ADVERTISEMENT

ರಾಮನಗರ: ನಲವತ್ತು ವಕೀಲರ ವಿರುದ್ಧ ಪ್ರಕರಣ– ನಾಳೆ ವಕೀಲರಿಂದ ವಿಧಾನಸೌಧ ಚಲೋ

ಮುಂದುವರಿದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 21:00 IST
Last Updated 20 ಫೆಬ್ರುವರಿ 2024, 21:00 IST
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಿರತ ವಕೀಲರನ್ನು  ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಂಗಳವಾರ ಭೇಟಿ ಮಾಡಿದರು. ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಹಾಗೂ ಸಂಘದ ಪದಾಧಿಕಾರಿಗಳು ಇದ್ದಾರೆ
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಿರತ ವಕೀಲರನ್ನು  ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಂಗಳವಾರ ಭೇಟಿ ಮಾಡಿದರು. ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಹಾಗೂ ಸಂಘದ ಪದಾಧಿಕಾರಿಗಳು ಇದ್ದಾರೆ   

ರಾಮನಗರ: ನಲವತ್ತು ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆಯ ಪಿಎಸ್‌ಐ ಸಯ್ಯದ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ಒಂಬತ್ತು ದಿನಗಳಿಂದ ಧರಣಿ ನಡೆಸುತ್ತಿರುವ ವಕೀಲರು ಹೋರಾಟವನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. 

ಬೆಂಗಳೂರಿನಲ್ಲಿ ಫೆ. 22ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ಮತ್ತು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದು ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ಎರಡು ದಿನ ಪೂರೈಸಿದೆ.

ರಾತ್ರಿ ಡಿ.ಸಿ ಕಚೇರಿ ಎದುರು ಮಲಗಿದ್ದ ವಕೀಲರು, ಬೆಳಿಗ್ಗೆ ಎಂದಿನಂತೆ ತಮ್ಮ ಧರಣಿ ಆರಂಭಿಸಿದರು. 10 ಗಂಟೆ ಹೊತ್ತಿಗೆ ಮಹಿಳಾ ವಕೀಲರು ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳ ವಕೀಲರು ಸಹ ಧರಣಿಯಲ್ಲಿ ಸೇರಿಕೊಂಡರು. ಪಿಎಸ್‌ಐ ಅಮಾನತಿಗೆ ಆಗ್ರಹಿಸುವ ಜೊತೆಗೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಕ್ಕಪಕ್ಕದ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಬಂದಿದ್ದ ವಕೀಲರ ಸಂಘದ ಪದಾಧಿಕಾರಿಗಳು ಧರಣಿ ಬೆಂಬಲಿಸಿ ಮಾತನಾಡಿದರು. 

ಧರಣಿ ನಿರತ ಸ್ಥಳಕ್ಕೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮುಖಂಡ ಗೌತಮ್ ಗೌಡ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ವಕೀಲರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಸಮಸ್ಯೆ ಪರಿಹರಿಸದ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಡಿಸಿಎಂ ಉದ್ಧಟತನ: ‘ವಕೀಲರ ಪ್ರತಿಭಟನೆಗೆ ಸಂಬಂಧಿಸಿದಂತೆ ನನ್ನನ್ನು ಯಾರೂ ಬಂದು ಸಂಪರ್ಕಿಸಿಲ್ಲವೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಧಟತನದ ಮಾತನಾಡಿದ್ದಾರೆ’ ಎಂದು ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ವಿಶಾಲ್ ರಘು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಕೇಂದ್ರದಲ್ಲಿ 9 ದಿನಗಳಿಂದ ನಡೆಯುತ್ತಿರುವ ಹೋರಾಟದ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ವರದಿಯಾಗುತ್ತಿದೆ. ಹೀಗಿದ್ದರೂ ನಾವು ನಿಮ್ಮ ಬಳಿ ಬರಬೇಕಾ? ಹೋರಾಟದ ಕುರಿತು ಜಿಲ್ಲಾಡಳಿತ ಹಾಗೂ ನಿಮ್ಮ ಪಕ್ಷದ ಸ್ಥಳೀಯ ಶಾಸಕರು ನಿಮಗೆ ಮಾಹಿತಿ ನೀಡಿಲ್ಲವೇ?’ ಎಂದು ಪ್ರಶ್ನಿಸಿದರು.

‘ಪಿಎಸ್ಐ ಅಮಾನತು ಮಾಡಿದರೆ ನನ್ನ ಮರ್ಯಾದೆ ಹೋಗುತ್ತದೆ ಎಂದು ಸ್ಥಳೀಯ ಶಾಸಕರು ಹೇಳಿದ್ದಾರೆ.  ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಡೀ ಜಿಲ್ಲಾಡಳಿತ ಡಿ.ಕೆ ಸಹೋದರರ ಕೈಗೊಂಬೆಯಾಗಿದೆ. ಹೀಗಿದ್ದರೂ, ಡಿಸಿಎಂ ಅವರು ಹೋರಾಟವನ್ನು ರಾಜಕೀಯ ಪ್ರೇರಿತ ಎಂದಿರುವುದು ನಾಚಿಕೆಗೇಡು’ ಎಂದರು.

