ADVERTISEMENT

ಬಿಡದಿ | ಬಿಸಿ ಬೂದಿ ಅವಘಡ: ಬಾಯ್ಲರ್‌ಗೆ ಹಸಿ ಕಸ ಸುರಿದಿದ್ದರು!

ಅರೆಬರೆ ಬೆಂದು ಚಿಮಣಿಯಲ್ಲಿ ಕಟ್ಟಿಕೊಂಡಿದ್ದ ಕಸ

ಓದೇಶ ಸಕಲೇಶಪುರ
Published 16 ಜನವರಿ 2025, 0:30 IST
Last Updated 16 ಜನವರಿ 2025, 0:30 IST
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಸ್ಥಾವರದಲ್ಲಿ ಕಾರ್ಮಿಕರ ಮೇಲೆ ಬಿಸಿ ಬೂದಿ ಸಿಡಿದ ಸ್ಥಳದಲ್ಲಿ ಬಿದ್ದಿರುವ ಅರೆಬರೆ ಉರಿದ ಕಸ
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಸ್ಥಾವರದಲ್ಲಿ ಕಾರ್ಮಿಕರ ಮೇಲೆ ಬಿಸಿ ಬೂದಿ ಸಿಡಿದ ಸ್ಥಳದಲ್ಲಿ ಬಿದ್ದಿರುವ ಅರೆಬರೆ ಉರಿದ ಕಸ   

ಬಿಡದಿ (ರಾಮನಗರ): ನಾಲ್ವರು ಕಾರ್ಮಿಕರ ಸಾವಿಗೆ ಕಾರಣವಾದ ಇಲ್ಲಿನ ಕೈಗಾರಿಕಾ ಪ್ರದೇಶದ ಬೈರಮಂಗಲ ರಸ್ತೆಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ ಒಣಕಸದ ಜೊತೆಗೆ, ಹಸಿಕಸವನ್ನೂ ಸುರಿದಿದ್ದು ಅವಘಡಕ್ಕೆ ಕಾರಣ. ಇದೇ ಕಾರಣಕ್ಕೆ ಸ್ಥಾವರದಲ್ಲಿ ಕಸ ಮಿಶ್ರಿತ ಬೂದಿ ಕಟ್ಟಿಕೊಂಡಿತ್ತು.

ಘಟನೆ ಕುರಿತು ತನಿಖೆ ನಡೆಸುತ್ತಿರುವ ಬಿಡದಿ ಠಾಣೆ ಪೊಲೀಸರು ಸೇರಿದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಬಾಯ್ಲರ್ ಹಾಗೂ ಕೈಗಾರಿಕಾ ಸುರಕ್ಷತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಅಂಶ ಗೊತ್ತಾಗಿದೆ.

ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ತ್ಯಾಜ್ಯದಿಂದ ಇಂಧನ ಉತ್ಪಾದಿಸುವುದಕ್ಕಾಗಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್‌) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಸ್ಥಾವರ ನಿರ್ಮಿಸಿವೆ. ಸುಮಾರು ₹310 ಕೋಟಿ ವೆಚ್ಚದ ಸ್ಥಾವರದಲ್ಲಿ ನಿತ್ಯ 600 ಟನ್ ಒಣತ್ಯಾಜ್ಯ ಬಳಸಿ 11.5 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.

ADVERTISEMENT

ಅರೆಬರೆ ಉರಿದಿದ್ದ ಕಸ:

‘ಸ್ಥಾವರಕ್ಕೆ ನಿತ್ಯ ಅಗತ್ಯವಿರುವ 600 ಟನ್ ಒಣಕಸವನ್ನು ಬಿಬಿಎಂಪಿ ತನ್ನ ಲಾರಿಗಳಲ್ಲಿ ಕಳುಹಿಸುತ್ತಿದೆ. ಸುಲಭವಾಗಿ ಉರಿಯಬಲ್ಲ ಕಸ ಹೊರತುಪಡಿಸಿ, ಉರಿಯದ ಹಾಗೂ ಹಸಿಕಸವನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಆದರೆ, ಇಸ್ಗೆಕ್ (ಐಎಸ್‌ಜಿಇಸಿ) ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿತ್ತು’ ಎಂದು ವಿವಿಧ ಇಲಾಖೆಗಳ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಮೂಲದಲ್ಲೇ ಒಣಕಸ ಸರಿಯಾಗಿ ವಿಂಗಡಣೆಯಾಗದೆ ಸ್ಥಾವರಕ್ಕೆ ಬರುತ್ತಿತ್ತು. ಇಲ್ಲಿಗೆ ಬಂದ ಬಳಿಕ ಮತ್ತೊಮ್ಮೆ ಕಸವನ್ನು ಸಂಸ್ಕರಿಸಿ ಬಾಯ್ಲರ್‌ಗೆ ಕಳಿಸಬೇಕು. ಆದರೆ, ಅದ್ಯಾವುದನ್ನೂ ಮಾಡದೆ ಬಿಬಿಎಂಪಿಯಿಂದ ಬಂದ ಕಸವನ್ನು ಆಟೊ ಟಿಪ್ಪರ್‌ಗಳಲ್ಲಿ ತಂದು ಸುರಿದು, ನೇರವಾಗಿ ಬಾಯ್ಲರ್‌ಗೆ ಕಳಿಸಲಾಗುತ್ತಿತ್ತು. ಇದರಿಂದಾಗಿ, ಕೆಲ ಉರಿಯದ ವಸ್ತುಗಳು ಸೇರಿದಂತೆ ಹಸಿಕಸವು ಅರೆಬರೆ ಉರಿದಿತ್ತು. ಬೂದಿಯಾಗಿ ಬರುವ ಚಿಮಣಿಯಲ್ಲಿ ಅರೆಬರೆ ಬೆಂದ ಕಸ ಕಟ್ಟಿಕೊಂಡಿತ್ತು’ ಎಂದು ಮೂಲಗಳು ಹೇಳಿವೆ.

