ADVERTISEMENT

ರಾಮನಗರ: ರಾಗಿ ಮೆದೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 4:33 IST
Last Updated 26 ಡಿಸೆಂಬರ್ 2025, 4:33 IST
ರಾಮನಗರ ತಾಲ್ಲೂಕಿನ ಜಯಪುರ ಗೊಲ್ಲರದೊಡ್ಡಿಯಲ್ಲಿ ರಾಗಿ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು
ರಾಮನಗರ ತಾಲ್ಲೂಕಿನ ಜಯಪುರ ಗೊಲ್ಲರದೊಡ್ಡಿಯಲ್ಲಿ ರಾಗಿ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು   

ರಾಮನಗರ: ರೈತರು ತಮ್ಮ ಜಮೀನಿನಲ್ಲಿ ಒಕ್ಕಣೆ ಮಾಡಲು ಇಟ್ಟಿದ್ದ ಮೂರು ರಾಗಿ ಮೆದೆಗಳಿಗೆ ಕಿಡಿಗೇಡಿಗಳು ಮಧ್ಯಾಹ್ನ ಬೆಂಕಿ ಹಚ್ಚಿದ್ದರಿಂದ ಮೆದೆಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲ್ಲೂಕಿನ ಜಯಪುರ ಗೊಲ್ಲರದೊಡ್ಡಿ ಮತ್ತು ಲಕ್ಕಸಂದ್ರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗೊಲ್ಲರದೊಡ್ಡಿಯ ಜಿ.ಸಿ. ನಾಗರಾಜು, ಯತೀಶ್ ಯಾದವ್, ಜಿ.ಸಿ. ಪ್ರಸನ್ನಕುಮಾರ್ ಹಾಗೂ ಲಕ್ಕಸಂದ್ರದ ಶಿವಣ್ಣ ಅವರಿಗೆ ಸೇರಿದ ರಾಗಿ ಮೆದೆಗಳು ಬೆಂಕಿಗೆ ಆಹುತಿಯಾಗಿವೆ. ಸಂಕ್ರಾಂತಿ ಹಬ್ಬದ ಹೊತ್ತಿಗೆ ಒಕ್ಕಣೆ ಮಾಡುವುದಕ್ಕಾಗಿ ರೈತರು ತಮ್ಮ ಜಮೀನಿನಲ್ಲಿ ಇತ್ತೀಚೆಗೆ ರಾಗಿ ಕೊಯ್ಲು ಮುಗಿಸಿ ಮೆದೆ ಹಾಕಿದ್ದರು.

ಹೊಲದಲ್ಲಿರುವ ಮೆದೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಜೊತೆಗೆ ತಾವೂ ಸಹ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ADVERTISEMENT

ಆದರೆ, ರಾಗಿ ಪೈರುಗಳು ಒಣಗಿದ್ದರಿಂದ ಬೆಂಕಿ ಬೇಗನೆ ಹೊತ್ತಿಕೊಂಡಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬಹುತೇಕ ರಾಗಿ ಮೆದೆ ಬೆಂಕಿ ಪಾಲಾಗಿತ್ತು. ನಂತರ ಸಿಬ್ಬಂದಿ ಬೆಂಕಿ ನಂದಿಸಿದರು.

ಈ ವೇಳೆ ಮಾತನಾಡಿದ ರೈತ ಗೊಲ್ಲರದೊಡ್ಡಿಯ ಯತೀಶ್ ಯಾದವ್, ‘ಕಿಡಿಗೇಡಿಗಳ ಕೃತ್ಯದಿಂದಾಗಿ ಇಡೀ ಬೆಳೆ ಬೆಂಕಿಗೆ ಆಹುತಿಯಾಗಿದೆ. ಇದರಿಂದಾಗಿ ನಮಗೂ ಮತ್ತು ಜಾನುವಾರುಗಳ ಮೇವಿಗೂ ಗತಿ ಇಲ್ಲದಂತಾಗಿದೆ. ಕಷ್ಟಪಟ್ಟು ಬೆವರು ಹರಿಸಿ ಬೆಳೆದ ಬೆಳೆ ಕಣ್ಣೆದುರಿಗೇ ಬೆಂಕಿ ಪಾಲಾಗುವ ಸ್ಥಿತಿ ಯಾರಿಗೂ ಬರಬಾರದು’ ಎಂದರು.