‘ನಾವು ಗಾಂಧೀಜಿ ಭಾವಚಿತ್ರದೊಂದಿಗೆ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಹಿಂದೆ ವಕೀಲರ ಸಮ್ಮೇಳನ ಕುರಿತು ನಿಮ್ಮನ್ನು ಸಂಪರ್ಕಿಸಿದಾಗ ನೀವು ಹೇಗೆ ನಡೆದುಕೊಂಡಿರಿ ಎಂಬುದು ಗೊತ್ತಿದೆ. ಇನ್ನು ಮುಂದೆ ನಾವು ಯಾರನ್ನೂ ಭೇಟಿ ಮಾಡುವುದಿಲ್ಲ. ಅವರೇ ಬಂದು ಭೇಟಿ ಮಾಡಬೇಕು. ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.

ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ವಕೀಲರು ಮಂಗಳವಾರ ಧರಣಿ ಮುಂದುವರಿಸಿದರು

ಪಿಎಸ್‌ಐ ಅಮಾನತು ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ. ಪ್ರತಿಭಟನೆ ಅಹೋರಾತ್ರಿ ಧರಣಿಗೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಹಾಗಾಗಿ ನ್ಯಾಯಕ್ಕಾಗಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದೇವೆ

– ವಿಶಾಲ್ ರಘು ಅಧ್ಯಕ್ಷ ರಾಜ್ಯ ವಕೀಲರ ಪರಿಷತ್ತು

ರಾಜ್ಯದಾದ್ಯಂತ ವಕೀಲರನ್ನು ಸಂಘಟಿಸಿ ನ್ಯಾಯಕ್ಕಾಗಿ ಎಲ್ಲರೂ ರಾಜಧಾನಿಗೆ ಬರುವಂತೆ ಮಾಡುವ ದೃಷ್ಟಿಯಿಂದ ಬೆಂಗಳೂರು ಚಲೋ ಹೋರಾಟವನ್ನು ಫೆ. 21ರ ಬದಲು 22ಕ್ಕೆ ನಿಗದಿಯಾಗಿದೆ

–ತಿಮ್ಮೇಗೌಡ ಕಾರ್ಯದರ್ಶಿ ರಾಮನಗರ ಜಿಲ್ಲಾ ವಕೀಲರ ಸಂಘ

‘ಮುಖ್ಯಮಂತ್ರಿ ಮಧ್ಯ ಪ್ರವೇಶಿಸಬೇಕು’ ‘ವಕೀಲರ ಹೋರಾಟದ ವಿಷಯದಲ್ಲಿ ವಕೀಲರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಬೇಕು. ಡಿ.ಕೆ. ಸಹೋದರರಿಗೆ ಬುದ್ಧಿ ಹೇಳಿ ಪರಿಹರಿಸಬೇಕು. ಇಷ್ಟು ದಿನವಾದರೂ ಸಮಸ್ಯೆ ಬಗೆಹರಿಯದಿರುವುದನ್ನು ನೋಡಿದರೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಸಹೋದರರಿಗೆ ಭಯಪಡುತ್ತಾರೆ. ಅದಕ್ಕಾಗಿಯೇ ಯಾರೂ ವಕೀಲರ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು. ವಕೀಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಿಲ್ಲೆಯ ಅಧಿಕಾರಿಗಳು ಡಿ.ಕೆ ಸಹೋದರರ ಕೈಗೊಂಬೆಯಾಗಿದ್ದಾರೆ. ಇಲ್ಲಿ ಕೆಲಸ ಮಾಡುವುದೇ ಕಷ್ಟವಾಗಿದೆ. ಹಾಗಾಗಿ ಜಿಲ್ಲೆಗೆ ಬರಲು ಅಧಿಕಾರಿಗಳು ಭಯಪಡುತ್ತಾರೆ. ಬಂದರೂ ಅವರು ಹೇಳಿದಂತೆ ಕೇಳಿಕೊಂಡು ಹೋಗುತ್ತಾರೆ. ಜಿಲ್ಲಾಡಳಿತ ಸಂಪೂರ್ಣ ಕುಸಿದಿದೆ. ತನ್ನ ಶಿಷ್ಯನಾಗಿರುವ ರಾಮನಗರ ಶಾಸಕರನ್ನು ರಕ್ಷಿಸಲು ಸಂಸದ ಡಿ.ಕೆ. ಸುರೇಶ್ ಸುಮ್ಮನಿದ್ದಾರೆ. ಅವರ ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.