ADVERTISEMENT

ರಾಮನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ: ಡಿಕೆಶಿ ಬಳಿಗೆ ಮುಖಂಡರ ಮುನಿಸು

ಆರ್.ಜಿತೇಂದ್ರ
Published 29 ಆಗಸ್ಟ್ 2021, 1:51 IST
Last Updated 29 ಆಗಸ್ಟ್ 2021, 1:51 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌    

ರಾಮನಗರ: ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿನ ಒಳಮುನಿಸು ಇದೀಗ ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಂಗಳ ತಲುಪಿದ್ದು, ಸದ್ಯದಲ್ಲೇ ಸಂಧಾನ ಸಭೆ ನಡೆಯುವ ನಿರೀಕ್ಷೆ ಇದೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರಿಗೇ ಟಿಕೆಟ್ ನೀಡಬೇಕು. ಅದರಲ್ಲೂ ಸಯ್ಯದ್ ಜಿಯಾವುಲ್ಲಾರಂತಹ ಅನುಭವಿಗಳಿಗೆ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿಕೆ ನೀಡಿದ್ದರು. ಈ ಮೂಲಕ ಸ್ವಾಭಿಮಾನಿ ಅಸ್ತ್ರದ ‍ಪ್ರಯೋಗ ಮಾಡಿದ್ದರು. ಆದರೆ, ಪಕ್ಷದ ಮುಖಂಡ ಇಕ್ಬಾಲ್‌ ಹುಸೇನ್ ಅವರನ್ನು ಪಕ್ಷವು ಈಗಾಗಲೇ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿದ್ದು, ಇಕ್ಬಾಲ್ ಸಹ ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಹೊತ್ತಿನಲ್ಲೇ ಲಿಂಗಪ್ಪ ಅವರ ಹೇಳಿಕೆ ಸಹಜವಾಗಿಯೇ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸುರೇಶ್‌ ಮಧ್ಯ ಪ್ರವೇಶ: ಬಿಡದಿಯಲ್ಲಿ ಈಚೆಗೆ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಅಭ್ಯರ್ಥಿ ಆಯ್ಕೆ ಕುರಿತು ಸ್ಪಷ್ಟನೆ ನೀಡಿದ್ದರು. ಇಕ್ಬಾಲ್‌ ಹುಸೇನ್‌ ಅವರೇ ಪಕ್ಷದ ಅಭ್ಯರ್ಥಿ. ಈ ಬಗ್ಗೆ ಯಾರೂ ಗೊಂದಲ ಸೃಷ್ಟಿಸುವ ಮಾತುಗಳನ್ನು ಆಡಬಾರದು ಎಂದಿದ್ದರು. ಇದು ಸಹಜವಾಗಿಯೇ ಲಿಂಗಪ್ಪ ಮತ್ತಿತರಲ್ಲಿ ಅಸಮಾಧಾನ ಉಂಟು ಮಾಡಿದೆ. ಸುರೇಶ್‌ರ ಈ ಹೇಳಿಕೆ ಬಗ್ಗೆಯೂ ಲಿಂಗಪ್ಪ ಆತ್ಮೀಯರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಎನ್ನಲಾಗಿದೆ.

ಯಾಕೆ ಮುನಿಸು

ADVERTISEMENT

ಇಕ್ಬಾಲ್ ಹುಸೇನ್‌ ವಿರುದ್ಧ ಅಸಮಾಧಾನ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈಚೆಗೆ ರಾಮನಗರ ನಗರಸಭೆ ಚುನಾವಣೆಯ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿಗಳು ಇಕ್ಬಾಲ್‌ ವಿರುದ್ಧ ಸುದ್ದಿಗೋಷ್ಠಿ ಮೂಲಕ ವಾಗ್ದಾಳಿ ನಡೆಸಿದ್ದರು. ಉಪ ಚುನಾವಣೆ ಮೊದಲಾದ ಸಂದರ್ಭಗಳಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದವರನ್ನು ಇಕ್ಬಾಲ್ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ನಮ್ಮವರ ಸೋಲಿಗೆ ಕಾರಣವಾಗಿದ್ದಾರೆ ಎಂದು ದೂರಿದ್ದರು. ಅದರ ಬೆನ್ನಲ್ಲೇ ಸ್ವಾಭಿಮಾನಿ ಅಸ್ತ್ರ ಪ್ರಯೋಗ ಆಗಿರುವುದು ಕಾಂಗ್ರೆಸ್ ಒಳಗಿನ ಎರಡನೇ ಹಂತದ ನಾಯಕರಲ್ಲಿನ ಅಸಮಾಧಾನ ಈ ಮೂಲಕ ಸ್ಫೋಟ ಆಗಿದೆ.

ಮತ್ತೊಂದೆಡೆ ಇಕ್ಬಾಲ್‌ ಹುಸೇನ್‌ ಡಿ.ಕೆ. ಸಹೋದರರಲ್ಲಿ ವಿಶ್ವಾಸ ಇಟ್ಟಿದ್ದಾರೆ. ಏನೇ ಆದರೂ ಅವರೇ ಸಮಸ್ಯೆ ಬಗೆಹರಿಸಲಿದ್ದಾರೆ ಎಂಬ ವಿಶ್ವಾಸದಿಂದಲೇ ಮತ್ತೆ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷ ಬಾಕಿ ಇದ್ದು, ಸದ್ಯದಲ್ಲೇ ಸಮಸ್ಯೆ ಬಗೆಹರಿಸುವ ಸಾಧ್ಯತೆ
ಇದೆ.

ತಳ್ಳಿ ಹಾಕುವಂತಿಲ್ಲ

ಜಿಲ್ಲೆಯ ರಾಜಕಾರಣದಲ್ಲಿ ಸಿ.ಎಂ. ಲಿಂಗಪ್ಪ ಅವರು ಡಿ.ಕೆ. ಶಿವಕುಮಾರ್‌ರಷ್ಟೇ ಅನುಭವಿ ರಾಜಕಾರಣಿ. ಹಲವು ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದವರು. ಈ ಅನುಭವ ಗುರುತಿಸಿಯೇ ಕಾಂಗ್ರೆಸ್‌ ಅವರಿಗೆ ವಿಧಾನ ಪರಿಷತ್‌ನಲ್ಲಿ ಸ್ಥಾನ ನೀಡಿದೆ. ಇದೀಗ ಅವರೇ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಧ್ವನಿ ಎತ್ತಿರುವುದು ಪಕ್ಷದ ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಅವರ ಅಭಿಪ್ರಾಯವನ್ನು ಏಕಾಏಕಿ ತಳ್ಳಿಹಾಕು
ವಂತಿಲ್ಲ.

ಬಿಡದಿಯಲ್ಲಿನ ಸಭೆ ಬಳಿಕ ಲಿಂಗಪ್ಪರ ಜೊತೆ ಚರ್ಚಿಸಲು ಸಂಸದ ಡಿ.ಕೆ. ಸುರೇಶ್‌ ಪ್ರಯತ್ನಿಸಿದ್ದಾರೆ. ಆದರೆ ಲಿಂಗಪ್ಪ ಅದಕ್ಕೆ ಅವಕಾಶ ನೀಡಿಲ್ಲ. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.