ಇಷ್ಟಕ್ಕೂ ಸ್ಥಾವರ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ಕಾರ್ಮಿಕರು, ಅದರಲ್ಲೂ ನುರಿತ ಕಾರ್ಮಿಕರು ಕೆಲಸ ಮಾಡುತ್ತಿರಲಿಲ್ಲ. ಕಡಿಮೆ ಕಾರ್ಮಿಕರನ್ನೇ ಬಳಸಿಕೊಂಡೇ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಲಾಗಿತ್ತು. ಹಾಗಾಗಿ, ನಿರ್ದಿಷ್ಟ ಕೆಲಸಕ್ಕೆ ನುರಿತ ಕಾರ್ಮಿಕರು ಸ್ಥಾವರದಲ್ಲಿ ಇರಲಿಲ್ಲ ಎನ್ನುತ್ತವೆ ಮೂಲಗಳು.

ಜ. 4ರಂದು ಸಂಭವಿಸಿದ್ದ ಅವಘಡದಲ್ಲಿ ಬಿಸಿ ಬೂದಿ ಮೈ ಮೇಲೆ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ಐವರ ಕಾರ್ಮಿಕರ ಪೈಕಿ, ನಾಲ್ವರು ಮೃತಪಟ್ಟಿದ್ದಾರೆ. ಸದ್ಯ ಒಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು, ಐಸ್ಗೆಕ್ ಕಂಪನಿಯ ವ್ಯವಸ್ಥಾಪಕನನ್ನು ಬಂಧಿಸಿದ್ದಾರೆ. ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಕಂಪನಿ ಮುಖ್ಯಸ್ಥರು, ಕೆಪಿಸಿಎಲ್ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.

ಕಟ್ಟಿಕೊಂಡಿದ್ದ ಅರೆಬರೆ ಕಸ ಮತ್ತು ಬೂದಿ ತೆರವುಗೊಳಿಸಲು ಕಾರ್ಮಿಕರು ತೆರೆದಿದ್ದ ಚಿಮಣಿಯ ಬಾಗಿಲು

ಅಂಕಿಅಂಶ...

₹310 ಕೋಟಿ: ಸ್ಥಾವರ ನಿರ್ಮಾಣದ ವೆಚ್ಚ

11.5 ಮೆಗಾವಾಟ್: ಸ್ಥಾವರದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ

600 ಟನ್: ವಿದ್ಯುತ್ ಉತ್ಪಾದನೆಗೆ ಬೇಕಾದ ಒಣಕಸ

ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಸ್ಥಾವರ

ಎಸ್‌ಒಪಿ ನಿರ್ಲಕ್ಷ್ಯದಡಿ ಪ್ರಕರಣ

ಸ್ಥಾವರದಲ್ಲಿ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಪಾಲಿಸಿಲ್ಲ. ಅವಘಡಕ್ಕೆ ಇದೇ ಕಾರಣ. ಒಣಕಸವನ್ನು ಸ್ಥಾವರಕ್ಕೆ ಹಾಕುವುದರಿಂದಿಡಿದು ಅದು ಉರಿದು ಬೂದಿಯಾಗಿ ಕೆಳಕ್ಕೆ ಬೀಳುವವರೆಗೆ ವಿವಿಧ ಹಂತಗಳಲ್ಲಿ ನಿರ್ವಹಿಸಬೇಕಾದ ಕೆಲಸಗಳಿಗೆ ಅನುಸರಿಸಬೇಕಾದ ಎಸ್‌ಒಪಿಯನ್ನು ಸ್ಥಾವರದಲ್ಲಿ ಕಡೆಗಣಿಸಲಾಗಿದೆ. ಸ್ಥಾವರಕ್ಕೆ ಅಗತ್ಯವಿರುವ ಉರಿಯಬಹುದಾದ ಒಣಕಸವನ್ನು ಮಾತ್ರ ಹಾಕಬೇಕು. ಆದರೆ ಇಲ್ಲಿ ಹಸಿಕಸವೂ ಮಿಶ್ರಣವಾಗಿರುವುದು ಕಂಡುಬಂದಿದೆ. ಅಲ್ಲದೆ ಉರಿದ ಕಸ ಬೂದಿಯಾಗಿ ಬೀಳುವ ಚಿಮಣಿಯಲ್ಲಿ ಕಟ್ಟಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ಕಟ್ಟಿಕೊಂಡರೆ ಕಾರ್ಯಾಚರಣೆ ನಿಲ್ಲಿಸಿ ಅದನ್ನು ತೆರವುಗೊಳಿಸಬೇಕು. ಕಾರ್ಯಾಚರಣೆ ಹಂತದಲ್ಲೇ ತೆರವು ಮಾಡವುದಾದರೆ ವೈಯಕ್ತಿಕ ಸುರಕ್ಷತಾ ಪರಿಕರ (ಪಿಪಿಇ) ಬಳಸಬೇಕು. ಆದರೆ ಸ್ಥಾವರದಲ್ಲಿ ಇವೆರಡನ್ನು ಮಾಡಿಲ್ಲ. ಈ ಕುರಿತು ಬಿಎನ್‌ಎಸ್ ಸೆಕ್ಷನ್ 223ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು  ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಕಾರ್ಖಾನೆಗಳು ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.