ADVERTISEMENT

ಜಾನುವಾರು ಸಂತೆ ನಡೆಸಲು ತಡೆ, ಆಕ್ರೋಶ

ತೊಪ್ಪಗನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ಎನ್‌ಜಿಒಗಳ ಕ್ರಮಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 15:52 IST
Last Updated 16 ಅಕ್ಟೋಬರ್ 2019, 15:52 IST

ಕನಕಪುರ: ‘ತಕ್ಷಣಕ್ಕೆ ಹಣ ಬೇಕೆಂದಾಗ ಮನೆಯಲ್ಲಿನ ಆರ್ಥಿಕ ಸಮಸ್ಯೆಯ ನಿವಾರಣೆಗಾಗಿ ನಾವು ಸಾಕಿರುವ ದನ ಕರುಗಳನ್ನು ಸಂತೆಯಲ್ಲಿ ಮಾರುತ್ತೇವೆ. ಸಂತೆಯೇ ನಡೆಸಬಾರದೆಂದು ಹೇಳಿದರೆ ನಾವೇನು ಮಾಡಬೇಕು’ ಎಂದು ರೈತರು ಸಂತೆ ತಡೆಗೆ ಬಂದ ಸರ್ಕಾರೇತರ ಸಂಸ್ಥೆಯ (ಎನ್‌.ಜಿ.ಒ.) ಪ್ರತಿನಿಧಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿನ ತೊಪ್ಪಗನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ಹಲವು ವರ್ಷಗಳಿಂದ ಸಂತೆ ನಡೆಯುತ್ತಿತ್ತು. ಕೆಲವರು ಎನ್‌ಜಿಒಗಳು ಎಂದು ಹೇಳಿಕೊಂಡು ಬುಧವಾರ ಬೆಳಿಗ್ಗೆ ಸಂತೆಗೆ ನುಗ್ಗಿ ರೈತರು ಹಸುಗಳನ್ನು ಮಾರಾಟ ಮಾಡದಂತೆ ತಡೆಯೊಡ್ಡಿದಾಗ ರೈತರು ಆಕ್ರೋಶಗೊಂಡರು.

‘ನಾವು ಇಲ್ಲಿ ಕಳ್ಳತನ ಮಾಡಿಕೊಂಡು ಬಂದಿರುವ ಹಸುಗಳನ್ನು ಮಾರಾಟ ಮಾಡುತ್ತಿಲ್ಲ. ಸಾಕಿರುವ ದನಕರುಗಳನ್ನು ಕಷ್ಟ ನಿವಾರಿಸಲು ಮಾರುತ್ತಿದ್ದೇವೆ. ಅವಶ್ಯಕವಿರುವ ಮತ್ತೊಬ್ಬ ರೈತ ಅದನ್ನು ಖರೀದಿ ಮಾಡಿಕೊಳ್ಳುತ್ತಾನೆ. ಯಾವುದೇ ಕಸಾಯಿಖಾನೆಗೆ ಜಾನುವಾರು ಮಾರುತ್ತಿಲ್ಲ. ಕೃಷಿ ಮಾಡುವ ರೈತರಿಗೆ ಮಾರಾಟ ಮಾಡುತ್ತಿದ್ದೇವೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂತೆ ಎನ್ನುವುದು ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ವ್ಯವಸ್ಥೆಯಾಗಿದೆ ಎಂದರು.ರೈತ ಮರೀಗೌಡ ಅವರು ಮಾತನಾಡಿ, ಮೊದಲು ಜಾತ್ರಾ ಮಹೋತ್ಸವದಲ್ಲಿ ದನಗಳ ಪರಿಷೆ ನಡೆಯುತ್ತಿತ್ತು. ಕಾಲ ಬದಲಾದಂತೆ ದನಗಳ ಪರಿಷೆಯೆ ನಿಂತು ಹೋಯಿತು. ಈಗ ಜಾನುವಾರು ಸಂತೆ ನಡೆಯುತ್ತಿದೆ. ದೊಡ್ಡ ಮರಳವಾಡಿ ಗ್ರಾಮದಲ್ಲಿ ನಡೆಯುತ್ತಿದ್ದ ಸಂತೆಯನ್ನು ತೊಪ್ಪಗನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಾಡಲಾಗಿದೆ ಎಂದರು.

ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು ರಾತ್ರಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ಸಂತೆಯಲ್ಲಿ 2000 ಜಾನುವಾರುಗಳು ಬರುತ್ತವೆ. ಇದು ಕಸಾಯಿಖಾನೆಗೆ ದನಗಳನ್ನು ಮಾರಾಟ ಮಾಡುವ ಸಂತೆಯಲ್ಲ ಎಂದು ತಿಳಿಸಿದರು.

‘ಇಂತಹ ಹುಚ್ಚಾಟ ಮಾಡುವ ಬದಲು ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು, ರೈತರ ನೆರವಿಗೆ ಬರಬೇಕು. ಹೈನುಗಾರಿಕೆ ಮಾಡುವ, ಕೃಷಿ ಮಾಡುವ ಉದ್ದೇಶದಿಂದ ಬ್ಯಾಂಕಿನಲ್ಲಿ, ಕೈಸಾಲವಾಗಿ ಸಾಲ ಮಾಡಿ ರೈತರು ಹಸುಗಳನ್ನು ಖರೀದಿ ಮಾಡುತ್ತಾರೆ. ಅವರಿಗೆ ಸರಿಹೋಗದಿದ್ದಲ್ಲಿ ಅವುಗಳನ್ನು ತಕ್ಷಣ ಮಾರಾಟ ಮಾಡಬೇಕಿದೆ, ಸಂತೆ ಬಿಟ್ಟರೆ ರೈತರ ಮನೆ ಮುಂದೆ ಹೋಗಿ ಮಾರಲು ಸಾಧ್ಯವೇ, ಬ್ಯಾಂಕಿನಲ್ಲಿ ಸಾಲ ತೀರಿಸದಿದ್ದರೆ ಎನ್‌ಜಿಒಗಳು ಬಂದು ಸಾಲ ತೀರಿಸುತ್ತಾರೆಯೇ’ ಎಂದು ರೈತ ಶಿವನಂಜೇಗೌಡ ಕಿಡಿಕಾರಿದರು.

ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ಆಫ್‌ ಇಂಡಿಯಾ ದ ಪರವಾಗಿ ಬಂದಿದ್ದೇವೆ ಎಂಬ ಎನ್‌ಜಿಒ ತಂಡದವರು ಸಂತೆ ನಡೆಯುತ್ತಿದ್ದ ಜಾಗಕ್ಕೆ ಗ್ರಾಮಾಂತರ ಪೊಲೀಸರೊಂದಿಗೆ ತೆರಳಿ ರೈತರು ಮಾರಾಟಕ್ಕೆ ತಂದಿದ್ದ ಜಾನುವಾರುಗಳನ್ನು ಮಾರಾಟ ಮಾಡದಂತೆ ಹಾಗೂ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಂದಾಗಿ ರೈತರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು.

ರೈತರು ಆಕ್ಷೇಪದ ಕಾರಣ ತಿರುಗಿ ಬೀಳುತ್ತಿದ್ದಂತೆ ಅಲ್ಲಿಂದ ಗ್ರಾಮಾಂತರ ಪೊಲೀಸ್‌ ಠಾಣೆಗೆ ತೆರಳಿ ಇಲ್ಲಿ ರೈತರು ಕಸಾಯಿಖಾನೆಗೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ.

ನಂದಿನಿ ಮತಿಯಾರ್‌ ಎಂಬುವರು ದೂರು ನೀಡಿದ್ದಾರೆ; ಅದನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.