ರಾಮನಗರ: ಮನುಕುಲವನ್ನು ಮಾರಣಾಂತಿಕವಾಗಿ ಕಾಡುತ್ತಿರುವ ರೋಗಗಳಲ್ಲಿ ಎಚ್‌ಐವಿ ಏಡ್ಸ್ ಸಹ ಒಂದು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ 19 ವರ್ಷದಲ್ಲಿ 4,095 ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 1,306 ಮಂದಿ ಸಾವು –ಬದುಕಿನ ನಡುವೆ ಹೋರಾಡಿ ಜೀವ ತೆತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 2,789 ಎಚ್ಐವಿ ಸೋಂಕಿತರಿದ್ದು, ಜೀವ ಉಳಿಸಿಕೊಳ್ಳಲು ರೋಗದೊಂದಿಗೆ ಹೋರಾಡುತ್ತಿದ್ದಾರೆ. ಈ ಪೈಕಿ ವಿವಿಧ ವಯೋಮಾನದ 64 ಮಕ್ಕಳು ಹಾಗೂ 7 ಗರ್ಭಿಣಿಯರು ಸಹ ಇದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 104 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನ ಪ್ರಮಾಣ ಶೇ 0.17ರಷ್ಟಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕವು ಕಳೆದ 19 ವರ್ಷಗಳಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 9.41 ಲಕ್ಷ ಜನರಿಗೆ ಎಚ್ಐವಿ ಪರೀಕ್ಷೆ ನಡೆಸಿದೆ. ಕಳೆದ ಮೂರು ವರ್ಷಗಳಲ್ಲಿ 2.45 ಲಕ್ಷ ಜನರು ಪರೀಕ್ಷೆಗೆ ಒಳಗಾಗಿದ್ದಾರೆ. ಇದರಲ್ಲಿ 435 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, 425 ಜನರು ಎಆರ್‌ಟಿ (ಆಂಟಿರೆಟ್ರೋವೈರಲ್ ಥೆರಪಿ) ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಚ್ಐವಿ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕದ್ದು 9ನೇ ಸ್ಥಾನ. 2011ರಿಂದ ಎಚ್‌ಐವಿ ಸೋಂಕು ಹಾಗೂ ಅದರಿಂದ ಸಂಭವಿಸುವ ಸಾವನ್ನು ಶೂನ್ಯಕ್ಕಿಳಿಸುವ ಸಂಕಲ್ಪದೊಂದಿಗೆ ಆರೋಗ್ಯ ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಲದ ವಿಶ್ವ ಏಡ್ಸ್ ದಿನದ ಘೋಷ ವಾಕ್ಯ, ‘ಎಚ್ಐವಿ–ಏಡ್ಸ್ ಹರಡುವಿಕೆ ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ’ ಎಂಬುದಾಗಿದೆ.
ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತರ ರಕ್ತದ ಸಂಪರ್ಕ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಧಾರಣೆ ಸೇರಿದಂತೆ ವಿವಿಧ ರೀತಿಯಲ್ಲಿ ಈ ರೋಗ ಹರಡುತ್ತದೆ. ಈ ರೋಗದ ಸಾವು–ನೋವು ಕುರಿತು ಅರಿವು ಮೂಡಿಸುವುದಕ್ಕಾಗಿ ವಿಶ್ವಸಂಸ್ಥೆಯು 1998ರಿಂದ ಡಿ. 1ನೇ ದಿನವನ್ನು ವಿಶ್ವ ಏಡ್ಸ್ ದಿನ ಎಂದು ಘೋಷಿಸಿದೆ.