‘ರಾಗಿ ಮೆದೆಯು ಬೆಂಕಿ ಪಾಲಾಗಿದ್ದರಿಂದ ನಮಗೆ ನಷ್ಟವಾಗಿದೆ. ಕಿಡಿಗೇಡಿಗಳ ಬೆಂಕಿ ಹಚ್ಚಿರುವುದರಿಂದಾಗಿ ನಮಗೆ ಸಾವಿರಾರು ರೂಪಾಯಿ ನಷ್ಟವಾಗಿದೆ. ಜಿಲ್ಲಾಡಳಿತವು ನಮಗೆ ಸೂಕ್ತ ಪರಿಹಾರ ನೀಡುವ ಮೂಲಕ, ನಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಲಕ್ಕಸಂದ್ರ ಗ್ರಾಮದ ರೈತ ಶಿವಣ್ಣ ಒತ್ತಾಯಿಸಿದರು.

ಆನೆ ಪಾಲಾದ ರಾಗಿ

ರಾಮನಗರ: ತಾಲ್ಲೂಕಿನ ಮಾಯಗಾನಹಳ್ಳಿಗೆ ರೈತ ಬಂದಿರುವ ಕಾಡಾನೆಯು ರೈತ ರೇವಣ್ಣ ಅವರು ತಮ್ಮ ಕಣದಲ್ಲಿ ಒಕ್ಕಣೆ ಮಾಡಿ ರಾಶಿ ಹಾಕಿದ್ದ ರಾಗಿಯನ್ನು ತಿಂದು ಹಾಕಿದೆ. ದಿಗೊಂದಿ ಅರಣ್ಯ ಪ್ರದೇಶದಿಂದ ಬಂದಿರುವ ಒಂಟಿಯಾನೆ ಮಾಯಗಾನಹಳ್ಳಿ ಮತ್ತು ಸಂಗಬಸವನದೊಡ್ಡಿ ಗ್ರಾಮದ ರೈತರ ಜಮೀನಿಗೆ ಬಂದು ಬೆಳೆ ಹಾನಿ ಮಾಡುವುದು ಸಾಮಾನ್ಯವಾಗಿದೆ. ಇದೀಗ ರಾಶಿ ಹಾಕಿದ್ದ ರಾಗಿ ಕಾಡಾನೆ ಪಾಲಾಗಿದೆ. ಒಂದೂವರೆ ಎಕರೆಯಲ್ಲಿ ಕಷ್ಟಪಟ್ಟು ಬೆಳೆದಿದ್ದ ರಾಗಿಯನ್ನು ಒಕ್ಕಣೆ ಮಾಡಿ ಕಣದಲ್ಲಿ ರಾಶಿ ಹಾಕಿದ್ದೆವು. ಬೆಳಿಗ್ಗೆ ಚೀಲಕ್ಕೆ ತುಂಬಿಸಿ ಮನೆಗೆ ತರಬೇಕು ಅಂದುಕೊಂಡಿದ್ದೆ. ಆದರೆ ಮಂಗಳವಾರ ರಾತ್ರಿ ಕಣಕ್ಕೆ ಬಂದಿರುವ ಆನೆ ಬಹುತೇಕ ರಾಗಿಯನ್ನು ತಿಂದು ಹೋಗಿದೆ.ಕಳೆದ ವರ್ಷವೂ ಬೆಳೆದಿದ್ದ ಬೆಳೆ ಕಾಡಾನೆ ಪಾಲಾಗಿತ್ತು. ಈ ಸಲವೂ ಅದೇ ರೀತಿ ಆಗಿದೆ. ಅರಣ್ಯ ಇಲಾಖೆಯವರು ಕಾಡಾನೆ ಹಾವಳಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಕಷ್ಟಪಟ್ಟು ಬೆಳೆಯುವ ಬೆಳೆಯುವ ಕಾಡಾನೆಗಳ ಪಾಲಾಗಲಿದೆ ಎಂದು ರೈತ ರೇವಣ್ಣ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.