ರಾಮನಗರ: ‘ಜಿಲ್ಲೆಯ ಮಾಗಡಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಹಿತದೃಷ್ಟಿಯಿಂದ, ಹಾಲಿನ ದರವನ್ನು ₹5ರಷ್ಟು ಏರಿಕೆ ಮಾಡುವುದಾಗಿ ಭರವಸೆ ನೀಡಿರುವುದು ಸ್ವಾಗತಾರ್ಹ. ಹೈನುಗಾರಿಕೆಯಿಂದ ನಷ್ಟ ಅನುಭವಿಸುತ್ತಿರುವ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಾದರೆ ಹಾಲಿನ ದರವನ್ನು ₹10ರಷ್ಟು ಏರಿಕೆ ಮಾಡಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎ.ಎಲ್. ಬೈರೇಗೌಡ ಒತ್ತಾಯಿಸಿದರು.
‘ದನಗಳ ಖರೀದಿ ದರ ಸೇರಿದಂತೆ ಮೇವಿನ ಬೆಲೆಯೂ ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ಕರ್ನಾಟಕದಲ್ಲೇ ಅತಿ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡಲಾಗುತ್ತಿದೆ. ರಾಮನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಹಾಗಾಗಿ, ಹಾಲಿಗೆ ನ್ಯಾಯಯುತ ದರ ನಿಗದಿಪಡಿಸಬೇಕು’ ಎಂದು ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹಾಲಿನ ದರ ಏರಿಕೆ ಮಾಡುವ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿರೋಧ ವ್ಯಕ್ತಪಡಿಸಿರುವುದು ಖಂಡನೀಯ. ರೈತರಿಗೆ ಅನುಕೂಲವಾಗುವ ನಿರ್ಧಾರ ವಿರೋಧಿಸುವ ಅವರು ರೈತ ವಿರೋಧಿ. ತಮ್ಮ ಈ ಹೇಳಿಕೆಗೆ ಅವರು ರಾಜ್ಯದ ರೈತರ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.
ಆಧಾರ್ ಜೋಡಣೆ ಬೇಡ: ‘ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಯನ್ನು ನಿಲ್ಲಿಸಬೇಕು. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಇಂತಹ ರೈತ ವಿರೋಧಿ ನೀತಿಯನ್ನು ಕೈ ಬಿಟ್ಟು, ರೈತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ರಮಗಳ ಜಾರಿಗೆ ಗಮನ ಹರಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶವೆಂಬ ತಾರತಮ್ಯ ಮಾಡದೆ ಎಲ್ಲಾ ಭಾಗಕ್ಕೆ ಸಮಾನವಾಗಿ ವಿದ್ಯುತ್ ಕೊಡಬೇಕು’ ಎಂದರು.
‘ಜಿಲ್ಲೆಯಲ್ಲಿ ರೈತರಿಗೆ ವಿದ್ಯುತ್ ಅಳವಡಿಕೆಯು ತೀರಾ ವಿಳಂಬವಾಗಿದೆ. ಸುಮಾರು 15 ಸಾವಿರ ಪರಿವರ್ತಕಗಳ ಅಳವಡಿಕೆಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಬೆಸ್ಕಾಂನವರು ಹಣ ಕೂಡ ಪಾವತಿಸಿಕೊಂಡಿದ್ದಾರೆ. ಆದರೆ, ಅಳವಡಿಸದೆ ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳು ವಿಳಂಬ ತಪ್ಪಿಸಿ ಸಮರೋಪಾದಿಯಲ್ಲಿ ಪರಿವರ್ತಕಗಳನ್ನು ಅಳವಡಿಸಬೇಕು’ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಡಿ.ಎಂ. ಮಾದೇಗೌಡ, ಉಮೇಶ್, ಲೋಕೇಶ್, ಕುಮಾರ್ ಹಾಗೂ ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.