ADVERTISEMENT

ರಾಮನಗರ | ಮೀನುಗಾರಿಕೆ ಇಲಾಖೆಯಲ್ಲಿ ಅವ್ಯವಹಾರ ಆರೋಪ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:43 IST
Last Updated 21 ನವೆಂಬರ್ 2025, 6:43 IST
ಮೀನುಗಾರಿಕೆ ಇಲಾಖೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ರಾಮನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮೀನು ಕೃಷಿಕ ಚರಣ್ ಬಾನಂದೂರು ಅವರು, ಪೂರಕವಾಗಿ ದಾಖಲೆ ಪ್ರದರ್ಶಿಸಿದರು
ಮೀನುಗಾರಿಕೆ ಇಲಾಖೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ರಾಮನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮೀನು ಕೃಷಿಕ ಚರಣ್ ಬಾನಂದೂರು ಅವರು, ಪೂರಕವಾಗಿ ದಾಖಲೆ ಪ್ರದರ್ಶಿಸಿದರು   

ರಾಮನಗರ: ‘ಏತ ನೀರಾವರಿ ಕೆರೆಗಳನ್ನು ಮೀನು ಸಾಕಾಣಿಕೆಗಾಗಿ ಇ– ಟೆಂಡರ್ ಮೂಲಕ ಬಹಿರಂಗ ಹರಾಜು ಮಾಡಿ ಗುತ್ತಿಗೆ ನೀಡಬೇಕು ಎಂಬ ಆದೇಶಕ್ಕೆ ವಿರುದ್ದವಾಗಿ, ಜಿಲ್ಲಾ ಮೀನುಗಾರಿಕೆ ಇಲಾಖೆಯು ನೇರ ಗುತ್ತಿಗೆ ನೀಡಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿದೆ’ ಎಂದು ಮೀನು ಕೃಷಿಕ ಚರಣ್ ಬಾನಂದೂರು ಆರೋಪಿಸಿದರು.

‘ಜಿಲ್ಲೆಯಲ್ಲಿ ನಿಯಮಬಾಹಿರವಾಗಿ 1 ಜಲಾಶಯ ಹಾಗೂ 4 ಕೆರೆಗಳನ್ನು ನೇರ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಭಾಗಿಯಾಗಿರುವ ಇಲಾಖೆಯು ಉಪ ನಿರ್ದೇಶಕ ಶಾಂತಿಪ್ರಿಯ ಹಾಗೂ ರಾಮನಗರ ಮತ್ತು ಮಾಗಡಿಯ ಸಹಾಯಕ ನಿರ್ದೇಶಕರು ಭಾಗಿಯಾಗಿದ್ದಾರೆ’ ಎಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘40 ಎಕರೆಗಿಂತ ಹೆಚ್ಚು ವಿಸ್ತೀರ್ಣವಿರುವ 200 ಕೆರೆಗಳು ಜಿಲ್ಲೆಯಲ್ಲಿವೆ. ಈ ಪೈಕಿ 59 ಕೆರೆಗಳನ್ನು ಏತ ನೀರಾವರಿ ಮೂಲಕ ತುಂಬಿಸಲಾಗುತ್ತಿದೆ.  ಈ ಪೈಕಿ ಮಂಚನಬೆಲೆ ಜಲಾಶಯ ಮತ್ತು ಹಾರೋಹಳ್ಳಿಯ ಮಾವತ್ತೂರು, ಚಿಲುಕನ ಕೆರೆ, ದೊಡ್ಡಾಲಹಳ್ಳಿ ಕೆರೆ, ಮಾಗಡಿ ತಾಲೂಕಿನ ವೈ.ಜಿ. ಗುಡ್ಡ ಕೆರೆಯನ್ನು ನೇರ ಗುತ್ತಿಗೆ ನೀಡಲಾಗಿದೆ’ ಎಂದರು.

ADVERTISEMENT

‘ಚನ್ನಪಟ್ಟಣ ತಾಲ್ಲೂಕಿನ 30 ಕೆರೆಗಳನ್ನು ಮೂರು ವರ್ಷಗಳಿಂದ ಹರಾಜು ಮಾಡದೆ ಹಾಗೆಯೇ ಉಳಿಸುವ ಮೂಲ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಇದಕ್ಕೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರೇ ನೇರ ಹೊಣೆ. ಇಲಾಖೆಯಲ್ಲಿ ಅವ್ಯವಹಾರ ತಾಂಡವಾಡುತ್ತಿದೆ. ವಾಹನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆ ಸರಿಯಾಗಿಲ್ಲ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಅಧಿಕಾರಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಎಲ್ಲಾ ಅವ್ಯವಹಾರಗಳ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಲಾಗುವುದು. ಮೇಲಧಿಕಾರಿಗಳು ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಆರೋಪಕ್ಕೆ ಪೂರಕವಾಗಿ ಚರಣ್ ಅವರು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು. ಸುದ್ದಿಗೋಷ್ಠಿಯಲ್ಲಿ ಮೀನು ಕೃಷಿಕರಾದ ರಾಜಶೇಖರ್, ಸುನಿಲ್, ಹರೀಶ್ ಹಾಗೂ ಮಹೇಶ್ ಇದ್ದರು.

ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಕೆರೆಗಳ ಗುತ್ತಿಗೆ ಸೇರಿದಂತೆ ಎಲ್ಲಾ ಕೆಲಸ–ಕಾರ್ಯಗಳೂ ನಿಯಮಾನುಸಾರವೇ ನಡೆದಿವೆ. ಇಲಾಖೆ ವಿರುದ್ಧ ಕೇಳಿ ಬಂದಿರುವ ಆರೋಪ ಸತ್ಯಕ್ಕೆ ದೂರವಾದುದು
ಶಾಂತಿಪ್ರಿಯ ಎಚ್.ಡಿ ಉಪ ನಿರ್ದೇಶಕ ಮೀನುಗಾರಿಕೆ ಇಲಾಖೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.