‌ ಪ್ರದೇಶದ ಭತ್ತ, 110 ಎಕ್ಟೇರ್‌ ಪ್ರದೇಶದ ಹುರುಳಿ, 85 ಎಕ್ಟೇರ್‌ ಪ್ರದೇಶದ ತೊಗರಿ ಬೆಳೆ ಮಳೆಗೆ ಸಿಲುಕಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರಕ್ಕೆ ಹೋಗಿರುವ ವರದಿ ಮೇಲೆ ಜಂಟಿ ಸರ್ವೇ ನಡೆಸಿ ಹಾನಿಯಾಗಿರುವ ಬಗ್ಗೆ ದೃಢಪಡಿಸಿಕೊಂಡು ಸೂಕ್ತ ಪರಿಹಾರ ಒದಗಿಸುವುದಾಗಿ ಕೃಷಿ ಇಲಾಖೆಯು ತಿಳಿಸಿದೆ.

ರಾಗಿ, ಭತ್ತ, ತೊಗರಿ, ಹುರುಳಿ ಬೆಳೆ ನಷ್ಟವಾಗಿರುವ ರೈತರು ಬೆಳೆ ವಿಮೆ ಮಾಡಿಸಿದ್ದರೆ ನೇರವಾಗಿ ವಿಮಾ ಪ್ರತಿನಿಧಿ ಜೀವನ್‌ (74067 44808 ) ಅವರಿಗೆ ಕರೆಮಾಡಿ ಅರ್ಜಿ
ನೀಡಬೇಕು. ಅವರೇ ಬಂದು ಪರಿಶೀಲನೆ ಮಾಡಿ ಮಾಹಿತಿ ಪಡೆಯುತ್ತಾರೆ. ಇಲ್ಲವಾದಲ್ಲಿ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳಿಗೆ ಅರ್ಜಿ ನೀಡಬೇಕು, ತೋಟಗಾರಿಕೆ ಬೆಳೆಗಳಿಗೆ ತೋಟಗಾರಿಕೆ ಇಲಾಖೆಗೆ ಅರ್ಜಿ ನೀಡಬೇಕು. ತಾಲ್ಲೂಕಿನಲ್ಲಿ ಆಗಿರುವ ಬೆಳೆನಷ್ಟದ ವರದಿಯನ್ನು ಈಗಾಗಲೆ ಸರ್ಕಾರಕ್ಕೆ ಕಳಿಸಿದ್ದೇವೆ ಎಂದುಸಹಾಯಕ ಕೃಷಿ ನಿರ್ದೇಶಕ ಕನಕಪುರ ಎಸ್.ಕೆ. ರವಿ ತಿಳಿಸಿದರು.

ತಾಲ್ಲೂಕಿನಲ್ಲಿ ಹಿಂದೆಂದು ಬೆಳೆಯದ ರೀತಿಯಲ್ಲಿ ರಾಗಿ ಫಸಲು ಬಂದಿತ್ತು. ಅಕಾಲಿಕ ಮತ್ತು ಜೋರಾದ ಮಳೆಯಿಂದ ಎಲ್ಲಾ ರಾಗಿ ಫಸಲು ನಾಶವಾಗಿದೆ. ಸಾಲ ಮಾಡಿ ಕೃಷಿ ಮಾಡಿದ್ದ ರೈತ ಬೆಳೆಯನ್ನೇ ನಂಬಿಕೊಂಡಿದ್ದ. ಕೃಷಿ ಇಲಾಖೆಅಧಿಕಾರಿಗಳು ಪ್ರತಿ ರೈತರ ಜಮೀನಿಗೆ ಭೇಟಿ ನೀಡಿ ನಷ್ಟವಾಗಿರುವ ಫಸಲಿನ ಪ್ರಮಾಣದ ವರದಿಯನ್ನು ಸರ್ಕಾರಕ್ಕೆ ನೀಡಬೇಕು. ಸರ್ಕಾರವು ರೈತರಿಗೆ ಆಗಿರುವ ಸಂಪೂರ್ಣ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ ಭರಿಸಬೇಕು. ಆಗ ಮಾತ್ರ ರೈತರಿಗೆ ನ್ಯಾಯ ಒದಗಿಸಿದಂತೆ ಆಗುತ್ತದೆ ಎಂದು ಪಡುವಣಗೆರೆರೈತ ಸಿದ್ದರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.