ADVERTISEMENT

ಹಾರೋಹಳ್ಳಿ ತಾಲ್ಲೂಕು: ಕಾರ್ಯಾರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 4:47 IST
Last Updated 27 ಜೂನ್ 2022, 4:47 IST

ರಾಮನಗರ: ನೂತನ ತಾಲ್ಲೂಕಾಗಿ ಘೋಷಣೆ ಆಗಿರುವ ಹಾರೋಹಳ್ಳಿಯಲ್ಲಿ ಸರ್ಕಾರಿ ಕಚೇರಿಗಳ ಆರಂಭ ಸೇರಿದಂತೆ ತಾಲ್ಲೂಕು ಕೇಂದ್ರದ ಚಟುಚಟಿಕೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ತುರ್ತು ಹಾರೋಹಳ್ಳಿ ತಾಲ್ಲೂಕು ರಚನೆ ಮತ್ತು ಕಸಾಯಿಖಾನೆ ತೆರವು ಪೋಷಕರ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಅವರಿಗೆ ಮನವಿ ಸಲ್ಲಿಸಲಾಯಿತಿ.

ಬಿಡದಿಯಲ್ಲಿ ಭಾನುವಾರ ಸಚಿವರನ್ನು ಭೇಟಿ ಮಾಡಿದ ಸಮಿತಿ ಸದಸ್ಯರು, ತಾಲ್ಲೂಕು ರಚನೆ ಘೋಷಣೆಯಾಗಿ ಅಷ್ಟೇ ಉಳಿದಿದೆ. ಮರಳವಾಡಿ, ಹಾರೋಹಳ್ಳಿ ಸೇರಿದಂತೆ ಕೆಲವು ಭಾಗಗಳನ್ನ ಸೇರಿಸಿ ಸರ್ಕಾರ ತಾಲ್ಲೂಕು ಕೇಂದ್ರದ ಘೋಷಣೆ ಮಾಡಿತ್ತು. ಆದರೆ ಈವರೆಗೂ ಯಾವುದೇ ರೀತಿಯ ಆಡಳಿತಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾರೋಹಳ್ಳಿ ಜೊತೆಯಲ್ಲಿ ಘೋಷಣೆ ಮಾಡಿರುವ ರಾಜ್ಯದ ಹಲವು ಹೊಸ ತಾಲ್ಲೂಕುಗಳು ಈಗಾಗಲೇ ಕಾರ್ಯಾರಂಭ ಮಾಡುತ್ತಿದ್ದು ಅಧಿಕೃತ ತಾಲ್ಲೂಕುಗಳಾಗಿವೆ. ಹಾರೋಹಳ್ಳಿ ತಾಲ್ಲೂಕು ಕೇಂದ್ರವೆಂದು ಘೋಷಣೆಯಾಗಿ 3 ವರ್ಷ ಕಳೆದರೂ ಸಹ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ. ಸ್ಥಳೀಯ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಂಡು ಕೂಡಲೇ ತಾಲ್ಲೂಕು ಕೇಂದ್ರಕ್ಕೆ ಬೇಕಾದ ಅದೇಶಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಮಿತಿಯ ಅಧ್ಯಕ್ಷ ಗೌತಮ್ ಗೌಡ, ಗೌರವಾಧ್ಯಕ್ಷ ಕೆ.ಎನ್. ರಾಮು, ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್.ಮುರಳೀಧರ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.