ADVERTISEMENT

ರಾಮನಗರ | ಕೋರ್ಟ್‌ನಲ್ಲಿ ಹುಸಿ ಬಾಂಬ್ ಬೆದರಿಕೆ ಆತಂಕ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:25 IST
Last Updated 17 ಫೆಬ್ರುವರಿ 2026, 4:25 IST
ಬಾಂಬ್ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ರಾಮನಗರದ ಕೋರ್ಟ್ ಆವರಣದಲ್ಲಿ ಬಾಂಬ್ ಪತ್ತೆ ಮತ್ತು ಶ್ವಾನದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು
– ಪ್ರಜಾವಾಣಿ ಚಿತ್ರ
ಬಾಂಬ್ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ರಾಮನಗರದ ಕೋರ್ಟ್ ಆವರಣದಲ್ಲಿ ಬಾಂಬ್ ಪತ್ತೆ ಮತ್ತು ಶ್ವಾನದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು – ಪ್ರಜಾವಾಣಿ ಚಿತ್ರ   

ರಾಮನಗರ: ನಗರದ ಬಿ.ಎಂ. ರಸ್ತೆಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಕೋರ್ಟ್‌ ಸಂಕೀರ್ಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತರು ಸೋಮವಾರ ಇಲ್ಲಿನ ಕೋರ್ಟ್‌ನ ಇಮೇಲ್ ಐ.ಡಿ.ಗೆ ಕಳಿಸಿದ ಹುಸಿ ಬಾಂಬ್ ಬೆದರಿಕೆ ಸಂದೇಶ ಆತಂಕದ ಪರಿಸ್ಥಿತಿ ಸೃಷ್ಟಿಸಿತು. ಇದರಿಂದಾಗಿ ಕೋರ್ಟ್ ಕಲಾಪ ಅರ್ಧ ದಿನ ಸ್ಥಗಿತಗೊಂಡಿತು.

ಕೋರ್ಟ್‌ನಲ್ಲಿ 12 ಆರ್‌ಡಿಎಕ್ಸ್ ಬಾಂಬ್‌ ಇಟ್ಟಿರುವುದಾಗಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಂದ ಇಮೇಲ್ ಗಮನಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ, ವಿಷಯವನ್ನು ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರು.

ತಕ್ಷಣ ಅಲರ್ಟ್ ಆದ‌ ಪೊಲೀಸರು ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ಕಕ್ಷಿದಾರರು ಹಾಗೂ ಸಾರ್ವಜನಿಕರನ್ನು ಹೊರಕ್ಕೆ ಕಳಿಸಿ ವಾಹನಗಳನ್ನು ತೆರವುಗೊಳಿಸಿದರು. ಅಷ್ಟೊತ್ತಿಗೆ ಬಾಂಬ್ ಪತ್ತೆ ದಳ ಮತ್ತು ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಬಂದರು.

ADVERTISEMENT

ಭಯದಿಂದ ಹೊರಟರು: ಬಾಂಬ್ ಬೆದರಿಕೆಯ ಇಮೇಲ್ ಬೆನ್ನಲ್ಲೇ, ಪೊಲೀಸರು ಕೋರ್ಟ್ ಒಳಗೆ ಮತ್ತು ಹೊರಗೆ ಇರುವವರನ್ನು ಹೊರ ಹೋಗುವಂತೆ ಸೂಚನೆ ನೀಡಿದರು. ಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಹೊರಬಂದು ಕಾರು ಏರಿ ಹೊರಟರು.

ವಕೀಲರು, ಕಕ್ಷಿದಾರರು, ನೋಟರಿಗಳು, ಸಾರ್ವಜನಿಕರನ್ನು ಸಹ ಸ್ಥಳದಿಂದ ಪೊಲೀಸರು ಹೊರಕ್ಕೆ ಕಳಿಸಿದರು. ಕೆಲ ಕ್ಷಣಗಳಲ್ಲೇ ಪೊಲೀಸ್ ಬಸ್ ಸೇರಿದಂತೆ ಐದಾರು ವಾಹನಗಳು ಕೋರ್ಟ್‌ ಆವರಣಕ್ಕೆ ಬಂದವು. ಕನಕಪುರ ರಸ್ತೆ ಕಡೆಯ ಇರುವ ಪ್ರವೇಶದ್ವಾರ ಮತ್ತು ಬಿ.ಎಂ. ರಸ್ತೆ ಕಡೆಗಯ ಪ್ರವೇಶ ದ್ವಾರ ಎರಡನ್ನೂ ಪೊಲೀಸರು ಬಂದ್ ಮಾಡಿದರು.

ಎರಡೂವರೆ ತಾಸು ಶೋಧ: ಎರಡೂ ದಳದ ಸಿಬ್ಬಂದಿ ಸತತ ಎರಡೂವರೆಗೆ ತಾಸು ಕೋರ್ಟ್‌ ಒಳಗೆ ಮತ್ತು ಹೊರಗಡೆ ಶೋಧ ಕಾರ್ಯಾಚರಣೆ ನಡೆಸಿದರೂ ಬಾಂಬ್ ಸೇರಿದಂತೆ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಕಡೆಗೆ ಬಾಂಬ್ ಬೆದರಿಕೆ ಇಮೇಲ್‌ ಹುಸಿಯಾಗಿದೆ ಎಂದು ನಿಟ್ಟುಸಿರು ಬಿಟ್ಟರು.

