ರಾಮನಗರ: ಸತತ ಒಂದು ತಿಂಗಳು ನಡೆದ ದ್ವಿತೀಯ ಪಿಯುಸಿ ಪರೀಕ್ಷೆ–2 ಗುರುವಾರ ಮುಗಿಯಿತು. ಏಪ್ರಿಲ್ 29ಕ್ಕೆ ಶುರುವಾದ ಪರೀಕ್ಷೆಯು ಕಡೆಯದಾಗಿ ಉರ್ದು ಮತ್ತು ತಮಿಳು ಭಾಷಾ ವಿಷಯದ ಪರೀಕ್ಷೆಯೊಂದಿಗೆ ಅಂತ್ಯಗೊಂಡಿತು. ಗುರುವಾರ ನಡೆದ ಉರ್ದು ವಿಷಯದ ಪರೀಕ್ಷೆಯನ್ನು ಏಕೈಕ ವಿದ್ಯಾರ್ಥಿ ಬರೆದಿದ್ದ ವಿಶೇಷವಾಗಿತ್ತು.
ಜಿಲ್ಲೆಯಲ್ಲಿ ಕನ್ನಡ, ಇತಿಹಾಸ, ಭೌತಶಾಸ್ತ್ರ, ಇಂಗ್ಲಿಷ್, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಭೂಗೋಳಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ, ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, ಅರ್ಥಶಾಸ್ತ್ರ, ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಹಿಂದಿ, ತಮಿಳು ಹಾಗೂ ಉರ್ದು ಸೇರಿದಂತೆ ಒಟ್ಟು 21 ವಿಷಯಗಳಿಗೆ ಪರೀಕ್ಷೆ ನಡೆದಿತ್ತು.
‘ಶಿಕ್ಷಣ ಶಾಸ್ತ್ರ, ಉರ್ದು ಹಾಗೂ ತಮಿಳು ವಿಷಯಕ್ಕೆ ಕೇವಲ ಒಬ್ಬರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ, ತಮಿಳು ವಿದ್ಯಾರ್ಥಿ ಗೈರಾದಾರೆ, ಉಳಿದಿಬ್ಬರು ಪರೀಕ್ಷೆ ಎದುರಿಸಿದರು. ಮೂಲಗಣಿತಕ್ಕೆ ನೋಂದಣಿ ಮಾಡಿಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬರು ಗೈರಾಗಿ ಮತ್ತೊಬ್ಬರು ಪರೀಕ್ಷೆ ಬರೆದಿದ್ದರು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ನಾಗಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿಯ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಗಳು ಜರುಗಿದವು.
ಈ ಸಲದ ದ್ವಿತೀಯ ಪಿಯುಸಿ ಪರೀಕ್ಷೆ–2 ಅನ್ನು ವೆಬ್ ಕ್ಯಾಸ್ಟಿಂಗ್ ನಿಗಾದಲ್ಲಿ ನಡೆಸಲಾಯಿತು. ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ – ನಾಗಮ್ಮ ಉಪ ನಿರ್ದೇಶಕಿ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.