
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ರೈತರು ಪ್ರತಿಭಟಿಸಿದರು.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಭೂ ಸ್ವಾಧೀನವಾಗಲಿರುವ 26 ಗ್ರಾಮಗಳ ರೈತರ ಸಮಸ್ಯೆಗಳ ಅರ್ಜಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಷ್ಟೊತ್ತಿಗಾಗಲೇ ಕಚೇರಿಯಲ್ಲಿ ಜಮಾಯಿಸಿದ್ದ ಹೆಚ್ಚಿನ ಮಹಿಳೆಯರು ಸೇರಿದಂತೆ ರೈತರು, ಕಚೇರಿಗ ಬಂದ ಶಾಸಕರಿಗೆ ಮುತ್ತಿಗೆ ಹಾಕಿದರು.
ಸರ್ಕಾರ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿದ ರೈತರು, ಟೌನ್‌ಶಿಪ್‌ಗೆ ಭೂಮಿ ಕೊಡುವುದಿಲ್ಲ ಎಂದು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರೈತರ ಮನವೊಲಿಸಲು ಮುಂದಾದ ಬಾಲಕೃಷ್ಣ, ‘ಇದು ಸರ್ಕಾರದ ಯೋಜನೆ. ಹಾಗಾಗಿ, ನನ್ನಿಂದ ಯೋಜನೆ ರದ್ದು ಮಾಡಲು ಸಾಧ್ಯವಿಲ್ಲ. ನಿಮ್ಮ ಅಹವಾಲು ತಿಳಿಸಿ. ಸರ್ಕಾರದ ಗಮನಕ್ಕೆ ತಂದು ಪರಿಹರಿಲು ಪ್ರಾಮಾಣಿಕವಾಗಿ ಶ್ರಮಿಸುವೆ’ ಎಂದರು.
ಅದಕ್ಕೆ ಒಪ್ಪದ ರೈತರು, ‘ಯೋಜನೆ ರದ್ದುಪಡಿಸಿ. ನಮ್ಮ ಭೂಮಿ ತಂಟೆಗೆ ಯಾರೂ ಬಾರದಂತೆ ನೋಡಿಕೊಳ್ಳಿ’ ಎಂದು ಆಗ್ರಹಿಸಿದರು. ‘ಅದು ನನ್ನ ಕೈಯಲ್ಲಿ ಇಲ್ಲ’ ಎಂದು ಬಾಲಕೃಷ್ಣ ಹೇಳಿದಾಗ, ರೈತರು ಆಕ್ರೋಶ ಹೊರಹಾಕಿದರು. ಆಗ ಮಾತಿನ ಚಕಮಕಿ ನಡೆಯಿತು.
ಮನವೊಲಿಕೆಗೆ ರೈತರು ಬಗ್ಗದಿದ್ದಾಗ ಬಾಲಕೃಷ್ಣ ಕಚೇರಿ ಒಳಗೆ ಹೋದರು. ರೈತರು ಹೊರಗಡೆ ಪ್ರತಿಭಟನೆ ಮುಂದುವರಿಸಿದರು. ಶಾಸಕರು ಒಳಗಡೆ ಯೋಜನೆ ಪರವಿರುವ ರೈತರಿಂದ ಅರ್ಜಿ ಸ್ವೀಕರಿಸುತ್ತಿದ್ದರೆ, ಹೊರಗಡೆ ಕೆಲವು ರೈತರು ಪ್ರತಿಭಟನೆ ನಡೆಸತೊಡಗಿದರು.
ಒಳಗಡೆ ಅರ್ಜಿ ಸ್ವೀಕರಿಸದ ಶಾಸಕರು, ಪ್ರತಿ ಅರ್ಜಿ ಪರಿಶೀಲಿಸಿ ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅರ್ಜಿ ಸ್ವೀಕಾರ ಮುಗಿದ ಬಳಿಕ ಶಾಸಕರು ಹೊರಬಂದಾಗ ರೈತರು ಮತ್ತೆ ಘೋಷಣೆ ಕೂಗಲಾರಂಭಿಸಿದರು. ಶಾಸಕರು ಮತ್ತೆ ತಮ್ಮ ಮಾತು ಪುನರುಚ್ಛರಿಸಿ ಸ್ಥಳದಿಂದ ಹೊರಟರು.
ನಂತರ ರೈತರು ಕಂದಾಯ ಭವನದ ಎದುರಿನ ಮೆಟ್ಟಿಲುಗಳ ಮೇಲೆ ಕೆಲ ಹೊತ್ತು ಕುಳಿತು ಪ್ರತಿಭಟನೆ ನಡೆಸಿ ಹೊರಟು ಹೋದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ಪರಿಸ್ಥಿತಿ ಕೈ ಮೀರಿದರೆ ಪ್ರತಿಭಟನಾಕಾರರ ಬಂಧನಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಪೊಲೀಸ್ ವಾಹನಗಳು ಸಹ ನಿಂತಿದ್ದವು.