ಮಧ್ಯಾಹ್ನ 3.30ರ ನಂತರ ಸಿಬ್ಬಂದಿ ಮತ್ತು ವಕೀಲರು ಮತ್ತೆ ಕೋರ್ಟ್‌ಗೆ ಬಂದು ತಮ್ಮ ಕೆಲಸ ಕಾರ್ಯವನ್ನು ಮುಂದುವರಿಸಿದರು. ಸ್ಥಳಕ್ಕೆ ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್, ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಪಿ. ರಮೇಶ್, ರಾಮನಗರ ಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ತನ್ವೀರ್ ಹುಸೇನ್, ಐಜೂರಿನ ಜಾರ್ಜ್ ಪ್ರಕಾಶ್ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿದರು.

ಕೇಸ್ ಮುಂದಕ್ಕೆ: ಹುಸಿ ಬಾಂಬ್ ಬೆದರಿಕೆಯಿಂದಾಗಿ ಕೋರ್ಟ್ ಕಲಾಪಗಳು ಸ್ಥಗಿತಗೊಂಡಿದ್ದರಿಂದ ಕೆಲ ಪ್ರಕರಣಗಳ ವಿಚಾರಣೆಯನ್ನು ಮುಂದೂಡಬೇಕಾದ ಅನಿವಾರ್ಯತೆ ಉಂಟಾಯಿತು. ಪ್ರಕರಣದ ಪರವಾಗಿ ವಾದಿಸಲು ಬಂದಿದ್ದ ವಕೀಲರು ಹಾಗೂ ಪ್ರಕರಣದ ಕಕ್ಷಿದಾರರು ಇದರಿಂದಾಗಿ ಬೇಸರಗೊಂಡು ವಾಪಸ್ ಮನೆಯತ್ತ ಹೋದರು.

ಯಾರೋ ಮಾಡಿದ ತಪ್ಪಿನಿಂದಾಗಿ ಇಡೀ ಕೋರ್ಟ್‌ನ ಕೆಲಸ ಕಾರ್ಯಗಳು ಅರ್ಧ ದಿನ ಸ್ಥಗಿತಗೊಂಡವು. ಪ್ರಕರಣದ ವಿಚಾರಣೆಗಾಗಿ ದೂರದ ಊರಿನಿಂದ ಬಂದವರು ಬೇಸರಗೊಂಡರು. ಈ ರೀತಿ ಹುಸಿ ಬಾಂಬ್ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಕೀಲರೊಬ್ಬರು ಒತ್ತಾಯಿಸಿದರು.  

ಕೋರ್ಟ್ ಬರುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಒಳಕ್ಕೆ ಬಿಡಬೇಕು. ಜೊತೆಗೆ ಕೋರ್ಟ್ ಆವರಣದಲ್ಲಿರುವ ಕಟ್ಟಡಗಳಲ್ಲೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಮತ್ತೊಬ್ಬ ವಕೀಲರು ಆಗ್ರಹಿಸಿದರು.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಹೊರಬಂದ ವಕೀಲರು ಹಾಗೂ ಸಾರ್ವಜನಿಕರು
ಕೋರ್ಟ್ ಆವರಣದಲ್ಲಿದ್ದವರನ್ನು ಬೀಡು ಬಿಟ್ಟಿದ್ದ ವಾಹನಗಳು ಹಾಗೂ ಪೊಲೀಸರು
ಸದಾ ವಕೀಲರು ಹಾಗೂ ಕಕ್ಷಿದಾರರರಿಂದ ತುಂಬಿರುತ್ತಿದ್ದ ಕೋರ್ಟ್ ಆವರಣವು ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಬಿಕೋ ಎನ್ನುತ್ತಿತ್ತು
ನೋಟರಿಗಳು ಹಾಗೂ ಸಾರ್ವಜನಿಕರಿಂದ ತುಂಬಿರುತ್ತಿದ್ದ ಜಾಗ ಖಾಲಿಯಾಗಿದ್ದ ದೃಶ್ಯ
ಅಪರಿಚಿತರು ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳಿಸಿ ಆತಂಕದ ವಾತಾವರಣ ಸೃಷ್ಟಿಸಿದ್ದರ ಕುರಿತು ನ್ಯಾಯಾಧೀಶರು ದೂರು ನೀಡಿದ್ದು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು
ಎನ್.ಎಚ್. ರಾಮಚಂದ್ರಯ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ

ಇಮೇಲ್‌ನಲ್ಲಿ ಏನಿದೆ?

‘ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯಲ್ಲಿ 12 ಆರ್‌ಡಿಎಕ್ಸ್ ಬಾಂಬ್‌ಗಳನ್ನು ಇರಿಸಲಾಗಿದೆ. ಮಧ್ಯಾಹ್ನ 12.15ರೊಳಗೆ ಎಲ್ಲರನ್ನೂ ಸ್ಥಳಾಂತರಿಸಿ. ತಮಿಳುನಾಡಿನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯೂಎಸ್) ಮೀಸಲಾತಿ ಅನುಷ್ಠಾನ ತಡೆಯಿರಿ’ ಎಂದು ಅಪರಿಚಿತರು ಇಮೇಲ್‌ನಲ್ಲಿ ಕಳಿಸಿದ್ದ ಸಂದೇಶವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಎಂ.ಎಚ್. ಅಣ್ಣಯ್ಯನವರ ಅವರು ಮಾಧ್ಯಮದವರ ಜೊತೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.