
ರಾಮನಗರ: ಮದ್ಯ ಕುಡಿಯುವಾಗ ನಡೆದ ಜಗಳದಲ್ಲಿ ಕಾರು ಚಾಲಕ ತಿಲಕ್ ಎಂಬುವರಿಗೆ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದ ಇಬ್ಬರನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಸಂತಪುರದ ಎನ್. ಪ್ರಸನ್ನ ಅಲಿಯಾಸ್ ಕುರುಪು ಹಾಗೂ ತಾತಗುಣಿಯ ಸಚಿನ್ ಎಂ. ಬಂಧಿತ ಆರೋಪಿಗಳು.
ತಿಲಕ್ ತನ್ನ ಸ್ನೇಹಿತ ಅನಿಲ್ ಕುಮಾರ್ ಅವರೊಂದಿಗೆ ಡಿ. 1ರಂದು ಕೆಂಗೇರಿ ಹೋಬಳಿಯ ಅಗರದ ಎಸ್.ಜೆ.ಎಸ್ ಫ್ಯಾಕ್ಟರಿ ಬಳಿಯ ಲೇಔಟ್ ಬಳಿ ಮದ್ಯ ಸೇವಿಸಲು ಹೋಗಿದ್ದರು. ಪಕ್ಕದಲ್ಲೇ ಮದ್ಯ ಸೇವಿಸುತ್ತಿದ್ದ ಆರೋಪಿಗಳು ಜೋರಾಗಿ ಕೂಗಾಡುತ್ತಿದ್ದರು. ಅದಕ್ಕೆ ತಿಲಕ್ ಆಕ್ಷೇಪಿಸಿ, ನಿಧಾನವಾಗಿ ಮಾತನಾಡುವಂತೆ ಹೇಳಿದ್ದರು.
ಆಗ ಪ್ರಸನ್ನ, ಸಚಿನ್ ಹಾಗೂ ಇತರರು ತಿಲಕ್ ಜೊತೆ ಜಗಳ ತೆಗೆದರು. ಪ್ರಸನ್ನ ತನ್ನ ಬಳಿ ಇದ್ದ ಚಾಕುವಿನಿಂದ ತಿಲಕ್ ಕುತ್ತಿಗೆಗೆ ಹೊಡೆದು ಕೊಲೆಗೆ ಯತ್ನಿಸಿದ್ದ. ಗಾಯಗೊಂಡ ಅವರನ್ನು ಸ್ನೇಹಿತರು ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯಲ್ಲಿ ತಿಲಕ್ ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ಪ್ರಸನ್ನ ಮತ್ತು ಸಚಿನ್‌ನನ್ನು ಬಂಧಿಸಲಾಯಿತು. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಅನಿಲ್ ಕುಮಾರ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.