ಪೋಡಿ ಪಹಣಿ ಹಿಂಡೀಕರಣ ಅಳತೆ ವ್ಯತ್ಯಾಸ ಹಿಂದೆ ಮಂಜೂರಾಗಿದ್ದ ಜಮೀನುಗಳಿಗೆ ಖಾತೆಯಾಗದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ 84 ಅರ್ಜಿಗಳು ಶಾಸಕರ ಸಭೆಯಲ್ಲಿ ಸ್ವೀಕಾರವಾಗಿವೆ– ಜಿ.ಎನ್. ನಟರಾಜ್ ಗಾಣಕಲ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಹೊಡಿಯೋಕೆ ಬರ್ತಿರಿ ಬಾಯಿಗೆ ಬಂದಂತೆ ಬೈತೀರಿ!: ಪ್ರಾಧಿಕಾರದ ಕಚೇರಿಯೊಳಗೆ ಟೌನ್‌ಶಿಪ್ ಯೋಜನಾ ಪ್ರದೇಶದ ರೈತರಿಂದ ಅರ್ಜಿ ಸ್ವೀಕಾರದ ಬಳಿಕ ಹೊರಬಂದ ಬಾಲಕೃಷ್ಣ ಅವರು ಮತ್ತೆ ರೈತರ ಮನವೊಲಿಸಲು ಯತ್ನಿಸಿದರು. ಆಗಲೂ ರೈತರು ತಮ್ಮ ಪಟ್ಟು ಸಡಿಲಿಸಲಿಲ್ಲ. ತಮ್ಮ ಅಹವಾಲಿಗೆ ಸ್ಪಂದಿಸಬೇಕು ಎಂದು ಪಟ್ಟು ಹಿಡಿದ ರೈತರು ಶಾಕರಿಗೆ ಹಸಿರು ಟವೆಲ್ ಹಾಕಿದರು. ಅದಕ್ಕೆ ಮುಗುಳ್ಳಕ್ಕ ಬಾಲಕೃಷ್ಣ ರೈತ ಮುಖಂಡರಿಂದ ಮೈಕ್ ತೆಗೆದುಕೊಂಡು ರೈತರ ಹೋರಾಟಕ್ಕೆ ಜಯವಾಲಿ ಎಂದು ಜೈಕಾರ ಕೂಗಿದರು. ಇಷ್ಟು ದಿನವಾದರೂ ಯಾಕೆ ರೈತರ ಅಹವಾಲು ಆಲಿಸಲಿಲ್ಲ ಎಂಬ ರೈತರ ಪ್ರಶ್ನೆಗೆ ‘ನೀವು ಹೊಡಿಯೋಕೆ ಬರ್ತಿರಿ. ಬಾಯಿಗೆ ಬಂದಂತೆ ಬೈತೀರಿ ಅಂತ ನಾನು ಇಷ್ಟು ದಿನ ನಿಮ್ಮ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ನಿಮ್ಮ ಅಹವಾಲು ಏನಿದೆಯೊ ಅದನ್ನು ಸರ್ಕಾರಕ್ಕೆ ತಿಳಿಸುತ್ತೇನೆ. ನಾನೂ ಸಹ ರೈತನ ಮಗ’ ಎಂದರು.
ಮನಬಂದಂತೆ ಮಾತಾಡುವ ಎಚ್‌ಡಿಕೆ: ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನಬಂದಂತೆ ಮಾತಾಡುವ ಬದಲು ರಾಜ್ಯಕ್ಕೆ ಒದಗಿಸಬೇಕಾದ ಸವಲತ್ತುಗಳ ಬಗ್ಗೆ ಗಮನ ಹರಿಸಲಿ. ವಾರಕ್ಕೊಮ್ಮೆ ಬಂದು ರಾಜ್ಯದ ರಾಜಕಾರಣದ ಬಗ್ಗೆ ಮಾತನಾಡದೆ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲಿ. ಅವರು ರಾಜ್ಯ ರಾಜಕಾರಣಕ್ಕೆ ಬಂದು ರಾಜಕಾರಣ ಮಾಡಲಿ. ನಮಗೇನು ತೊಂದನೆ ಇಲ್ಲ’ ಎಂದು ಎಚ್‌ಡಿಕೆ ಮತ್ತು ಡಿ.ಕೆ ಸಹೋದರರ ನಡುವಣ ವಾಕ್ಸಮರ ಕುರಿತ ಸುದ್ದಿಗಾರರ ಪ್ರಶ್ನೆಗೆ ಬಾಲಕೃಷ್ಣ ಪ್ರತಿಕ್ರಿಯಿಸಿದರು. ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ಅವರ ಪರವಾಗಿ ಕೆಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರನ್ನು ಸಿ.ಎಂ ಆಗುವ ಕುರಿತು ಹೈಕಮಾಂಡ್ ನಿರ್ಧರಿಸಬೇಕು. ನಾವು ಅದನ್ನು ಹೇಳುವುದು ಸರಿಯಲ್ಲ. ಅದಕ್ಕೆ ನಾವು ಸೂಕ್ತರಲ್ಲ. ಈ ಬಗ್ಗೆ ನಿತ್ಯ ಚರ್ಚಿಸುವುದು ಅನಗತ್ಯ’ ಎಂದು ಸಿ.ಎಂ ಬದಲಾವಣೆ ಕುರಿತು ಪ್ರಶ್ನೆಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.