
ಚನ್ನಪಟ್ಟಣ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸ ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಹಿಳೆಯರು, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶನಿವಾರ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಭಾಗದ ಜನರ ಜೀವನಕ್ಕೆ ಆಧಾರವಾಗಿತ್ತು. ಆದರೆ, ಈಚೆಗೆ ಈ ಯೋಜನೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದರಿಂದ ನರೇಗಾ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಪುಟ್ಟಮಾದು ಮಾತನಾಡಿ, 2004ರಲ್ಲಿ ಜಾರಿಗೆ ಬಂದ ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ವರದಾನವಾಗಿತ್ತು. ಕೂಲಿಕಾರರ ಆರ್ಥಿಕ ವ್ಯವಸ್ಥೆ ಹಾಗೂ ಜೀವನಕ್ಕೆ ದಾರಿಯಾಗಿತ್ತು. ಆದರೆ, ಈಚೆಗೆ ಕೆಲವು ಅಧಿಕಾರಿಗಳ ಕುತಂತ್ರದಿಂದಾಗಿ ಸ್ಥಳೀಯವಾಗಿ ನರೇಗಾ ಜಾರಿಯಾಗುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ಅರೋಪಿಸಿದರು.
ಅರ್ಜಿ ಸಲ್ಲಿಸಿದ ಎಲ್ಲ ಕುಟುಂಬಗಳಿಗೂ 100 ದಿನ ಕೆಲಸ ನೀಡಬೇಕು. ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಿ ಕೊಡಬೇಕಾದ ಪ್ರೋತ್ಸಾಹ ಧನವನ್ನು ಅವರ ಖಾತೆಗೆ ಜಮಾ ಮಾಡಬೇಕು. ಕೆಲಸ ಮುಗಿದ ನಂತರ ಕೂಲಿಕಾರರನ್ನು ಕಾಯಿಸದೆ ಹಾಜರಾತಿ ಪರಿಗಣಿಸಬೇಕು. ಉದ್ದೇಶಪೂರ್ವಕವಾಗಿ ಹಾಜರಾತಿ ಹಾಕದೆ ಕೂಲಿಕಾರರನ್ನು ಸತಾಯಿಸುವ ಕಾಯಕ ಮಿತ್ರರ ಮೇಲೆ ಕ್ರಮ ಕ್ಯೆಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ತಾ.ಪಂ ಇ.ಒ ಸಂದೀಪ್, ತಾಲ್ಲೂಕಿನ ಕೆಲವು ಗ್ರಾ.ಪಂ.ನಲ್ಲಿ ಈ ಸಮಸ್ಯೆ ಎದುರಾಗಿದೆ. ಸರ್ಕಾರದ ಆದೇಶದಂತೆ ನರೇಗಾ ಯೋಜನೆ ಕೆಲಸ ನೀಡುವ ಜತೆಗೆ ಹಣ ಸಂದಾಯ ಮಾಡಲು ಸ್ಥಳೀಯ ಗ್ರಾ.ಪಂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.
ರೈತ ಮುಖಂಡ ಕೃಷ್ಣೇಗೌಡ, ಸಂಘದ ಜಿಲ್ಲಾ ಮುಖಂಡರಾದ ಮಂಜುಳ, ಆನಂದ್, ರಾಜ್ಯ ಸಮಿತಿ ಸದಸ್ಯ ಟಿ.ಪಿ. ಅರುಣ್ ಕುಮಾರ್, ಸಂಘದ ತಾಲೂಕು ಅಧ್ಯಕ್ಷೆ ಲಕ್ಷ್ಮಮ್ಮ, ಪದಾಧಿಕಾರಿಗಳಾದ ಶಿವಮ್ಮ, ಸುನಂದಮ್ಮ, ಜಯಮ್ಮ, ಭಾಗ್ಯ, ಸೌಮ್ಯ, ಚಿಕ್ಕೀರೆಗೌಡ, ಬೋರೆಗೌಡ, ಪುಟ್ಟಸ್ವಾಮಿಗೌಡ, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.