‘ಕಳೆದ 19 ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ 2008–09ರಲ್ಲಿ 435 (ಶೇ 2.67 ಪ್ರಮಾಣ) ಹಾಗೂ 2009–10ರಲ್ಲಿ 423 (ಶೇ 1.94 ಪ್ರಮಾಣ) ಸೋಂಕಿತರಿದ್ದರು. ನಂತರ, ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಾ ಬಂದಿದೆ. 2013ರ ನಂತರ ಸೋಂಕಿತರ ಸಂಖ್ಯೆ 200ರ ಗಡಿ ದಾಟಿಲ್ಲ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಶಶಿಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘2013–14ರಿಂದ ಸೋಂಕಿನ ಪ್ರಮಾಣವೂ ಒಂದಂಕಿ ದಾಟಿಲ್ಲ. ಇದು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿರುವುದನ್ನು ಸೂಚಿಸುತ್ತದೆ. ಎಚ್ಐವಿ ಬಗ್ಗೆ ಏಡ್ಸ್ ನಿಯಂತ್ರಣ ಘಟಕವು ಸರ್ಕಾರೇತರ ಸಂಘ–ಸಂಸ್ಥೆಗಳನ್ನು ಒಳಗೊಂಡು ಶಾಲಾ–ಕಾಲೇಜು, ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧಡೆ ನಿರಂತರಾಗಿ ಜಾಗೃತಿ ಮೂಡಿಸುತ್ತಾ ಬರುತ್ತಿದೆ’ ಎಂದು ಹೇಳಿದರು.
‘ಸೋಂಕಿತರಿಗೆ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಏಡ್ಸ್ ಕುರಿತು ಉಚಿತ ಮಾಹಿತಿ, ರಕ್ತ ಪರೀಕ್ಷಾ ಕೇಂದ್ರ ಹಾಗೂ ಆಪ್ತ ಸಮಾಲೋಚನೆ ಸೌಲಭ್ಯ ಕಲ್ಪಿಸಲಾಗಿದೆ. ಲೈಂಗಿಕ ಸೋಂಕುಗಳ ಕುರಿತು ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಸೌಲಭ್ಯಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಡಿಸಿಆರ್‌ಇ ಕೇಂದ್ರ ಆರಂಭಿಸಲಾಗಿದೆ’ ಎಂದು ತಿಳಿಸಿದರು.
‘ಜಿಲ್ಲಾಸ್ಪತ್ರೆಯಲ್ಲಿರುವ ಆ್ಯಂಟಿ ರೆಟ್ರೊ ವೈರಲ್‌ಥೆರಪಿ (ಎಆರ್‌ಟಿ) ಕೇಂದ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಮಹಿಳಾ ಸೋಂಕಿತರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸಿಗುವ ಧನಶ್ರೀ ಮತ್ತು ಚೇತನಾ ಯೋಜನೆಯಡಿ ಆರ್ಥಿಕ ನೆರವು ಹಾಗೂ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಹಲವು ಸೋಂಕಿತರಿಗೆ ಅವರಿರುವ ಜಾಗಕ್ಕೆ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಎಚ್ಐವಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣವನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ– ಡಾ. ಶಶಿಕಿರಣ್ ಕಾರ್ಯಕ್ರಮಾಧಿಕಾರಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಬೆಂಗಳೂರು ದಕ್ಷಿಣ ಜಿಲ್ಲೆ
‘ಕಳೆದ 19 ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ 2008–09ರಲ್ಲಿ 435 (ಶೇ 2.67 ಪ್ರಮಾಣ) ಹಾಗೂ 2009–10ರಲ್ಲಿ 423 (ಶೇ 1.94 ಪ್ರಮಾಣ) ಸೋಂಕಿತರಿದ್ದರು. ನಂತರ, ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಾ ಬಂದಿದೆ. 2013ರ ನಂತರ ಸೋಂಕಿತರ ಸಂಖ್ಯೆ 200ರ ಗಡಿ ದಾಟಿಲ್ಲ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಶಶಿಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘2013–14ರಿಂದ ಸೋಂಕಿನ ಪ್ರಮಾಣವೂ ಒಂದಂಕಿ ದಾಟಿಲ್ಲ. ಇದು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿರುವುದನ್ನು ಸೂಚಿಸುತ್ತದೆ. ಎಚ್ಐವಿ ಬಗ್ಗೆ ಏಡ್ಸ್ ನಿಯಂತ್ರಣ ಘಟಕವು ಸರ್ಕಾರೇತರ ಸಂಘ–ಸಂಸ್ಥೆಗಳನ್ನು ಒಳಗೊಂಡು ಶಾಲಾ–ಕಾಲೇಜು, ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧಡೆ ನಿರಂತರಾಗಿ ಜಾಗೃತಿ ಮೂಡಿಸುತ್ತಾ ಬರುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.