ADVERTISEMENT

ರಾಮನಗರ: ಚುಟುಕು ಸಾಹಿತ್ಯ ಪರಿಷತ್‌ನಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 14:13 IST
Last Updated 13 ಮಾರ್ಚ್ 2025, 14:13 IST
ರಾಮನಗರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಸವಿತಾ ಪಿ.ಆರ್ ಅವರನ್ನು ಸನ್ಮಾನಿಸಲಾಯಿತು. ಪರಿಷತ್ ಜಿಲ್ಲಾಧ್ಯಕ್ಷ ಅಂಬರೀಶ್, ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್. ಅರಸು ಹಾಗೂ ಇತರರು ಇದ್ದಾರೆ
ರಾಮನಗರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಸವಿತಾ ಪಿ.ಆರ್ ಅವರನ್ನು ಸನ್ಮಾನಿಸಲಾಯಿತು. ಪರಿಷತ್ ಜಿಲ್ಲಾಧ್ಯಕ್ಷ ಅಂಬರೀಶ್, ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್. ಅರಸು ಹಾಗೂ ಇತರರು ಇದ್ದಾರೆ   

ರಾಮನಗರ: ‘ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ದೊಡ್ಡದು. ಎಲ್ಲಾ ಸ್ತರಗಳಲ್ಲೂ ಕೆಲಸ ಮಾಡುತ್ತಿರುವ ಹೆಣ್ಣು ಅಬಲೆಯಾಗಿ ಉಳಿದಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ನಾವು ಪ್ರೇರಣೆಯಾಗಿಟ್ಟುಕೊಂಡು, ನಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು’ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಹೇಳಿದರು.

ನಗರದ ಬ್ಲಾಸಂ ಶಾಲೆಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಸನ್ಮುಖಿ ಚಾರಿಟೇಬಲ್ ಟ್ರಸ್ಟ್, ಜೈ ಭಾರತಿ ಸೇವಾ ಟ್ರಸ್ಟ್ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಷತ್ ಜಿಲ್ಲಾಧ್ಯಕ್ಷ ಅಂಬರೀಶ್ ಮಾತನಾಡಿ, ‘ತಾಯಿ, ಪತ್ನಿ, ಸಹೋದರಿ ಸೇರಿದಂತೆ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮಹಿಳೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಆಕೆಯ ತ್ಯಾಗ ಮತ್ತು ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾದುದು’ ಎಂದು ಹೇಳಿದರು.

ADVERTISEMENT

ಪರಿಷತ್ ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್. ಅರಸು, ‘ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಿಂದಿಡಿದು ಎಲ್ಲಾ ಹುದ್ದೆಗಳನ್ನು ಮಹಿಳೆ ಅಲಂಕರಿಸುವ ಮೂಲಕ ತನ್ನದೇ ಆದ ಸ್ಥಾನಮಾನ ಗಳಿಸಿದ್ದಾಳೆ. ಪರಿಷತ್ ಅಧ್ಯಕ್ಷ ಅಂಬರೀಶ್ ಈಗಾಗಲೇ 2 ಬಾರಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಈ ತಿಂಗಳು ಅವಧಿ ಮುಗಿದಿತ್ತು. ಅವರ ತಂಡದ ಕಾರ್ಯವೈಖರಿ ಗಮನಿಸಿ ಮುಂದಿನ ಅವಧಿಗೂ ಅಂಬರೀಶ್ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

ಕವಿಗಳಾದ ಪೂರ್ಣಚಂದ್ರ, ಮಲ್ಲೇಶ್ ಚೆನ್ನಮಾನಹಳ್ಳಿ, ರಾಘವೇಂದ್ರ, ಚಿಕ್ಕಣ್ಣ ಶಂಕರ್, ಪ್ರಭು ಅಂಜನಾಪುರ, ಮತ್ತಿಕೆರೆ ಚಲುವರಾಜ್, ಡಾ. ಹೇಮಂತ್ ಗೌಡ, ರಮೇಶ ಸಿ. ಹೊಸದೊಡ್ಡಿ ಕಾವ್ಯ ವಾಚನ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನ್ಯಾಯಾಧೀಶೆ ಸವಿತಾ ಪಿ.ಆರ್, ಹೇಮಾವತಿ ಅಂಬರೀಶ್, ಡಾ. ರತ್ನ ಹಾಲಪ್ಪ ಗೌಡ, ಸುಧಾರಾಣಿ ಪಿ., ಸಹನಾ ಸುನಿಲ್, ಸೀತಾಲಕ್ಷ್ಮಿ ವರ್ಮ ಅವರನ್ನು ಸನ್ಮಾನಿಸಲಾಯಿತು. ನವೀನ್ ಕುಮಾರ್, ಇಶಾಂತ್, ನೃತ್ಯಪಟು ರೇಣುಕಾ ಪ್ರಸಾದ್ ಎಸ್., ಡಾ. ಹೇಮಂತ್ ಗೌಡ ಇದ್ದರು. ಚಂದುಶ್ರೀ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.