ADVERTISEMENT

ಕನಕಪುರ | ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 5:33 IST
Last Updated 5 ಮಾರ್ಚ್ 2024, 5:33 IST
ಕನಕಪುರದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ಮತ್ತು ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನಕಪುರದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ಮತ್ತು ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಕನಕಪುರ: ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದನ್ನು ಗಂಭೀರವಾಗಿ ಪರಿಗಣಿಸದೆ ರಾಜ್ಯ ಸರ್ಕಾರ ನಿರ್ಲಕ್ಷ ತೋರುತ್ತಿದೆ.   ಇವರಿಗೆ ದೇಶಾಭಿಮಾನವಿದ್ದರೆ ಈ ಕೂಡಲೆ ನಾಸಿರ್‌ ಹುಸೇನ್‌ ಅವರ ರಾಜ್ಯಸಭಾ ಸದಸ್ಯ ಸ್ಥಾನವನ್ನು ರದ್ದುಗೊಳಿಸಬೇಕು. ಘೋಷಣೆ ಕೂಗಿದ ನಾಸಿರ್‌ ಹುಸೇನ್‌ ಬೆಂಬಲಿಗರನ್ನು ಬಂಧಿಸಬೇಕು ಎಂದು ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು ಒತ್ತಾಯಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಬಿಜೆಪಿ, ಜೆಡಿಎಸ್‌ ಮತ್ತು ಶ್ರೀರಾಮ ಸೇನೆ ಜಂಟಿಯಾಗಿ ಪಾಕ್ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಸಿರ್ ಹುಸೇನ್ ಬೆಂಬಲಿಗರು ವಿಧಾನ ಸೌಧದಲ್ಲೇ ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ರಾಜಾರೋಷವಾಗಿ ಕೂಗಿದ್ದಾರೆ. ಇದು ರಾಷ್ಟ್ರಕ್ಕೆ ಮಾಡಿದ ಅಪಮಾನವಾಗಿದ್ದು, ಅಂಥವರನ್ನು ಕೂಡಲೇ ಬಂಧಿಸಬೇಕಿತ್ತು. ಆದರೆ ಬಂಧಿಸದೆ ತನಿಖೆಯ ನೆಪವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

‘ಬ್ರ್ಯಾಂಡ್‌ ಬೆಂಗಳೂರು ಬದಲಾಗಿ ಇಂದು ಬಾಂಬ್ ಬೆಂಗಳೂರಾಗಿ ಬದಲಾಗುತ್ತಿದೆ. ಈ ಸರ್ಕಾರ ಬಂದ ಮೇಲೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದಿದೆ. ಬೆಂಗಳೂರಿನಲ್ಲಿ ಗೂಂಡಾಗಿರಿ ಹೆಚ್ಚಾಗಿದೆ, ಬೆಂಗಳೂರು ಏನಾಗುತ್ತಿದೆ ಎಂಬುದನ್ನು ತಿಳಿದು ನಾವು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ ಮಾತನಾಡಿ, ಈ ದೇಶದಲ್ಲಿ ಹುಟ್ಟಿ ಬೆಳೆದು  ಸೌಲಭ್ಯಗಳನ್ನೂ ಪಡೆದು ಈ ನೆಲಕ್ಕೆ ದ್ರೋಹ ಬಗೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಂಥವರನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ದೂರಿದರು.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನಗೌಡ ಮಾತನಾಡಿ, ವಿಧಾನಸೌದ ಮೊಗಸಾಲೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದವರನ್ನು ಬಂಧಿಸುವ ಕೆಲಸ ಇನ್ನೂ ಆಗಿಲ್ಲ.  ರಾಜ್ಯ ಸರ್ಕಾರ ಘೋಷಣೆ ಕೂಗಿದವರನ್ನು ಬಂಧಿಸಲಾರದಷ್ಟು ನಿಷ್ಕ್ರಿಯವಾಗಿದೆಯೇ ಅಥವಾ ಘೋಷಣೆ ಕೂಗಿದವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು.

ನಾಸಿರ್ ಹುಸೇನ್ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಒತ್ತಾಯಿಸುವ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಶ್ರೀರಾಮಸೇನೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.