
ರಾಮನಗರ: ಕರ್ನಾಟಕ ರಾಜ್ಯ ರೈತ ಸಂಘದ ಬೆಂಗಳೂರು ದಕ್ಷಿಣ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಎಚ್.ಸಿ. ಕೃಷ್ಣಯ್ಯ, ಕಾರ್ಯಾಧ್ಯಕ್ಷರಾಗಿ ಪುಟ್ಟಸ್ವಾಮಿ, ಗೌರವಾಧ್ಯಕ್ಷರಾಗಿ ತಿಮ್ಮೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜು ಆಯ್ಕೆಯಾದರು. ನಗರದ ಎಪಿಎಂಸಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಘಟಕದ ಜಿಲ್ಲೆ ಮತ್ತು ತಾಲ್ಲೂಕು ಘಟಕದ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ. ಮಲ್ಲಯ್ಯ, ‘ಜಿಲ್ಲೆಯಲ್ಲಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಸರ್ವಾಧಿಕಾರಿ ಧೋರಣೆ ಇದೆ. ಪಕ್ಷದ ಪರವಾಗಿರುವವರ ಕೆಲಸಗಳಷ್ಟೇ ಆಗುತ್ತಿವೆ. ಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಬಿಡದಿ ಟೌನ್‌ಶಿಪ್ ವಿರುದ್ಧದ ರೈತರ ಹೋರಾಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಈ ಕುರಿತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸಲು ಸಿದ್ದತೆ ನಡೆಲಾಗುತ್ತಿದೆ’ ಎಂದರು.
‘ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮತ್ತು ಲೋಡ್ ಶೆಡ್ಡಿಂಗ್ ಮಾಡುವ ಕುರಿತು ಮಾತುಗಳು ಕೇಳಿ ಬರುತ್ತಿವೆ. ಇದರ ಹೊರೆ ರೈತರ ಮೇಲೆ ಬೀಳಲಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿ ಕೊಡಬಾರದು. ಹಾಗೇನಾದರೂ ನಡೆದರೆ ರೈತ ಸಂಘ ಬೀದಿಗಿಳಿದು ಹೋರಾಟ ನಡೆಸಲಿದೆ’ ಎಂದು ಎಚ್ಚರಿಕೆ ನೀಡಿದರು.
ಸಂಘದ ಯುವ ಘಟಕದ ಸಂಚಾಲಕ ಚೀಲೂರು ಮುನಿರಾಜು, ‘ನಿಷ್ಕ್ರಿಯವಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ. ನೂತನ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಸಂಘವನ್ನು ತಳಮಟ್ಟದಲ್ಲಿ ಸಂಘಟಿಸಬೇಕು’ ಎಂದು ಸಲಹೆ ನೀಡಿದರು.
ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ‘ಬಿಡದಿಯ ಭೂ ಸ್ವಾಧೀನಕ್ಕೆ ಸ್ಥಳೀಯ ರೈತರ ವಿರೋಧವಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಯೋಜನಾ ಪ್ರದೇಶದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ಬೇನಾಮಿ ಆಸ್ತಿ ವ್ಯವಹಾರದ ಆರೋಪಗಳು ಕೇಳಿ ಬರುತ್ತಿವೆ. ಯೋಜನಾ ಪ್ರದೇಶದಲ್ಲಿನ ಜಮೀನು ಖರೀದಿ ಮತ್ತು ಮಾರಾಟದ ಕುರಿತು ಜಿಲ್ಲಾಡಳಿತ ಶ್ವೇತಪತ್ರ ಹೊರಡಿಸಬೇಕು’ ಎಂದು ದೂರಿದರು.
ಸಂಘದ ಪದಾಧಿಕಾರಿಗಳು ಇದ್ದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ದುಂದುವೆಚ್ಚ ಮಾಡಿ ಕನಕೋತ್ಸವ ರಾಮೋತ್ಸವ ಗಂಗೋತ್ಸವ ಹಾಗೂ ಕೆಂಪೇಗೌಡ ಉತ್ಸವ ಮಾಡಿ ಜನರಿಗೆ ಉಡುಗೊರೆ ಹಂಚಲಾಗುತ್ತಿದೆ– ಕುಮಾರಸ್ವಾಮಿ ಸಲಹೆಗಾರ ಜಯ ಕರ್ನಾಟಕ ಜನಪರ ವೇದಿಕೆ
ನೂನತ ಪದಾಧಿಕಾರಿಗಳು ಜಿಲ್ಲಾ ಕಾರ್ಯದರ್ಶಿಗಳು: ಕುಮಾರ್ ಕಿರಣ್ ಕುಮಾರ್ ನಾರಾಯಣಪ್ಪ ಕೃಷ್ಣಪ್ಪ ಎಚ್. ನಾಗೇಶ್. ಜಿಲ್ಲಾ ಉಪಾಧ್ಯಕ್ಷರು: ಕುಮಾರ್ ರವಿ ಶಿವಲಿಂಗಯ್ಯ ಬುಡಾನ್ ಸಾಬ್ ಬಸವರಾಜು ಜಯಕೃಷ್ಣ. ಸಂಚಾಲಕರು: ಶಿವಸ್ವಾಮಿ ಶಿವಲಿಂಗಯ್ಯ ಮರಿಯಪ್ಪ ಡಿ.ಕೆ. ಲೋಕೇಶ್ ಶಿವಪ್ಪ. ರಾಮನಗರ ತಾಲ್ಲೂಕು ಪದಾಧಿಕಾರಿಗಳು: ಅಧ್ಯಕ್ಷ– ಪಿ. ಕುಮಾರ್ ಉಪಾಧ್ಯಕ್ಷ– ತೇಜಸ್ವಿ ಆರ್.ಆರ್ ನಂಜುಂಡಸ್ವಾಮಿ ಶಿವಲಿಂಗಯ್ಯ ಪ್ರಧಾನ ಕಾರ್ಯದರ್ಶಿ– ಹುಚ್ಚಯ್ಯ ಗೌರವಾಧ್ಯಕ್ಷ– ಚಂದ್ರ ಕಾರ್ಯಾಧ್ಯಕ್ಷ– ಶಿವಲಿಂಗಯ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.