ADVERTISEMENT

ರಾಮನಗರ: ಅನಿತಾ ಕುಮಾರಸ್ವಾಮಿ ಮತ್ತೆ ಕಣಕ್ಕೆ?

ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಹಸಿರು ನಿಶಾನೆ ತೋರದ ಎಚ್‌ಡಿಕೆ

ಆರ್.ಜಿತೇಂದ್ರ
Published 18 ನವೆಂಬರ್ 2022, 6:57 IST
Last Updated 18 ನವೆಂಬರ್ 2022, 6:57 IST
ಅನಿತಾ ಕುಮಾರಸ್ವಾಮಿ
ಅನಿತಾ ಕುಮಾರಸ್ವಾಮಿ   

ರಾಮನಗರ: 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಅನಿತಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕೆಲ ತಿಂಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಆರಂಭದಲ್ಲಿ ಕ್ಷೇತ್ರದಿಂದ ಕೊಂಚ ವಿಮುಖರಾಗಿದ್ದ ಅನಿತಾ
ರಾಮನಗರದಲ್ಲಿ ಮತ್ತೆ ಹಿಂದೆಂದಿಗಿಂತ ಹೆಚ್ಚು ಸಕ್ರಿಯರಾಗಿದ್ದಾರೆ. ಮುಂದಿನ ಚುನಾವಣೆಗೂ ತಾವೇ ಅಭ್ಯರ್ಥಿ ಎಂಬಂತೆ ಓಡಾಡತೊಡಗಿದ್ದಾರೆ.

ರಾಮನಗರ ಕ್ಷೇತ್ರ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಅವರ ಕುಟುಂಬದವರೇ ಆದ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಗೆಲುವಿನ ಅಭಿಯಾನವು ಇಲ್ಲಿಂದಲೇ ಆರಂಭ ಆಗಬೇಕು ಎನ್ನುವುದು ದೇವೇಗೌಡರ ಕುಟುಂಬದ ಆಶಯ.

ADVERTISEMENT

ಹೀಗಾಗಿ ಈ ಬಾರಿ ಅನಿತಾ ಬದಲಿಗೆ ನಿಖಿಲ್‌ ಅವರೇ ಇಲ್ಲಿಂದ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿತ್ತು. ನಿಖಿಲ್‌ ಕೂಡ ಒಂದಿಷ್ಟು ದಿನ ಕ್ಷೇತ್ರ ಪರ್ಯಟನೆ ಮೂಲಕ ಈ ಮಾತುಗಳಿಗೆ ಪುಷ್ಟಿ ತುಂಬಿದ್ದರು. ಆದರೆ ಸದ್ಯ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ನಿಖಿಲ್ ರಾಮನಗರದಿಂದ ಸ್ಪರ್ಧೆ ವಿಷಯ ಇನ್ನೂ ಖಾತ್ರಿ ಆಗಿಲ್ಲ. ಒಟ್ಟಿನಲ್ಲಿ ಎಚ್‌ಡಿಕೆ ಕುಟುಂಬದವರೇ ಅಭ್ಯರ್ಥಿ ಆಗುವುದು ಖಚಿತ ಎನ್ನುತ್ತಾರೆ ಇಲ್ಲಿನ ಜೆಡಿಎಸ್ ಕಾರ್ಯಕರ್ತರು.

ಪರ್ಯಾಯ ನಾಯಕರಿಲ್ಲ: ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಎಚ್‌ಡಿಕೆ ಕುಟುಂಬದವರು ರಾಮನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ಕ್ಷೇತ್ರದಲ್ಲಿ ಈ ಕುಟುಂಬದವರನ್ನು ಹೊರತುಪಡಿಸಿ ಜೆಡಿಎಸ್‌ನಲ್ಲಿ ಪರ್ಯಾಯ ನಾಯಕರು ಇಲ್ಲ. ಹಿಂದೊಮ್ಮೆ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಕಾರಣಕ್ಕೆ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಥಳೀಯರಾದ ಕೆ. ರಾಜು ಅವರಿಗೆ ಶಾಸಕರಾಗುವ ಅವಕಾಶ ಒದಗಿಬಂದಿತ್ತು. ಈಗ ಅವರೂ ಕಾಂಗ್ರೆಸ್‌ನಲ್ಲಿ ಇದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟ ಎನ್ನುವ ಕಾರಣಕ್ಕೆ ಎಚ್‌ಡಿಕೆ ಕುಟುಂಬದವರೇ ಅಭ್ಯರ್ಥಿ ಆಗುವುದು ಖಚಿತ ಆದಂತೆ ಇದೆ.

ಕನಕಪುರಕ್ಕೆಸಿಕ್ಕಿಲ್ಲ ಅಭ್ಯರ್ಥಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರದಿಂದ ಜೆಡಿಎಸ್‌ಗೆ ಇನ್ನೂ ಅಭ್ಯರ್ಥಿ ಸಿಕ್ಕಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರೂ ತಲೆ ಕೆಡಿಸಿಕೊಂಡಿಲ್ಲ. ಜೆಡಿಎಸ್ ನಾಯಕರ ಈ ನಿರ್ಲಕ್ಷ್ಯ ಖಂಡಿಸಿ ಕನಕಪುರದ ಸ್ಥಳೀಯ ಕಾರ್ಯಕರ್ತರು ಈಚೆಗೆ ಎಚ್‌ಡಿಕೆ ತೋಟದ ಮನೆಗೆ ಮುತ್ತಿಗೆ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿಂದೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಡಿ.ಎಂ. ವಿಶ್ವನಾಥ್‌ ಈಗಾಗಲೇ ಪಕ್ಷ ತೊರೆದಿದ್ದಾರೆ. ಕಳೆದ ಚುನಾವಣೆಯಲ್ಲಿ ವಿಶ್ವನಾಥ್‌ ಸ್ಪರ್ಧೆ ಒಲ್ಲೆ ಎಂದಿದ್ದರಿಂದ ಕಡೆ ಕ್ಷಣದಲ್ಲಿ ಬಿಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ನಾರಾಯಣ ಗೌಡ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಈ ಬಾರಿ ಇಲ್ಲಿ ಜೆಡಿಎಸ್ ಹೊಸ ಅಭ್ಯರ್ಥಿ ಹುಡುಕಾಟದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.